ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿದ ಬಿಜೆಪಿ ಅಭ್ಯರ್ಥಿ

ಡಿಕೆಶಿ ಮನೆಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ
Last Updated 1 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎರಡು ದಿನ ಮಾತ್ರ ಬಾಕಿ ಇರುವಂತೆಯೇ ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್, ಮಾತೃಪಕ್ಷದ ‘ಕೈ’ ಹಿಡಿದು ಬಿಜೆಪಿಗೆ ಶಾಕ್‌ ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಭ್ರಮನಿರಸನಗೊಂಡಿರುವುದಾಗಿ ಹೇಳಿ ಕಮಲ ಪಕ್ಷ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದ, ಚಂದ್ರಶೇಖರ್‌ ಅವರನ್ನು ಕಣದಿಂದಲೇ ನಿವೃತ್ತಿಗೊಳಿಸುವಲ್ಲಿ ಸಹೋದರರಾದ ಸಚಿವ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಯಶಸ್ವಿಯಾಗಿದ್ದಾರೆ. ಅಲ್ಲದೆ, ಮೈತ್ರಿಕೂಟಕ್ಕೆ ಸಡ್ಡು ಹೊಡೆಯುವ ಬಿಜೆಪಿ ತಂತ್ರಗಾರಿಕೆಗೂ ಈ ಮೂಲಕ ತಿರುಗೇಟು ನೀಡಿದ್ದಾರೆ.

ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದ ಕಾರಣ ವಿಧಾನಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್ ಅವರನ್ನು ಸೆಳೆದು ಜಿದ್ದಾಜಿದ್ದಿನ ಪೈಪೋಟಿ ನೀಡುವ ಕನಸುಕಂಡಿದ್ದ ಬಿಜೆಪಿಯ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಟಿಕೆಟ್ ಆಕಾಂಕ್ಷಿ ಪಕ್ಷ‌ನಿಷ್ಠರನ್ನು ಕಡೆಗಣಿಸಿದ ಆ ಪಕ್ಷದ ಹಿರಿಯ ನಾಯಕರು ಮುಖಭಂಗ ಅನುಭವಿಸುವಂತಾಗಿದೆ.

ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ರಾಮನಗರ ಕಾಂಗ್ರೆಸ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ತಳಮಟ್ಟದ ಅನೇಕ ಕಾರ್ಯಕರ್ತರು ತಟಸ್ಥರಾಗಿ ಉಳಿದಿದ್ದರು.ಅಲ್ಲದೆ, ಇತ್ತೀಚೆಗೆ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಎಚ್‌.ಡಿ.ದೇವೇಗೌಡ ವಿರುದ್ಧವೇ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದ್ದರು.

ಈ ಬೆಳವಣಿಗೆ ನಿರೀಕ್ಷಿಸದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಸಹೋದರರು ಸ್ಪರ್ಧೆ ತೀರಾ ಬಿಗಿಯಾಗುತ್ತಿರುವುದನ್ನು ಗಮನಿಸಿ, ಪ್ರತಿಸ್ಪರ್ಧಿಯನ್ನೇ ಕಣದಿಂದ ಹಿಂದೆಸರಿಯುವಂತೆ ತಂತ್ರ ಹೆಣೆದಿದ್ದರು. ಅದು ಫಲ ನೀಡಿದೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಮುಖ್ಯಮಂತ್ರಿಯ ಪತ್ನಿಯನ್ನು ಗೆಲ್ಲಿಸುವುದು ಡಿ.ಕೆ. ಸಹೋದರರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಈ ನಡೆಯ ಹಿಂದೆ, ‘ಭವಿಷ್ಯದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ತಮಗೆ ಸಹಕರಿಸುತ್ತಾರೆ’ ಎಂಬ ಲೆಕ್ಕಾಚಾರವೂ ಇದೆ ಎಂದು ರಾಜಕೀಯ ವಲಯದಲ್ಲಿ
ವಿಶ್ಲೇಷಿಸಲಾಗಿದೆ.

ದಿಢೀರ್‌ ಸುದ್ದಿಗೋಷ್ಠಿ: ಡಿ.ಕೆ. ಶಿವಕುಮಾರ್‌ ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆ ತುರ್ತು ಸುದ್ದಿಗೋಷ್ಠಿ ಕರೆದ ಡಿ.ಕೆ. ಸುರೇಶ್‌, ಪಕ್ಕದಲ್ಲಿ ಚಂದ್ರಶೇಖರ್‌ ಅವರನ್ನು ಕುಳ್ಳಿರಿಸಿಕೊಂಡು ನಿವೃತ್ತಿ ವಿಷಯ ಪ್ರಕಟಿಸಿದರು.

‘ಬಿಜೆಪಿಯವರು ನನ್ನನ್ನು ಕರೆದು ಟಿಕೆಟ್‌ ಕೊಟ್ಟಿದ್ದರು. ಚುನಾವಣೆ ಖರ್ಚು–ವೆಚ್ಚ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದರು. ಈಗ ಯಾವುದೇ ನಾಯಕರು ಕೈಗೆ ಸಿಗುತ್ತಿಲ್ಲ. ಯಡಿಯೂರಪ್ಪ ಬಿಜೆಪಿ ಧ್ವಜ ಕೊಟ್ಟು ಬೀದಿಗೆಬಿಟ್ಟರೇ ಹೊರತು ಪ್ರಚಾರ ಮಾಡಲಿಲ್ಲ. ಆ ಪಕ್ಷದಲ್ಲೇ ಕಚ್ಚಾಟ ಇದೆ. ರಾಮನಗರದ ಬಗ್ಗೆ ಬಿಜೆಪಿ ಅಸಡ್ಡೆ ತೋರಿದೆ’ ಎಂದು ಸ್ಪರ್ಧೆಯಿಂದ ಹಿಂದೆಸರಿದ ಚಂದ್ರಶೇಖರ್‌ ಕಾರಣ ನೀಡಿದರು.

ಪ್ರಚಾರ ಕೈಬಿಟ್ಟ ಕುಮಾರಸ್ವಾಮಿ:ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿ ಪ್ರಕಟಿಸುತ್ತಿದ್ದಂತೆ ಪತ್ನಿ ಅನಿತಾ ಪರ ರಾಮನಗರ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರವನ್ನು ಕುಮಾರಸ್ವಾಮಿ ರದ್ದುಪಡಿಸಿದರು.

ಪಲಾಯನ ಮಾಡಿದ ದ್ರೋಹಿ: ‘ಆಸೆ– ಆಮಿಷಗಳಿಗೆ ಬಲಿಯಾಗಿ ಕೊನೆಕ್ಷಣದಲ್ಲಿ ಕಣದಿಂದ ಪಲಾಯನ ಮಾಡುವ ಮೂಲಕ ಚಂದ್ರಶೇಖರ್ ರಾಮನಗರದ ಜನರಿಗೆ ದ್ರೋಹ ಮಾಡಿದ್ದಾರೆ’ ಎಂದು ರಾಮನಗರ ಉಪಚುನಾವಣೆ ಬಿಜೆಪಿ ‘ಉಸ್ತುವಾರಿ’, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ದ್ರೋಹ ಬಗೆಯುವ ಕಾಂಗ್ರೆಸ್‌ನ ಗುಣ ಚಂದ್ರಶೇಖರ್‌ ಅವರಲ್ಲಿ ರಕ್ತಗತವಾಗಿತ್ತು. ಅವರನ್ನು ರಾಮನಗರದ ಜನತೆ ಮತ್ತು ದೇವರೂ ಕ್ಷಮಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಹೆದರಿ ಹಿಂದೆ ಸರಿದರು: ‘ಶಿವಕುಮಾರ್ ಮತ್ತು ಸುರೇಶ್‌ ಅವರ ಬೆದರಿಕೆಗೆ ಹೆದರಿ ಚುನಾವಣಾ ಕಣದಿಂದ ಚಂದ್ರಶೇಖರ್ ಹಿಂದೆಸರಿದಿದ್ದಾರೆ’ ಎಂದು ರಾಮನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರ‌ ದಿಗ್ಬ್ರಮೆ
ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವುದಕ್ಕೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿಲ್ಲಾ ಕಾರ್ಯಾಲಯದಲ್ಲಿ ಕಾರ್ಯಕರ್ತರು ಸೇರಿದ್ದು, ಪ್ರತಿಕ್ರಿಯೆ ನೀಡಲು‌ ನಿರಾಕರಿಸುತ್ತಿದ್ದಾರೆ. ಪ್ರಚಾರದ ವಾಹನಗಳು ಪಕ್ಷದ ಕಚೇರಿಯ ಮುಂಭಾಗ ನಿಂತಿವೆ.

ಬಿಜೆಪಿಗೆ ಮುಖಭಂಗ; ಡಾ.ಪರಮೇಶ್ಚರ
ತುಮಕೂರು: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದಿರುವುದು ಬಿಜೆಪಿಗೆ ಮುಖಭಂಗವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಪ್ರತಿಕ್ರಿಯಿಸಿದರು.

ಅಭ್ಯರ್ಥಿ ಚಂದ್ರಶೇಖರ್ ಕಣಕ್ಕಿಳಿಯುವಾಗ ಬಿಜೆಪಿ ಮುಖಂಡರು ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದ್ದರಂತೆ. ಈಗ ಯಾರೂ ಬೆನ್ನೆಲುಬಿಗೆ ನಿಂತಿಲ್ಲ ಎಂಬ ಬೇಸರದಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಬಿಜೆಪಿಗೆ, ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಮುಖಭಂಗವಾದಂತಾಗಿದೆ ಎಂದು ಹೇಳಿದರು.

ಉಪ ಚುನಾವಣೆ ಪ್ರಚಾರ ಅಂತ್ಯ

ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಆ ಬೆನ್ನಲ್ಲೆ, ಮತದಾರರಲ್ಲದರು ಕ್ಷೇತ್ರ ಬಿಟ್ಟು ತೆರಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ನ. 3ರಂದು ಉಪ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT