ಬುಧವಾರ, ಜುಲೈ 28, 2021
23 °C

ಎಸ್ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಪುನರ್ಮನನ ಕಾರ್ಯಕ್ರಮ: ಸುರೇಶ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಎಸ್ಎಸ್‌ಎಲ್ ಸಿ ಪರೀಕ್ಷೆ ಬರೆಯುವ ಮಕ್ಕಳಿಗಾಗಿ ಜೂನ್ 10ರಿಂದ 20ರವರೆಗೆ ಚಂದನ ವಾಹಿನಿಯ ಮೂಲಕ ಕೊನೆಯ ಸುತ್ತಿನ ಪುನರ್ಮನನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಅವಧಿಯಲ್ಲಿ ಆಯೋಜಿಸಿದ್ದ  ಹಿಂದಿನ ಪುನರ್ಮನನ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದ ಅತಿ ಹೆಚ್ಚಿನ ಸ್ಪಂದನೆ ದೊರೆತಿದೆ. ಅದಕ್ಕೆ ಆ ಅವಧಿಯಲ್ಲಿ ಚಂದನ ವಾಹಿನಿಯ ಟಿಆರ್ ಪಿ ದರ ಹೆಚ್ಚಳವಾಗಿರುವುದೇ ಸಾಕ್ಷಿ ಎಂದರು.

ಎಸ್ಎಸ್‌ಎಲ್ ಸಿ ಪರೀಕ್ಷೆ ವಿಚಾರದಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಹಾಗೂ ಅವರು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತಹ ವಾತಾವರಣ ಸೃಷ್ಟಿಸುವ ಅಂಶಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಆ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಅದಕ್ಕೆ ನ್ಯಾಯಾಲಯ ಸಮ್ಮತಿ ನೀಡುವ ಜೊತೆಗೆ ಕೆಲವು ಸಲಹೆಗಳನ್ನು ನೀಡಿದೆ. ಅವುಗಳನ್ನು ಪಾಲಿಸಲಾಗುವುದು ಎಂದರು.

ಈ ಬಾರಿ ರಾಜ್ಯದಲ್ಲಿ 8.48,213 ಮಕ್ಕಳು ಎಸ್ಎಸ್‌ಎಲ್ ಸಿ ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಪ್ರತಿ ವಿದ್ಯಾರ್ಥಿ ಹಾಗೂ ಡೆಸ್ಕ್ ಗಳ  ನಡುವೆ ಕನಿಷ್ಠ 3.5 ಅಡಿ ಅಂತರ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆ ಮಕ್ಕಳಿಗೆ ತಲಾ ಒಂದೊಂದು ಮಾಸ್ಕ್ (ಮುಖಗವುಸ) ಉಚಿತವಾಗಿ ಮಕ್ಜಳಿಗೆ ನೀಡಲು ಒಪ್ಪಿದೆ. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಎಲ್ಲರ ನೆರವಿನಿಂದ ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ಗಳನ್ನು ಉಚಿತವಾಗಿ ನೀಡಲಾಗುವುದು. ಈ ಮಾಸ್ಕ್ ಗಳನ್ನು ಸ್ವಚ್ಛಗೊಳಿಸಿ ಪುನಃ ಬಳಸಬಹುದು. ಪರೀಕ್ಷಾ ಕೇಂದ್ರಗಳಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನ ಸ್ವಯಂ ಸೇವಕರನ್ನು ನೆರವಿಗೆ ಬಳಸಿಕೊಳ್ಳಲಾಗುವುದು ಎಂದರು.

ಪರೀಕ್ಷಾ ಕೊಠಡಿಗಳನ್ನು ಆರೋಗ್ಯ ಇಲಾಖೆಯ ನೆರವಿನಿಂದ ಎರಡು ದಿನ ಮುಂಚಿತವಾಗಿಯೇ ಸ್ಯಾನಿಟೈಸ್ ಮಾಡಲಾಗುವುದು. ಪರೀಕ್ಷೆ ಅವಧಿಯಲ್ಲಿ ಇಲ್ಲವೇ ಎರಡು ದಿನ ಮೊದಲು ಆ ಪ್ರದೇಶ ಕಂಟೈನ್ ಮೆಂಟ್ ವಲಯವಾಗಿ ಬದಲಾದರೆ ಪರ್ಯಾಯ ಕೇಂದ್ರಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ವಿದ್ಯಾರ್ಥಿ ಹಾಗೂ ಪರೀಕ್ಷಾ ಸಿಬ್ಬಂದಿ ಥರ್ಮಲ್ ಸ್ಕ್ಯಾನರ್ ತಪಾಸಣೆಗೆ ಒಳಪಡಬೇಕು. ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಗುವುದು ಎಂದರು.

ಪರೀಕ್ಷಾ ಕೊಠಡಿಯಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇರುವುದಿಲ್ಲ. ಮಕ್ಕಳೇ ಮನೆಯಿಂದ ಕುದಿಸಿ ಆರಿಸಿದ ನೀರನ್ನು ತರಬೇಕು ಎಂದು ಹೇಳಿದ ಸಚಿವರು, ಅನಾರೋಗ್ಯದ ಕಾರಣ ಯಾವುದೇ ಮಗು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಇಲ್ಲವೇ ಮಕ್ಕಳಿಗೆ ಯಾರಿಗಾದರೂ ಸೋಂಕು ತಗುಲಿ ಪರೀಕ್ಷಾ ಕೇಂದ್ರ ಕಂಟೈನ್ ಮೆಂಟ್ ವಲಯ ಎಂದು ಪರಿಗಣಿತವಾದರೆ ಅಂತಹವರಿಗೆ ಜುಲೈನಲ್ಲಿ ನಡೆಸುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು. ಅವರನ್ನು ಸಾಮಾನ್ಯ ಅಭ್ಯರ್ಥಿಗಳು ಎಂದು ಪರಿಗಣಿಸಲಾಗುವುದು ಹೊರತು ಪುನರಾವರ್ತಿತರೆಂದಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು