ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಠಳ್ಳಿಗೆ ಅನ್ಯಾಯವಾದರೆ ರಾಜೀನಾಮೆ: ರಮೇಶ ಎಚ್ಚರಿಕೆ

ಹೊಸ ಷರತ್ತು ಮಂಡಿಸಿದ
Last Updated 22 ಫೆಬ್ರುವರಿ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು/ಬೆಳಗಾವಿ: ‘ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸದೇ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ’ ಎಂದು ಹೇಳಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಅಧಿಕಾರ ಹಿಡಿದು ತಿಂಗಳು ಕಳೆಯುವ ಮುನ್ನವೇ ತಕರಾರು ತೆಗೆದಿದ್ದಾರೆ.

ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಗುಂಪುಗಾರಿಕೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಜಾರಕಿಹೊಳಿ ಹೇಳಿಕೆ‍ಪಕ್ಷದ ನಾಯಕರ ತಲೆನೋವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳೂ ಆರಂಭವಾಗಿವೆ.

ಸಚಿವ ಸ್ಥಾನದ ಆಕಾಂಕ್ಷಿಗಳು ಸಚಿವ ಜಗದೀಶ ಶೆಟ್ಟರ್‌ ಅವರ ಮನೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದರು. ಆಗ ಬಹಳಷ್ಟು ಶಾಸಕರು ಮೂಲ ಬಿಜೆಪಿಯವರಿಗೆ ಸಂಪುಟದಲ್ಲಿ ನ್ಯಾಯ ಸಿಕ್ಕಿಲ್ಲ ಎಂಬ ಆಕ್ರೋಶವನ್ನು ಹೊರಹಾಕಿದ್ದರು. ಆದರೆ ಬಿಜೆಪಿಗೆ ವಲಸೆ ಬಂದಿರುವ ಜಾರಕಿಹೊಳಿ ತಮ್ಮ ಜತೆ ಬಂದಿರುವ ಕುಮಠಳ್ಳಿ ಪರ ಸಚಿವ ಸ್ಥಾನಕ್ಕಾಗಿ ಒತ್ತಡದ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬೆಳಗಾವಿಯಲ್ಲಿ ಶನಿವಾರ ಮಾತನಾಡಿದ ಜಾರಕಿಹೊಳಿ, ‘ಕುಮಠಳ್ಳಿಯಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಅವರಿಗೆ ಅನ್ಯಾಯ ಮಾಡಲ್ಲ. ಅನ್ಯಾಯ ಆಗಿದೆ ಅಂತ ಅವರಿಗೆ ಅನಿಸಿದರೆ, ಅದನ್ನು ಹೇಳಿದರೆ ಕೂಡಲೇ ನನ್ನ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ’ ಎಂದರು.

‘ಅವರಿಗೂ ಸಚಿವ ಸ್ಥಾನ ಸಿಗಬೇಕಿತ್ತು. ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಸಿಗುವ ಸಾಧ್ಯತೆ ಇದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕುಮಠಳ್ಳಿ, ‘ಬಿಜೆಪಿಯಲ್ಲಿ ನನಗೆ ಅನ್ಯಾಯವಾಗುವುದಿಲ್ಲ ಎಂಬ ವಿಶ್ವಾಸವಿದೆ. ಮುಂದೆ ಸಚಿವ ಸ್ಥಾನ ಸಿಗುವವರೆಗೆ ಬೇರೊಂದು ರೀತಿಯಲ್ಲಿ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅದೇ ಪ್ರಕಾರ ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನವನ್ನೂ ನೀಡಿದ್ದರು. ಮೂಲತಃ ನಾನು ಎಂಜಿನಿಯರ್‌ ಆಗಿರುವುದರಿಂದ ಭೂಸೇನಾ ನಿಗಮವನ್ನು ಕೇಳಿದ್ದೇನೆ’ ಎಂದು ಅವರು
ಹೇಳಿದರು.

ಹೇಳಿಕೆಗಳ ಮೇಲೆ ಸರ್ಕಾರ ನಿಂತಿಲ್ಲ: ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ತಾವು ರಾಜೀನಾಮೆ ನೀಡುವುದಾಗಿ ಸಚಿವ ಜಾರಕಿಹೊಳಿ ಹೇಳಿಕೆ ಕುರಿತು ಮಾಹಿತಿ ಇಲ್ಲ. ಕುಮಠಳ್ಳಿ ಅವರನ್ನು ಬಿಜೆಪಿಗೆ ಕರೆತಂದವರು ರಮೇಶ, ಹೀಗಾಗಿ ಹಾಗೆ ಹೇಳಿರುವುದು ಸಹಜ.ಸರ್ಕಾರದ ಭದ್ರತೆ ಹಾಗೂ ಅಭದ್ರತೆ ಯಾರ ಹೇಳಿಕೆಗಳ ಮೇಲೂ ನಿಂತಿಲ್ಲ’ ಎಂದು ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

ವರಿಷ್ಠರ ಭೇಟಿಗೆ ಶಾಸಕರು ಸಜ್ಜು?
ಸಚಿವ ಸ್ಥಾನಕ್ಕಾಗಿ ಮತ್ತೊಂದು ಸುತ್ತಿನ ಲಾಬಿ ನಡೆಸಲು ಅಣಿಯಾಗಿರುವ ಕೆಲವು ಶಾಸಕರು ಇದೇ 26 ರಂದು ದೆಹಲಿಗೆ ತೆರಳಿ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

‘ದೆಹಲಿಗೆ ಹೋಗಿದ್ದಶಾಸಕ ಉಮೇಶ ಕತ್ತಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು, ಗೃಹ ಸಚಿವ ಅಮಿತ್ ಶಾ, ಪಕ್ಷದ
ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ, ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದ್ದರು. ಈಗ ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT