ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ರುದ್ರಾವತಾರ: ಕಟಾವಿಗೆ ಬಂದ ಬೆಳೆ ನೀರು ಪಾಲು

Last Updated 22 ಅಕ್ಟೋಬರ್ 2019, 2:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಡೆಬಿಡದೇ ಸುರಿದ ಮಳೆಗೆ ಜಿಲ್ಲೆಯಲ್ಲಿ 180ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಈರುಳ್ಳಿ, ರಾಗಿ ಸೇರಿ ಕಟಾವಿಗೆ ಬಂದ ಬೆಳೆಗಳು ನೀರು ಪಾಲಾಗಿವೆ.

ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಬಹುತೇಕ ಹಳ್ಳಗಳು ತುಂಬಿ ಹರಿದಿವೆ. ಕೆರೆಗಳು ಭರ್ತಿಯಾಗಿದ್ದು, ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ವಾಣಿವಿಲಾಸ ಜಲಾಶಯಕ್ಕೆ 2,500 ಕ್ಯುಸೆಕ್‌ ನೀರು ಹರಿಯುತ್ತಿದೆ.

ಮೆಕ್ಕೆಜೋಳ ಕಾಯಲು ರಾತ್ರಿ ಜಮೀನಿಗೆ ಹೋಗಿದ್ದ ಹೊಸದುರ್ಗ ತಾಲ್ಲೂಕಿನ ದೇವಪುರ ಗ್ರಾಮದ ಕರಿಯಪ್ಪ ಮತ್ತು ಗಂಗಮ್ಮ ಪ್ರವಾಹಕ್ಕೆ ಸಿಲುಕಿದ್ದರು. ಅಗ್ನಿಶಾಮಕ ಸಿಬ್ಬಂದಿ ದೋಣಿ ಮೂಲಕ ಅವರನ್ನು ರಕ್ಷಿಸಿದರು. ಕೋಡಿಹಳ್ಳಿ, ಬೆನಕಹಳ್ಳಿ, ನಾಗತಿಹಳ್ಳಿ ಸೇರಿ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ಸುಡುಗಾಡು ಸಿದ್ದರ ಕಾಲೊನಿ ಸಂಪೂರ್ಣ ಜಲಾವೃತವಾಗಿದೆ. ಚಿನ್ನಸಮುದ್ರ ಗ್ರಾಮದ ಗಂಗಮ್ಮನ ಕೆರೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿದೆ. ಪಾಪೇನಹಳ್ಳಿಯ ಸರ್ಕಾರಿ ಶಾಲೆಜಲಾವೃತಗೊಂಡಿದೆ.ಅರೆಹಳ್ಳಿ ಬಂಡಹಟ್ಟಿ ಗ್ರಾಮದ ಐತಿಹಾಸಿಕ ಹರಿಹರೇಶ್ವರ ಸ್ವಾಮಿ ಹಾಗೂ ವೀರಭದ್ರೇಶ್ವರ ಸ್ವಾಮಿ ದೇಗುಲಕ್ಕೆ ಹಾನಿಯಾಗಿದೆ.

ಕೋಡಿಬಿದ್ದ ಕೆರೆ (ಶಿವಮೊಗ್ಗ ವರದಿ): ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ, ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೆಲವು ಮನೆಗಳು ಕುಸಿದಿದ್ದು, ಕೆರೆಗಳು ಕೋಡಿ ಬಿದ್ದಿವೆ.

ಶಿವಮೊಗ್ಗ ನಗರದ ಹೊಸ ಮಂಡಳಿ ಬಳಿ ತುಂಗಾ ನಾಲೆ ನೀರು ಹಲವು ಬಡಾವಣೆಗಳಿಗೆ ನುಗ್ಗಿದೆ.ಸಾಗರ ತಾಲ್ಲೂಕಿನ ಬಳ್ಳಿಬೈಲಿನ ನಂದಿಹೊಳೆ ಪ್ರವಾಹದಲ್ಲಿ ಸಿಲುಕಿದ್ದ ಹಂದಿಗನೂರು ಗ್ರಾಮದ ನಾಗರತ್ನಾ ಹಾಗೂ ಅವರ ಪುತ್ರ ಮನೋಜ್‌ ಅವರನ್ನು ಭಾನುವಾರ ಸ್ಥಳೀಯರು ರಕ್ಷಿಸಿದ್ದಾರೆ. ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರಿನಲ್ಲಿ ಮನೆಗೆ ನೀರು ನುಗ್ಗಿ 3 ಕ್ವಿಂಟಲ್‌ ಅಡಿಕೆ ನೀರಿನಲ್ಲಿ ಕೊಚ್ಚಿಹೋಗಿದೆ.ಶಿರಾಳಕೊಪ್ಪದಲ್ಲಿ ಬಳ್ಳಿಕಟ್ಟೆ ಕೆರೆ ಒಡೆದಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು

ಹರಿಹರ: ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲಿಗೆ ರೈತ ಜಯಪ್ಪ (45) ಬಲಿಯಾಗಿದ್ದಾರೆ.

ಎಲೆಬಳ್ಳಿ ತೋಟಕ್ಕೆ ಹೋದ ಜಯಪ್ಪ ತಡರಾತ್ರಿವರೆಗೂ ಮನೆಗೆ ಬಾರದಿದ್ದರಿಂದ ಮನೆಯವರು ಹುಡುಕಾಟ ನಡೆಸಿದ್ದರು. ಸಿಡಿಲಿನ ಹೊಡೆತಕ್ಕೆ ಮೃತಪಟ್ಟು ತೋಟದಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT