ಶನಿವಾರ, ಜುಲೈ 31, 2021
26 °C
ಜಿಲ್ಲೆಗೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ ಡಿ.ಸಿ

ಆಂಧ್ರ, ತೆಲಂಗಾಣ ಜನಕ್ಕೆ ನಿರ್ಬಂಧ ವಿಧಿಸಿದ ಬಳ್ಳಾರಿ ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೊರೊನಾ ಸೋಂಕು ಹೆಚ್ಚು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಮತ್ತು ತೆಲಂಗಾಣದ ಜನರು ಜಿಲ್ಲೆಯಲ್ಲಿ ಮುಕ್ತವಾಗಿ ಸಂಚರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ.

‘ಜಿಲ್ಲೆಯಲ್ಲಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಂಕಿತರಲ್ಲಿ ಆಂಧ್ರ ಮತ್ತು ತೆಲಂಗಾಣದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಎರಡೂ ರಾಜ್ಯದ ಜನರ ಅಂತರರಾಜ್ಯ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಸೇವಾಸಿಂಧು ಪಾಸ್‌ ಉಳ್ಳವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಸರಕುಸಾಗಣೆ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ’ ಎಂದು ಆದೇಶದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಆಂಧ್ರದ ಆದೋನಿ, ಆಲೂರು, ಕರ್ನೂರು, ಅನಂತಪುರದ ಮೂಲದ ಜನರೂ ಜಿಲ್ಲೆಯಲ್ಲಿ ತಪಾಸಣೆಗೆ ಒಳಗಾದ ಬಳಿಕ ಸೋಂಕು ದೃಢಪಟ್ಟಿದೆ. ಈ ಊರುಗಳಿಂದ ಜಿಲ್ಲೆಗೆ ವಾಪಸಾದ ಹಲವರಿಗೂ ಸೋಂಕು ತಗುಲಿದೆ. ಅವರ ಮೂಲಕ ಸ್ಥಳೀಯ ನಿವಾಸಿಗಳಲ್ಲೂ ಸೋಂಕು ಹಬ್ಬುವ ಭೀತಿಯೂ ಮೂಡಿದೆ.

‘ಪ್ರಸಕ್ತ ಸನ್ನಿವೇಶವನ್ನು ನಿಯಂತ್ರಿಸಲು ಅಂತರರಾಜ್ಯ ಸಂಚಾರವನ್ನು ನಿರ್ಬಂಧಿಸಲೇಬೇಕಾಗಿದೆ. ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿರುವುದರಿಂದ ಆದೇಶ ಹೊರಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ವಾಹನಗಳಿಗೆ ತಡೆ ಇಲ್ಲ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ವಾಹನಗಳ ಸಂಚಾರಕ್ಕೆ ನಿಷೇಧ ಹೇರಿಲ್ಲ. ಆದರೆ ಎರಡೂ ರಾಜ್ಯಗಳ ಜನರ ಜನರ ಪ್ರವೇಶಕ್ಕೆ ತಡೆ ಒಡ್ಡಲಾಗುವುದು. ಇ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು