ವೈದ್ಯೆ ಆಗಬೇಕಿದ್ದ ರತ್ನಾ, ಮಾತೆ ಮಹಾದೇವಿಯಾದರು

ಸೋಮವಾರ, ಮಾರ್ಚ್ 18, 2019
31 °C

ವೈದ್ಯೆ ಆಗಬೇಕಿದ್ದ ರತ್ನಾ, ಮಾತೆ ಮಹಾದೇವಿಯಾದರು

Published:
Updated:

ಚಿತ್ರದುರ್ಗ: ವೈದ್ಯೆಯಾಗಿ ಲೌಕಿಕ ಬದುಕಿನ ಕಾಯಿಲೆಗಳಿಗೆ ಮದ್ದು ನೀಡಬೇಕಾಗಿದ್ದ ರತ್ನಾ, ಅಂತರಂಗದ ಕರೆಗೆ ಓಗೊಟ್ಟು ‘ಮಾತೆ’ಯಾಗಿ ಬದಲಾದ ಪರಿಯನ್ನು ಸಾಸಲಹಟ್ಟಿ ಗ್ರಾಮಸ್ಥರು ಬೆರಗಿನಿಂದಲೇ ನೋಡುತ್ತಾರೆ. ಕುಗ್ರಾಮದಲ್ಲಿ ಜನಿಸಿ ಜಗದಗಲ ಹರಿಸಿದ ಅಧ್ಯಾತ್ಮದ ಪ್ರವಾಹದಲ್ಲಿ ನಿತ್ಯವೂ ಮಿಂದೇಳುತ್ತಿದ್ದಾರೆ.

ಜಿಲ್ಲಾ ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ಸಾಸಲಹಟ್ಟಿ ಇವರ ಜನ್ಮಸ್ಥಳ. ಪೂರ್ವಾಶ್ರಮದ ಕೊಂಡಿಯನ್ನು ಮಾತೆ ಹಾಗೇ ಉಳಿಸಿಕೊಂಡಿದ್ದಾರೆ. ಕೆಂಪು ಹೆಂಚಿನ ಮನೆ ಈಗಲೂ ಇದೆ. ಅವರ ಪೂರ್ವಾಶ್ರಮದ ಹೆಸರು ರತ್ನಾ. ಬಸವ ಧರ್ಮ ಪೀಠದ ಶಾಖೆಯೂ ಗ್ರಾಮದಲ್ಲಿದೆ.

ವೈದ್ಯ ಡಾ.ಎಸ್‌.ಆರ್‌.ಬಸಪ್ಪ ಹಾಗೂ ಬಿ.ಗಂಗಮ್ಮ ದಂಪತಿಯ ಪುತ್ರಿಯಾಗಿ 1946ರ ಮಾರ್ಚ್‌ 13ರಂದು ರತ್ನಾ ಜನಿಸಿದರು. ಚುರುಕುಬುದ್ಧಿಯ ಬಾಲಕಿ ಹೊಸದುರ್ಗ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಆದರ್ಶ ವೈದ್ಯರಾಗಿದ್ದ ಬಸಪ್ಪ ಅಪಾರ ದೈವಭಕ್ತರೂ ಆಗಿದ್ದರು. ಪತಿಯಂತೆ ಮಗಳು ವೈದ್ಯಳಾಗಬೇಕು ಎಂಬುದು ಗಂಗಮ್ಮ ಅವರ ಕನಸು. ಚಿಕ್ಕಂದಿನಲ್ಲಿ ತಾಯಿ ಹೇಳಿದ ‘ಕೋಳೂರು ಕೊಡಗೂಸು’ ಕಥೆ ರತ್ನಾ ಅವರನ್ನು ಸನ್ಯಾಸತ್ವದ ಕಡೆ ಸೆಳೆಯಿತು. ದಿನ ಉರುಳಿದಂತೆ ಈ ಹಂಬಲ ಬಲಿತು ಪಕ್ವತೆ ಪಡೆಯಿತು.

ಇದನ್ನೂ ಓದಿ: ಮಾತೆ ಮಹಾದೇವಿ ಇನ್ನಿಲ್ಲ

‘ದಿವ್ಯ–ಭವ್ಯ–ಗಂಭೀರ ವ್ಯಕ್ತಿತ್ವವುಳ್ಳ ಗುರುವನ್ನು ಕರುಣಿಸುವಂತೆ ದೇವರಲ್ಲಿ ಅನವರತ ಮೊರೆ ಇಡುತ್ತಿದ್ದಾಗಲೇ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸದ್ಗುರು ಲಿಂಗಾನಂದ ಸ್ವಾಮೀಜಿ ದರ್ಶನವಾಯಿತು. ಅವರ ಆಶೀರ್ವಚನ ರತ್ನಾ ಅವರನ್ನು ಗಾಢವಾಗಿ ಪ್ರಭಾವಿಸಿತು. ಸದ್ಗುರುವನ್ನು ಗುರುವಾಗಿ ಸ್ವೀಕರಿಸಲು ತೀರ್ಮಾನಿಸಿ, ‘ಇಷ್ಟಲಿಂಗವೇ ದೇವನನ್ನೊಲಿಸುವ ಸಾಧನ’ವೆಂದು ಮನಗಂಡರು. ಪುತ್ರಿಯಲ್ಲಿ ಮೊಳೆತ ದೈವಭಕ್ತಿ ಗಂಗಮ್ಮ ಅವರಿಗೆ ತಿಳಿಯಲೇ ಇಲ್ಲ.

ಬಿ.ಎಸ್‌ಸಿ ಪದವಿ ಪೂರ್ಣಗೊಂಡಾಗ ರತ್ನಾ ಅವರಿಗೆ ಮದುವೆ ಪ್ರಸ್ತಾವ ಎದುರಾಯಿತು. ಅದುವರೆಗೂ ಅವ್ಯಕ್ತವಾಗಿ ಉಳಿದಿದ್ದ ‘ಶರಣ ಸತಿ–ಲಿಂಗ ಪತಿ’ ಭಾವ ಸ್ಫೋಟಿಸಿತು. ಕುಟುಂಬದ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗುವ ಬದಲು ಮನೆ ತೊರೆಯುವ ನಿರ್ಧಾರ ಕೈಗೊಂಡರು. 1965ರ ಆ.19ರ ನಸುಕಿನ 3ಕ್ಕೆ ಲಿಂಗ ಪೂಜೆ ಮಾಡಿದರು. ನಿತ್ಯ ವಾಯುವಿಹಾರಕ್ಕೆ ತೆರಳುವಂತೆ ಅಂದು ಬೆಳಿಗ್ಗೆ 7ಕ್ಕೆ ಮನೆಯಿಂದ ಹೊರಬಿದ್ದರು. ಆದರೆ, ಅವರ ಕೈಚೀಲದಲ್ಲಿ ಎರಡು ಜೊತೆ ಬಟ್ಟೆ, ನಾಲ್ಕು ಪುಸ್ತಕಗಳಿದ್ದವು.

ಖಾವಿ ಧರಿಸಿ ಎಳೆಯ ವಯಸ್ಸಿನಲ್ಲೇ ವೈರಾಗ್ಯದ ಜೀವನಕ್ಕೆ ರತ್ನಾ ಕಾಲಿಡುವುದು ಗಂಗಮ್ಮ ಅವರಿಗೆ ಇಷ್ಟವಿರಲಿಲ್ಲ. ಅವರನ್ನು ಮನೆಗೆ ಮರಳಿ ಕರೆದೊಯ್ಯಲು ಇಡೀ ಕುಟುಂಬವೇ ವಿಶ್ವ ಕಲ್ಯಾಣ ಮಂಟಪಕ್ಕೆ ಧಾವಿಸಿತು. ಮನೆಯವರ ಪ್ರೀತಿಯ ಒತ್ತಾಯಕ್ಕೆ ಮಣಿಯದ ರತ್ನಾ, ಶ್ರೀಶೈಲಕ್ಕೆ ಹೋಗುವ ಎಚ್ಚರಿಕೆಯನ್ನೂ ನೀಡಿದರು. ಮದುವೆ ಮಾಡುವುದಿಲ್ಲವೆಂದು ತಾಯಿ ಮಾತು ಕೊಟ್ಟ ಬಳಿಕವೇ ಮನೆಗೆ ಮರಳಿದರು.

ಹೀಗೆ ಮನೆಗೆ ಮರಳುವ ಮುನ್ನ ಪಡೆದ ಇಷ್ಟಲಿಂಗ ದೀಕ್ಷೆ ಅಧ್ಯಾತ್ಮದ ಬಗೆಗಿನ ಸೆಳೆತವನ್ನು ತೀವ್ರಗೊಳಿಸಿತು. ‘ಎಡಗೈಯಲ್ಲಿ ಇಷ್ಟಲಿಂಗ ಹಿಡಿದು ಶಾಂಭವಿಮುದ್ರೆಯಲ್ಲಿ ಕುಳಿತು ಅನಿಮಿಷ ದೃಷ್ಟಿಯಿಂದ ನೋಡಿ ಚಿತ್ಕಳೆ ತುಂಬುವಾಗ ಅಭಿನವ ಅಕ್ಕಮಹಾದೇವಿ ಗೋಚರಿಸಿದಳು’ ಎಂದು ‘ಚಿನ್ಮೂಲಾದ್ರಿ ಚಿತ್ಕಳೆ’ ಕೃತಿಯಲ್ಲಿ ಸದ್ಗುರು ಉಲ್ಲೇಖಿಸಿದ್ದಾರೆ. ದೀಕ್ಷೆ ಪಡೆದ ಮಾತಾ ಮಹಾದೇವಿ ಸದ್ಗುರು ಪಾಲಿಗೆ ತಾಯಿ ಸ್ವರೂಪಿಯಾಗಿ ಗೋಚರಿಸುತ್ತಾರೆ. ದೀಕ್ಷೆ ಕೈಂಕರ್ಯ ಪೂರ್ಣಗೊಂಡ ಬಳಿಕ ಮಹಾದೇವಿ ಅವರ ಪಾದಪೂಜೆ ಮಾಡಿ ಪಾದೋದಕ ಸ್ವೀಕರಿಸುತ್ತಾರೆ.

ದೀಕ್ಷೆ ಪಡೆದು ಚಿತ್ರದುರ್ಗಕ್ಕೆ ಮರಳಿದ ಮಾತೆ ಮಹಾದೇವಿ, ಲೇಖನಿ ಹಿಡಿದು ವಚನ ರಚನೆಯಲ್ಲಿ ತೊಡಗಿದರು. ಆರಂಭದಲ್ಲಿ ಇವು ‘ಮಾತೃವಾಣಿ’ ಹೆಸರಿನಲ್ಲಿ ಖ್ಯಾತಿ ಗಳಿಸಿದವು. ‘ಮಾತೃವಾಣಿ’ ಓದಿದ ಅನೇಕರು ಮಹಾದೇವಿ ದರ್ಶನಕ್ಕೆ ಹಂಬಲಿಸತೊಡಗಿದರು. ಇದು ಮತ್ತೆ ಅವರನ್ನು ಮನೆ ತೊರೆಯುವಂತೆ ಮಾಡಿತು. ಮೈಸೂರಿನ ವೀರನಗೆರೆಯಲ್ಲಿ ನೀಡಿದ ಪ್ರವಚನ ಆಲಿಸಲು ಸಹಸ್ರಾರು ಭಕ್ತರು ಸೇರಿದ್ದರು. ಅಂದಿನಿಂದ ಜೀವನವನ್ನು ಸಂಪೂರ್ಣವಾಗಿ ಅಧ್ಯಾತ್ಮಕ್ಕೆ ಮುಡಿಪಾಗಿಟ್ಟರು.

ಮಾತೆ ಗಂಗಾದೇವಿ ಉತ್ತರಾಧಿಕಾರಿ
ಕೂಡಲಸಂಗಮ: ಬಸವ ಧರ್ಮ ಪೀಠದ ಉತ್ತರಾಧಿಕಾರಿಯಾಗಿ ಮಾತೆ ಗಂಗಾದೇವಿ ಕಾರ್ಯನಿರ್ವಹಿಸಲಿದ್ದಾರೆ. 2017ರ ಜನವರಿ 13ರಂದು ಕೂಡಲ ಸಂಗಮದಲ್ಲಿ ನಡೆದ ಶರಣಮೇಳದಲ್ಲಿ ಮಾತೆ ಮಹಾದೇವಿ ಅವರು ಗಂಗಾದೇವಿ ಹೆಸರನ್ನು ಘೋಷಿಸಿದ್ದರು.


ಮಾತೆ ಗಂಗಾದೇವಿ

ಗಂಗಾದೇವಿ, ಬೀದರ್‌ ಜಿಲ್ಲೆ ಚಟ್ನಳ್ಳಿಯ ಮಾಣಿಕ್ಯಪ್ಪ ಬೆಣ್ಣೆ ಹಾಗೂ ಭಾಗೀರಥಿ ದಂಪತಿಯ ಪುತ್ರಿ. 1979ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಲಿಂಗಾನಂದ ಸ್ವಾಮೀಜಿ ಅವರಿಂದ ಜಂಗಮ ದೀಕ್ಷೆ ಪಡೆದಿದ್ದಾರೆ.

ಬೆಂಗಳೂರಿನ ವಿಶ್ವಕಲ್ಯಾಣ ಮಿಷನ್ ಉಪಾಧ್ಯಕ್ಷರಾಗಿ, ಬಸವ ಧರ್ಮ ಪೀಠದ ಕೋಶಾಧ್ಯಕ್ಷೆಯಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ ರಾಜ್ಯಗಳಲ್ಲಿ ವಿಶ್ವ ಧರ್ಮ ಪ್ರವಚನ ನೀಡಿದ್ದು, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಎರಡನೇ ಪೀಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ತಂಗಿಯ ನೆನಪಿಸಿಕೊಂಡ ಅಣ್ಣ
‘ಮಾತಾಜಿ ನನಗಿಂತ ಮೂರು ತಿಂಗಳು ದೊಡ್ಡವರು. ಹಳ್ಳಿಯಲ್ಲಿ ಹುಟ್ಟಿದರೂ, ಬೆಳೆದಿದ್ದು ಚಿತ್ರದುರ್ಗದಲ್ಲಿ. ತಂದೆ ವೈದ್ಯರಾಗಿದ್ದರಿಂದ ಊರೂರಿಗೆ ವರ್ಗಾವಣೆ ಆಗುತ್ತಿತ್ತು. ಅದು ಹೇಗೋ ಅವರಿಗೆ ಅಧ್ಯಾತ್ಮದ ಸೆಳೆತ ಉಂಟಾಯಿತು. ಮೂರು ವರ್ಷಗಳ ಹಿಂದೆ ಗಂಗಮ್ಮ ನಿಧನರಾದಾಗ ಗ್ರಾಮಕ್ಕೆ ಬಂದಿದ್ದರು. ಚಿತ್ರದುರ್ಗ ಮಾರ್ಗದಲ್ಲಿ ಸಾಗುವಾಗ ಊರಿಗೆ ಭೇಟಿ ನೀಡುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಸಹೋದರ ಚಂದ್ರಣ್ಣ.

ಶರಣ ಲೋಕದಲ್ಲಿ ಅಂತ್ಯಕ್ರಿಯೆ
ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆಗೆ ಕೂಡಲಸಂಗಮದ ಬಸವಧರ್ಮ ಪೀಠದ ಆಶ್ರಮದ ಶರಣ ಲೋಕದಲ್ಲಿ ಈಗಾಗಲೇ ಸಿದ್ಧತೆ ಆರಂಭವಾಗಿದೆ.


ಕೂಡಲಸಂಗಮದಲ್ಲಿ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳ

24 ವರ್ಷಗಳ ಹಿಂದೆಯೇ ಮಾತೆ ಮಹಾದೇವಿ ತಮ್ಮ ಸಮಾಧಿ ಸ್ಥಳವನ್ನು ಗುರುತಿಸಿದ್ದು, 10x10 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಗೋಲಾಕೃತಿಯ ಸಿಮೆಂಟ್‌ನ ಗದ್ದುಗೆಯನ್ನು ನಿರ್ಮಿಸಲಾಗಿದೆ. ಸಮೀಪದಲ್ಲಿ ಅಕ್ಕಮಹಾದೇವಿ ಪುತ್ಥಳಿ ಇದ್ದು, ಕಲ್ಯಾಣದಲ್ಲಿ ಬಸವಣ್ಣನವರ ಸಮ್ಮುಖದಲ್ಲಿ ನಡೆಯುತ್ತಿರುವ ಅಂತರ್ಜಾತಿ ವಿವಾಹದ ಚಿತ್ರವುಳ್ಳ ದೊಡ್ಡ ಫಲಕವಿದೆ. ಬಸವಧರ್ಮದ ವಿಧಿ– ವಿಧಾನಗಳ ಅನ್ವಯ ಅಂತ್ಯಕ್ರಿಯೆ ನೆರವೇರಲಿದೆ.

ಮಾತಾಜಿ ಸಾವಿನ ಸುದ್ದಿ ತಿಳಿದು ಕೂಡಲಸಂಗಮದ ಆಶ್ರಮದಲ್ಲಿ ನೀರವ ಮೌನ ಆವರಿಸಿದೆ. ಅಲ್ಲಿನ ಶರಣರು, ಸಾಧಕರಲ್ಲಿ ಹೆಚ್ಚಿನವರು ಬೆಂಗಳೂರಿಗೆ ತೆರಳಿದ್ದಾರೆ. ಅಂತ್ಯಕ್ರಿಯೆಗೆ ಬರುವವರ ಆತಿಥ್ಯಕ್ಕಾಗಿ 2 ಲಕ್ಷ ಮಂದಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

600 ಮಂದಿ ಮಠಾಧೀಶರಿಗೆ ವಾಸ್ತವ್ಯಕ್ಕೂ ಸಿದ್ಧತೆ ನಡೆದಿದೆ. ಬೆಳಿಗ್ಗೆ ಉಪಾಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಅನ್ನ– ಸಾಂಬಾರ್, ಪುಲಾವ್‌ ಮಾಡಲಾಗುತ್ತಿದೆ. 50 ಮಂದಿ ಬಾಣಸಿಗರು ಊಟದ ಸಿದ್ಧತೆಯಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಬಸವ ದಳದ ಸಾವಿರ ಸ್ವಯಂ ಸೇವಕರು ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !