ಬುಧವಾರ, ಜನವರಿ 22, 2020
19 °C

ರಾಜ್ಯಸಭೆಗೆ ರಾಮಮೂರ್ತಿ ಮರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಗುರುವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಇತರ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ಸೂಚಕರಿಲ್ಲದೆ ತಿರಸ್ಕೃತಗೊಂಡಿದ್ದವು. ನಾಮಪತ್ರ ವಾಪಸ್‌ಗೆ ಗುರುವಾರ ಕೊನೆಯ ದಿನವಾಗಿತ್ತು. ರಾಮಮೂರ್ತಿ ಅವರೊಬ್ಬರೇ ಕಣದಲ್ಲಿ ಉಳಿದಿದ್ದರಿಂದ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಿಸಿದರು.

ವಿಧಾನಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಕಾಂಗ್ರೆಸ್, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಹಾಗಾಗಿ ಅವಿರೋಧ ಆಯ್ಕೆಗೆ ದಾರಿ ಸುಗಮವಾಗಿತ್ತು.

ಇದನ್ನೂ ಓದಿ: ರಾಜ್ಯಸಭೆ, ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಸಿ.ರಾಮಮೂರ್ತಿ

2016ರಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದ ಕೆ.ಸಿ.ರಾಮಮೂರ್ತಿ ಈಚೆಗೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ಎದುರಾಗಿತ್ತು. ಪಕ್ಷಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದ ಅವರು ನಂತರ ಬಿಜೆಪಿಗೆ ಸೇರಿದ್ದರು. ಬಿಜೆಪಿ ವರಿಷ್ಠರು ಮತ್ತೆ ಅವರನ್ನೇ ಕಣಕ್ಕಿಳಿದಿದ್ದರು. ಇವರ ಅಧಿಕಾರ ಅವಧಿ 2022 ಜೂನ್ 30ರವರೆಗೆ ಇರುತ್ತದೆ.

‘ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಬಿಜೆಪಿ ಸೇರಿದೆ. ಈ ಮೊದಲು ಬಿಜೆಪಿ ಸ್ನೇಹಿತರ ಜತೆಗೆ ಒಡನಾಟ ಚೆನ್ನಾಗಿತ್ತು. ಇನ್ನು ಮುಂದೆ ಅವರ ಜತೆಯಲ್ಲಿ ಸೇರಿ ಅಭಿವೃದ್ಧಿ ಕೆಲಸ ಮಾಡುತ್ತೇನೆ’ ಎಂದರು.

‘ಪಕ್ಷ ಬಿಡುವಾಗ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಬೇಕು ಎಂದೇನಿಲ್ಲ. ಈಗ ಅವರಿಗೆ ಎಲ್ಲವೂ ಗೊತ್ತಾಗಿರುತ್ತದೆ’ ಎಂದು ಕುಟುಕಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಮಮೂರ್ತಿ ಅವರನ್ನು ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು