ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಲ್ಲಿ ಪರಮ ಅಸಹಿಷ್ಣುತೆ: ಸಾಹಿತಿ ಪ್ರೊ.ಎಂ.ಎಸ್‌.ಆಶಾದೇವಿ ವಿಷಾದ

Last Updated 7 ಮೇ 2019, 20:00 IST
ಅಕ್ಷರ ಗಾತ್ರ

ಮೈಸೂರು: ‘ಪರಮ ಅಸಹಿಷ್ಣುತೆಯ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ’ ಎಂದು ಸಾಹಿತಿ ಪ್ರೊ.ಎಂ.ಎಸ್‌.ಆಶಾದೇವಿ ವಿಷಾದ ವ್ಯಕ್ತ‍ಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ‘ಶರಣರ ಜೀವನ ಮೌಲ್ಯಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ಶರಣರು ತಮ್ಮ ವಚನಗಳಲ್ಲಿ ಸಹಿಷ್ಣುತೆಯನ್ನು ಸಾರಿದ್ದಾರೆ. ನಮಗೆ ಇತರರ ವಿಚಾರ ಒಪ್ಪದೇ ಇರಬಹುದು. ಅದನ್ನು ಗೌರವಿಸಲೂ ಸಾಧ್ಯವಾಗದೇ ಇರಬಹುದು. ಆದರೆ, ವಿಚಾರ ಅಭಿವ್ಯಕ್ತಿಸಲು ಅವಕಾಶ ಕೊಡಬೇಕು. ಅದನ್ನು ಕಸಿಯುವ ಹಕ್ಕಿಲ್ಲ ಎಂದು ವಚನಗಳಲ್ಲಿ ಸಾರಿದ್ದಾರೆ. ಆದರೆ, ಈಗಿನ ಸಮಾಜ ಇದಕ್ಕೆ ತದ್ವಿರುದ್ಧವಾಗಿದೆ. ಇತರರ ವಿಚಾರಗಳನ್ನು ಒಪ್ಪುವ ಮನಸ್ಥಿತಿಯೂ ಇಲ್ಲ, ವಿಚಾರಗಳನ್ನು ಮಂಡಿಸಲೂ ಅವಕಾಶ ಕೊಡುತ್ತಿಲ್ಲ’ ಎಂದು ಬೇಸರದಿಂದ ಹೇಳಿದರು.

‘ಬಸವಣ್ಣ ಹಾಗೂ ಅಲ್ಲಮರಿಬ್ಬರೂ ಮಹಿಳೆಯರ ಪರ ನಿಂತರು. ಮಹಿಳೆಯನ್ನು ದಲಿತರಿಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಿರುವುದಾಗಿ ಪುರುಷರಿಗೆ ಬಿಸಿ ಮುಟ್ಟಿಸಿದರು. ಆ ಮೂಲಕ ಪುರುಷರ ವಿರೋಧವನ್ನೂ ಕಟ್ಟಿಕೊಂಡರು’ ಎಂದರು.

ತಮ್ಮ ಜೀವನದುದ್ದಕ್ಕೂ ಮಹಿಳೆಯರ ಪರ ನಿಂತಿದ್ದ ಬಸವಣ್ಣನವರೂ ತಮ್ಮ ವಚನವೊಂದರಲ್ಲಿ ಮಹಿಳೆಯನ್ನು ಟೀಕಿಸಿದ್ದಾರೆ. ‘ಕೂಸುಳ್ಳ ಸೂಳೆ ಧನದಾಸೆಗೊತ್ತೆಗೊಂಡರೆ ಕೂಸಿಂಗಿಲ್ಲ, ಬೊಜಗಂಗಿಲ್ಲ; ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು; ಧನದಾಸೆ ಬಿಡದು ಕೂಡಲಸಂಗಮದೇವ’ ಎಂದಿದ್ದಾರೆ. ಧನದಾಸೆಯಿಂದ ಬಿಡಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಆದರೆ, ಬಸವಣ್ಣ ಸ್ತ್ರೀಪರ ಚಿಂತನೆ ಉಳ್ಳವರಾಗಿದ್ದರು. ಇದೇ ಕಾರಣಕ್ಕಾಗಿ ಅನೇಕ ವಚನಗಾರ್ತಿಯರು ಬಸವಣ್ಣನನ್ನು ಆರಾಧಿಸಿದ್ದಾರೆ. ‘ಜೀವನ ಕೊಟ್ಟ ಬಸವಣ್ಣ’ ಎಂದು ಬಣ್ಣಿಸಿದ್ದಾರೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT