ಶೈಕ್ಷಣಿಕ ಗುಣಮಟ್ಟ ಕುಸಿತ ತಡೆಗೆ ಹೊಸ ಕ್ರಮ

ಸೋಮವಾರ, ಮೇ 27, 2019
24 °C
ಗುಣಾತ್ಮಕ ವಿಶ್ಲೇಷಣೆ ಆಧಾರಿತ ಫಲಿತಾಂಶ, ಶೈಕ್ಷಣಿಕ ಸಮೀಕ್ಷೆ ತಂದ ಆಘಾತ

ಶೈಕ್ಷಣಿಕ ಗುಣಮಟ್ಟ ಕುಸಿತ ತಡೆಗೆ ಹೊಸ ಕ್ರಮ

Published:
Updated:
Prajavani

ಬೆಂಗಳೂರು: ಎಸ್ಸೆಸ್ಸೆಲ್ಸಿ ಹಂತಕ್ಕೆ ಬಂದರೂ ಸಾಕಷ್ಟು ವಿದ್ಯಾರ್ಥಿಗಳಿಗೆ ವ್ಯಾಕರಣ, ವಾಕ್ಯ ರಚನೆ, ಗಣಿತದಲ್ಲಿ ಕೂಡುವುದು, ಕಳೆಯುವುದು ಸೇರಿ ಸರಳ ಸಂಗತಿಗಳೇ ಗೊತ್ತಿರುವುದಿಲ್ಲ. ಈ ಲೋಪ ಸರಿಪಡಿಸಲು ಗುಣಾತ್ಮಕ ವಿಶ್ಲೇಷಣೆ ಆಧರಿಸಿಯೇ ಎಸ್ಸೆಸ್ಸೆಲ್ಸಿ ಫಲಿತಾಂಶ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಜ್ಯದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಕುಸಿದಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಅದಕ್ಕೆ ಕಾಯಕಲ್ಪ ನೀಡಲು ಸಂಕಲ್ಪವನ್ನೂ ಮಾಡಿದ್ದಾರೆ. ಇದರ ಪರಿಣಾಮವಾಗಿ ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ ಗುಣಮಟ್ಟದ ಫಲಿತಾಂಶ (ಕ್ವಾಲಿಟಿ ರಿಸಲ್ಟ್‌) ನೀಡಲಾಗಿದೆ.

ರಾಜ್ಯದಲ್ಲಿ 1 ರಿಂದ 10 ನೇ ತರಗತಿವರೆಗೆ ಅನುತ್ತೀರ್ಣಗೊಳಿಸುವ ವ್ಯವಸ್ಥೆ ಇಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸುವ ಕಟ್ಟುನಿಟ್ಟಿನ ವ್ಯವಸ್ಥೆಯೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಾತ್ಮಕ ಮಟ್ಟ ತೀರಾ ಕುಸಿದಿರುವುದು ಸಮೀಕ್ಷೆಯಿಂದ ಬಯಲಾಗಿದೆ. ಇದು ಅಧಿಕಾರಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಮೀಕ್ಷೆಯ ಮುಖ್ಯಾಂಶಗಳನ್ನು ‘ಪ್ರಜಾವಾಣಿ’ ಇತ್ತೀಚೆಗೆ ಪ್ರಕಟಿಸಿತ್ತು.

‘ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಹಂತದ 45 ಲಕ್ಷ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ, ಗಾಬರಿ ಬೀಳಿಸುವ ಮಾಹಿತಿ ಗಮನಕ್ಕೆ ಬಂದಿತು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಡವಟ್ಟು ಆಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಎಂ.ಟಿ.ರೇಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳ ಕಲಿಕೆ ಮತ್ತು ಬೋಧನೆಯಲ್ಲಿ ಲೋಪ ಇರುವುದು ಕಂಡು ಬಂದಿದೆ. ಆದ್ದರಿಂದ, ಪ್ರತಿಯೊಂದು ಶಾಲೆಯಲ್ಲಿ ನಿರ್ದಿಷ್ಟವಾಗಿ ವಿದ್ಯಾರ್ಥಿಗಳು ಮಾಡುತ್ತಿರುವ ಲೋಪಗಳನ್ನು ಗಮನಿಸಿ ಸರಿಪಡಿಸಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಗಣಿತ ಮಾತ್ರವಲ್ಲದೆ, ಸಮಾಜ, ವಿಜ್ಞಾನ, ಭಾಷಾ ವಿಷಯಗಳಲ್ಲೂ ಇದೇ ಸಮಸ್ಯೆ ಇದೆ’ ಎಂದರು.

‘ಪ್ರಾಥಮಿಕ ಹಂತದಲ್ಲಿ ಲೋಪಗಳನ್ನು ಸರಿಪಡಿಸುವುದರ ಜೊತೆಗೆ ಪ್ರೌಢ ಹಂತದಲ್ಲಿ 8 ರಿಂದ 10 ನೇ ತರಗತಿವರೆಗೆ ನಿರ್ದಿಷ್ಟವಾಗಿ ಶೈಕ್ಷಣಿಕ ಗುಣಮಟ್ಟದ ವಿಶ್ಲೇಷಣೆ ನಡೆಸಲಾಗುವುದು. ಇದರ ಆಧಾರದಲ್ಲಿ ಗುಣಾತ್ಮಕ ಫಲಿತಾಂಶ ನಿರ್ಧರಿಸಲಾಗುವುದು’ ಎಂದು ರೇಜು ವಿವರಿಸಿದರು.

ಉತ್ತೀರ್ಣ ಪ್ರಮಾಣ ಮುಖ್ಯವಲ್ಲ
ಇನ್ನು ಮುಂದೆ ಉತ್ತೀರ್ಣ ಪ್ರಮಾಣವೊಂದೇ ಜಿಲ್ಲೆಗಳ ರ್‍ಯಾಂಕಿಂಗ್‌ಗೆ ಮಾನದಂಡವಾಗುವುದಿಲ್ಲ. ಉತ್ತೀರ್ಣ ಶೇಕಡವಾರು, ಅಂಕಗಳಿಕೆಯ ಸರಾಸರಿ ಮತ್ತು ಗುಣಾತ್ಮಕ ಮೌಲ್ಯಮಾಪನ ಪ್ರಮುಖ ಮಾನದಂಡವಾಗುತ್ತದೆ. ಇದರ ಮೂಲಕ ವಿವಿಧ ಜಿಲ್ಲೆಗಳು ಮತ್ತು ಶಾಲೆಗಳ ಮಧ್ಯೆ ಆರೋಗ್ಯಕರ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪೈಪೋಟಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ರೇಜು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !