ಸೋಮವಾರ, ಜೂನ್ 1, 2020
27 °C
ಕರಾವಳಿ, ಮಲೆನಾಡು, ಮೈಸೂರು ಭಾಗದಲ್ಲೂ ಎರಡು ಮೂರು ದಿನದಿಂದ ಮಳೆ

ಕಲ್ಯಾಣ ಕರ್ನಾಟಕ ಸೇರಿ ವಿವಿಧೆಡೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಹಿಂಗಾರು ಹಂಗಾಮಿಗೆ ಸಿದ್ಧತೆ ನಡೆಸಲು ರೈತರು ಮುಂದಾಗಿದ್ದಾರೆ. ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಸೇಡಂ, ಚಿಂಚೋಳಿ, ಕಾಳಗಿ, ಚಿತ್ತಾಪುರ, ಶಹಾಬಾದ್‌ ಹಾಗೂ ಯಡ್ರಾಮಿಯಲ್ಲಿ ಬಿರುಸಿನ ಮಳೆಯಾಯಿತು.

ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ವಿವಿಧೆಡೆಸೋಮವಾರ ತಡರಾತ್ರಿ ಆಲಿಕಲ್ಲು ಮಳೆ ಸುರಿದು ಕೊಯ್ಲು ಹಂತದಲ್ಲಿದ್ದ ನೂರಾರು ಎಕರೆ ಭತ್ತ ಹಾಳಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ಹಿಟ್ನಾಳ ಹೋಬಳಿ, ಹುಲಿಗಿ ಮತ್ತು ಮುನಿರಾಬಾದ್‌  ವ್ಯಾಪ್ತಿಯಲ್ಲಿ ಮಳೆ ಸುರಿಯಿತು. ಹನುಮಸಾಗರದಲ್ಲಿ ಸಿಡಿಲಿಗೆ ಎತ್ತು ಬಲಿಯಾಗಿದೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಕಮಲನಗರದಲ್ಲಿ ಸೋಮವಾರ ತಡರಾತ್ರಿ ಮಳೆಯಾಗಿದೆ. ಔರಾದ್‌ನ ನಾಗೂರು (ಎಂ) ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಸಾವನ್ನಪ್ಪಿದೆ. ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ಹುಣಸಗಿ, ಯರಗೋಳ, ಸೈದಾಪುರ, ವಡಗೇರಾದಲ್ಲಿಯೂ ಜಿಟಿ ಜಿಟಿ ಮಳೆಯಾಗಿದೆ.

ರೈತರಿಗೆ ಹರ್ಷ(ಚಿಕ್ಕಮಗಳೂರು ವರದಿ): ಮಲೆನಾಡು ಭಾಗದ ಕೊಪ್ಪ, ಬಾಳೆಹೊನ್ನೂರು, ಎನ್.ಆರ್.ಪುರ ಭಾಗದಲ್ಲಿ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಉತ್ತಮ ಮಳೆಯಾಗಿದೆ. ರೈತರಲ್ಲಿ ಹರ್ಷ ಮೂಡಿಸಿದೆ.

ಹೆಬ್ರಿಯಲ್ಲಿ ಮಧ್ಯಾಹ್ನ ಅರ್ಧ ಗಂಟೆ, ಉಡುಪಿ, ಪಡುಬಿದ್ರಿ, ಬ್ರಹ್ಮಾವರ ಪ್ರದೇಶಗಳಲ್ಲಿ ಸಂಜೆ ಮಳೆ ಸುರಿದು ತಂಪಾಗಿಸಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಮಂಗಳೂರು ತಾಲ್ಲೂಕಿನ ವಿವಿಧೆಡೆ ಮಳೆ ಸುರಿದಿದೆ.

ಶಿವಮೊಗ್ಗ–ರಸ್ತೆ ಜಲಾವೃತ: ಜಿಲ್ಲೆಯ ಕೆಲವೆಡೆ ಮಂಗಳವಾರ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ರಿಪ್ಪನ್‌ಪೇಟೆ, ಶಿಕಾರಿಪುರ, ಕೋಣಂದೂರು ಕಡೆ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಒಂದು ಎತ್ತು ಮೃತಪಟ್ಟಿದೆ. ಹರಪನಹಳ್ಳಿ ತಾಲ್ಲೂಕಿನ ನಂದಿಬೇವೂರು ತಾಂಡಾ ಬಳಿ ರಸ್ತೆ ಜಲಾವೃತವಾಗಿದೆ.

ಕೊಡಗಿನಲ್ಲಿ ಧಾರಾಕಾರ ಮಳೆ: ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕೆಲವೆಡೆ ಸೋಮವಾರ ರಾತ್ರಿ
ಹಾಗೂ ಮಂಗಳವಾರ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಹುದಿಕೇರಿ, ನಾಪೋಕ್ಲು, ತಲಕಾವೇರಿ, ಭಾಗಮಂಡಲದಲ್ಲೂ ಉತ್ತಮ ಮಳೆಯಾಗಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಂಜೆ ಬಿರುಸಿನ ಮಳೆಯಾಗಿದೆ.

ಸಿಡಿದು ಬಡಿದು ರೈತ ಸಾವು(ಶಿರಾಳಕೊಪ್ಪ ವರದಿ): ಸಮೀಪದ ಕಾಡೇತ್ತಿನಹಳ್ಳಿ ಗ್ರಾಮದ ರೈತ ಕೆರಿಯಪ್ಪ (56) ಮಂಗಳ
ವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈರುಳ್ಳಿಗೆ ಹಾನಿ(ಹುಬ್ಬಳ್ಳಿ ವರದಿ): ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಈರುಳ್ಳಿಗೆ ಹಾನಿಯಾಗಿದೆ.  ತಲಾ 60 ಕೆ.ಜಿಯ ಎರಡು ಸಾವಿರಕ್ಕೂ ಅಧಿಕ ಪಾಕೆಟ್‌ಗಳ ಈರುಳ್ಳಿ ನೀರಿಗೆ ಆಹುತಿಯಾಗಿವೆ.

ಐದು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಏ.8ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಬುಧವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏ.9ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಗುಡುಗು ಸಿಡಿಲು ಹೆಚ್ಚಾಗಿರಲಿದ್ದು, ವೇಗವಾದ ಗಾಳಿ ಬೀಸಲಿದೆ.

ರಾಯಚೂರಿನಲ್ಲಿ ಮಂಗಳವಾರ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮಂಡ್ಯ ಜಿಲ್ಲೆಯ ಬಸರಾಳು, ಯಳಂದೂರು, ಆನೇಕಲ್‍ನಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಶಿರಾಲಿ, ಬೆಂಗಳೂರಿನಲ್ಲಿ ತಲಾ 3, ಕೋಲಾರ, ದೊಡ್ಡಬಳ್ಳಾಪುರ, ಬರಗೂರು, ಕಡೂರು, ಮಾಗಡಿ, ಶ್ರೀರಂಗಪಟ್ಟಣ ತಲಾ 2, ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಶ್ರವಣಬೆಳಗೊಳ, ಪಿರಿಯಾಪಟ್ಟಣ, ಕೊಳ್ಳೇಗಾಲ, ಮಳವಳ್ಳಿ, ಚಾಮರಾಜನಗರ, ನೆಲಮಂಗಲದಲ್ಲಿ ತಲಾ
1 ಸೆಂ.ಮೀ.ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು