ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಚುನಾವಣೆ: ಜೆಡಿಎಸ್‌ ನಾಳೆ, ಬಿಜೆಪಿ ಶನಿವಾರ ಅಭ್ಯರ್ಥಿಗಳ ತೀರ್ಮಾನ

Last Updated 4 ಜೂನ್ 2020, 11:12 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಜೆಡಿಎಸ್‌ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೂ, ಬಿಜೆಪಿ ಶನಿವಾರ ಕೋರ್‌ ಕಮಿಟಿ ಸಭೆಯನ್ನು ನಡೆಸಲಿದೆ.

ಅಭ್ಯರ್ಥಿಗಳ ಆಯ್ಕೆ ಬಹುತೇಕ ನಿರ್ಧಾರವಾಗಲಿದೆ ಎಂದು ಎರಡೂ ಪಕ್ಷಗಳ ಮೂಲಗಳು ಹೇಳಿವೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ರಾಜ್ಯಸಭೆಗೆ ಸ್ಪರ್ಧಿಸುವ ಬಗ್ಗೆ ನಾಳಿನ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ. ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ದೇವೇಗೌಡರು ಮತ್ತೊಮ್ಮೆ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಬೇಕು ಎಂಬುದು ಕುಟುಂಬ ಮತ್ತು ಅವರ ಅಭಿಮಾನಿಗಳ ಒತ್ತಾಯ. ಇದಕ್ಕೆ ದೇವೇಗೌಡರೂ ಸಮ್ಮತಿ ಸೂಚಿಸಿದ್ದಾರೆಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳನ್ನು ವರ್ಗಾಯಿಸುವ ಮೂಲಕ ಸಹಕಾರ ನೀಡಿದರೆ ಮಾತ್ರ ದೇವೇಗೌಡರು ಕಣಕ್ಕೆ ಇಳಿಯಲು ಬಯಸಿದ್ದಾರೆ. ದೇವೇಗೌಡರು ಪ್ರಸ್ತಾಪ ಮುಂದಿಟ್ಟರೆ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗೌಡರಿಗೆ ಅಡ್ಡಗಾಲು ಹಾಕುವುದಿಲ್ಲ ಎಂದಿದ್ದಾರೆ. ಆದರೆ, ಕಾಂಗ್ರೆಸ್‌ನ ಒಂದು ಗುಂಪು ದೇವೇಗೌಡರಿಗೆ ಮಣೆ ಹಾಕುವ ಬಗ್ಗೆ ಪ್ರತಿರೋಧ ತೋರಬಹುದು ಎಂದು ಮೂಲಗಳು ತಿಳಿಸಿವೆ.

ಕತ್ತಿ ಸಹೋದರರ ಹೆಚ್ಚಿದ ಒತ್ತಡ

ರಮೇಶ್ ಕತ್ತಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಅವರ ಸಹೋದರ ಹಾಗೂ ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಿರಂತರ ಒತ್ತಡ ಹೇರುತ್ತಲೇ ಇದ್ದಾರೆ.

ಬುಧವಾರ ಬೆಳಿಗ್ಗೆ ಉಮೇಶ ಕತ್ತಿ ಈ ವಿಷಯ ಪ್ರಸ್ತಾಪಿಸಿದ್ದರು. ಆದರೆ, ಯಡಿಯೂರಪ್ಪ ಯಾವುದೇ ಭರವಸೆ ನೀಡಿರಲಿಲ್ಲ. ಉಮೇಶ ಕತ್ತಿ ಪುನಃ ಗುರುವಾರ ಬೆಳಿಗ್ಗೆ ರಮೇಶ್ ಅವರನ್ನು ಕರೆದುಕೊಂಡು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು. ಬಿಜೆಪಿಯಲ್ಲಿ ಇನ್ನೂ ಹಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಅವುಗಳೆಂದರೆ, ಮಾಜಿ ಶಾಸಕ ನಿರ್ಮಲ್‌ ಕುಮಾರ್ ಸುರಾನ, ತೇಜಸ್ವಿನಿ ಅನಂತಕುಮಾರ್, ಐಸಿಐಸಿ ಬ್ಯಾಂಕಿನ ಮಾಜಿ ಮುಖ್ಯಸ್ಥ ಕೆ.ವಿ.ಕಾಮತ್‌, ಪ್ರೊ.ಎಂ.ನಾಗರಾಜ್. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆ ಇನ್ನೊಂದು ಅವಧಿಗೂ ಅವಕಾಶ ಕೇಳಿದ್ದಾರೆ.

ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ಐವರು ಸದಸ್ಯರ ನಾಮಕರಣದ ಬಗ್ಗೆ ಚರ್ಚೆ ನಡೆಸಲು ಶನಿವಾರ ಬಿಜೆಪಿ ಪ್ರಮುಖರ ಸಭೆ ಕರೆಯಲಾಗಿದೆ. ಇದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ದೆಹಲಿಯಲ್ಲಿರುವ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಮತ್ತು ಡಿ.ವಿ.ಸದಾನಂದಗೌಡ ಅವರು ವೆಬ್‌ನೆರ್‌ ಮೂಲಕ(ವರ್ಚುವಲ್) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರಿಲ್ಲದೆ ಆಕಾಂಕ್ಷಿಗಳಿಗೆ ಪೀಕಲಾಟ

ವಿಧಾನಪರಿಷತ್ತಿಗೆ ಐವರ ನಾಮಕರಣ ಮತ್ತು ವಿಧಾನಸಭೆಯಿಂದ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬೇಕೆಂಬ ಆಕಾಂಕ್ಷೆ ಹೊಂದಿರುವವರಿಗೆ ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರ‌ ಭೇಟಿಗೆ ಸಾಧ್ಯವಾಗದೇ ನಿರಾಶರಾಗಿದ್ದಾರೆ. ನಳಿನ್‌ ಸದಾ ಮಂಗಳೂರಿನಲ್ಲೇ ಇರುವುದರಿಂದ ಪಕ್ಷದ ಕಚೇರಿಯಲ್ಲಿ ಯಾವುದೇ ಚಟುವಟಿಕೆ ನಡೆಯದೇ ಬಿಕೋ ಎನ್ನುತ್ತಿದೆ. ಆಕಾಂಕ್ಷಿಗಳು ನಿತ್ಯವೂ ಪಕ್ಷದ ಕಚೇರಿಗೆ ಬಂದು ನಿರಾಶೆಯಿಂದ ಹಿಂದಕ್ಕೆ ಹೋಗುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್‌ ನಿಯಂತ್ರಣ, ಇಲಾಖೆಗಳ ಪ್ರಗತಿ ಪರಿಶೀಲನೆಯಲ್ಲಿ ತೊಡಗಿರುವುದರಿಂದ ಪರಿಷತ್‌ ಟಿಕೆಟ್‌ ಆಕಾಂಕ್ಷಿಗಳು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಮಾಳವಿಕಾ ಅವಿನಾಶ್‌, ತಾರಾ, ಶೃತಿ, ಭಾರತಿ ಶೆಟ್ಟಿ ಮೇಲ್ಮನೆಗೆ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ರಾಜ್ಯಸಭೆಯ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುದ್ದ ಹನುಮೇಗೌಡ, ಬಿ.ಕೆ.ಹರಿಪ್ರಸಾದ್‌, ರಾಜೀವ್‌ಗೌಡ, ವಿ.ಎಸ್.ಉಗ್ರಪ್ಪ ಆಕಾಂಕ್ಷಿಗಳಾಗಿದ್ದಾರೆ. ಅಂತಿಮವಾಗಿ ಅಭ್ಯರ್ಥಿಯನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT