ಬುಧವಾರ, ಡಿಸೆಂಬರ್ 2, 2020
25 °C
ಇಂದು ಕಾಲೇಜಿಗೆ ಮೊದಲ ಐದು ರ‍್ಯಾಂಕ್‌ಗಳು

ಕೊಟ್ಟೂರು ಇಂದು ಕಾಲೇಜಿನ ವಿದ್ಯಾರ್ಥಿನಿ ಪಂಕ್ಚರ್ ಶಾಪ್ ಕುಸುಮ ರಾಜ್ಯಕ್ಕೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ಸತತ ನಾಲ್ಕು ವರ್ಷದಿಂದ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆಯುತ್ತಿರುವ ಇಲ್ಲಿನ ಇಂದು ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳು ಈ ಬಾರಿಯೂ ಮೊದಲ ಐದು ರ‍್ಯಾಂಕ್ ಗಳಿಸಿದ್ದಾರೆ.

ಪಟ್ಟಣದ ಕುಸುಮ ಉಜ್ಜಿನಿ (594) ಅಂಕ ಗಳಿಸುವ ಮೂಲಕ ಪ್ರಥಮ ರ‍್ಯಾಂಕ್ ಪಡೆದಿದ್ದರೆ, ಹೊಸಮನಿ ಚಂದ್ರಪ್ಪ(591), ನಾಗರಾಜ್(591), ಮತ್ತು ಎಸ್.ಓಮೇಶ (591) ದ್ವೀತಿಯ ರ‍್ಯಾಂಕ್ ಅನ್ನು ಹಂಚಿಕೊಂಡಿದ್ದಾರೆ. ಕೆ.ಜಿ.ಸಚಿನ್, (589) ಹಾಗೂ ಎಚ್.ಸುರೇಶ (589) ತೃತಿಯ ರ‍್ಯಾಂಕ್ ಗಳಿಸಿದ್ದಾರೆ.

ಹರಿಜನ ಸೊಪ್ಪಿನ ಹುಚ್ಚೆಂಗಮ್ಮ(588) ಹಾಗೂ ಕೆ.ಎಂ.ನಂದೀಶ (588) ನಾಲ್ಕನೇ ರ‍್ಯಾಂಕ್ ಹಾಗೂ ಸರಸ್ವತಿ ಅಂಗಡಿ (587) ಐದನೆ ರ‍್ಯಾಂಕ್ ಗಳಿಸಿದ್ದಾರೆ.


ಹೊಸಮನೆ ಚಂದ್ರಪ್ಪ–ದ್ವಿತೀಯ ಸ್ಥಾನ, ನಾಗರಾಜ–ದ್ವಿತೀಯ ಸ್ಥಾನ, ಓಮೇಶ–ದ್ವಿತೀಯ ಸ್ಥಾನ, ಕೆ.ಜಿ.ಸಚಿನ್‌–ತೃತೀಯ ಸ್ಥಾನ(ಮೇಲಿನ ಸಾಲು). ಎಚ್.ಸುರೇಶ–ತೃತೀಯ ಸ್ಥಾನ, ಹುಚ್ಚೆಂಗಮ್ಮ– ನಾಲ್ಕನೇ ಸ್ಥಾನ, ಕೆ.ಎಂ.ನಂದೀಶ–ನಾಲ್ಕನೇ ಸ್ಥಾನ, ಸರಸ್ವತಿ ಅಂಗಡಿ-ಐದನೇ ಸ್ಥಾನ

ಪಂಕ್ಚರ್‌ಶಾಪ್‌ನಿಂದ ಮೇಲೆದ್ದ ಕುಸುಮ

ಪಂಕ್ಚರ್ ಶಾಪ್ ನಡೆಸುತ್ತಿರುವ ಪಟ್ಟಣದ ದೇವೇಂದ್ರಪ್ಪ-–ಜಯಮ್ಮ ದಂಪತಿಯ ಐವರು ಪುತ್ರಿಯರಲ್ಲಿ ಒಬ್ಬರಾದ ಕುಸುಮ ಉಜ್ಜಿನಿ, ತಾನೂ ತಂದೆಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ಓದಿದವರು ಎಂಬುದು ವಿಶೇಷ.

‘ಪ್ರಥಮ ಸ್ಥಾನ ಪಡೆದದ್ದು ಸಂತಸ ತಂದಿದೆ, ಸಮಯದ ಮಿತಿ ಇಲ್ಲದೆ, ಇಷ್ಟವಾದ ವಿಷಯ ಓದುತ್ತಿದ್ದೆ, ಬಿಡುವಿನ ವೇಳೆಯಲ್ಲಿ ಪಂಕ್ಚರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದೆ, ನಮ್ಮ ಗುರುಗಳ ಹಾಗೂ ತಂದೆ ತಾಯಿಯ ಮಾರ್ಗದರ್ಶನದಿಂದ ಸಾಧ್ಯವಾಗಿದೆ’ ಎಂದು ಕುಸುಮ ಸಂತಸ ವ್ಯಕ್ತಪಡಿಸಿದರು.

‘ನಾನಂತೂ ಓದಲಿಲ್ಲ. ಮಕ್ಕಳಾದರೂ ವಿದ್ಯಾವಂತರಗಲಿ ಎನ್ನುವ ಆಸೆಗೆ ನನ್ನ ಮಗಳ ಸಾಧನೆ ಹಾಲೆರೆದಂತಾಗಿದೆ. ನಮಗೆ ಹೆಮ್ಮೆ ತಂದಿದೆ’ ಎಂದು ಆಕೆಯ ತಂದೆ ದೇವೇಂದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.


ಮಗಳು ಕುಸುಮ ಉಜ್ಜಿನಿಗೆ ದೇವೇಂದ್ರಪ್ಪ–ಜಯಮ್ಮ ದಂಪತಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ತಾಲ್ಲೂಕಿನ ಬೇವೂರು ಗ್ರಾಮದ ಕೃಷಿಕ ಕೋಟ್ರಪ್ಪ-–ಸುನಿತಮ್ಮ ದಂಪತಿಯ ಪುತ್ರ ಹೊಸಮನಿ ಚಂದ್ರಪ್ಪ, ‘ನಿತ್ಯ 14-–15 ತಾಸು ಓದಿಕೊಳ್ಳುತ್ತಿದ್ದೆ. ಉನ್ನತ್ತ ವಿದ್ಯಾಭ್ಯಾಸ ಮಾಡುವ ಹಂಬಲವಿದೆ, ಆದರೆ ಮನೆಯ ಅರ್ಥಿಕ ಪರಿಸ್ಥಿತಿ ಸರಿಯಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕುರಿ ಸಾಕಾಣಿಕೆ: ರಾಯಚೂರಿನ ಸಿದ್ದಪ್ಪ ಶಿವಮ್ಮ ದಂಪತಿಯ ಪುತ್ರ ನಾಗರಾಜ, ನಿತ್ಯ 12ರಿಂದ -14 ತಾಸು ಓದಿಕೊಳ್ಳುತ್ತಿದ್ದೆ’ ಎಂದರು. ಅವರು ತಂದೆಯಂತೆ ಕುರಿಸಾಕಣಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಸೋವೆನಹಳ್ಳಿ ಗ್ರಾಮದ ಓಮೇಶ ಅವರ ದೊಡ್ಡಪ್ಪನ ಮಗ ತೀರಿಕೊಂಡಿದ್ದು, ಅವರಲ್ಲಿ ಸಂತಸದ ಬದಲು ದುಃಖ ಮಡುಗಟ್ಟಿತ್ತು,

ನಂದೀಶ ಅವರ ಪೋಷಕರಾದ ಕೆ.ಅಯ್ಯನಹಳ್ಳಿಯ ಕೆ.ಕೊಟ್ರಯ್ಯ–ಕೊಟ್ರಮ್ಮ ದಂಪತಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು