ಗುರುವಾರ , ಡಿಸೆಂಬರ್ 5, 2019
20 °C

ಒಳನೋಟ ಪ್ರತಿಕ್ರಿಯೆಗಳು: ಎಚ್ಚರಿಕೆಯಿಂದ ಮೊಬೈಲ್ ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಜಾವಾಣಿ’ ಭಾನುವಾರದಂದು (ನ.17) ‘ಮೊಬೈಲ್ ಎಂಬ ‘ಮಾಣಿಕ್ಯ’ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ‘ಒಳನೋಟ’ ವರದಿಗೆ ಓದುಗರು ಪ್ರತಿಕ್ರಿಯಿಸಿದ್ದಾರೆ. ‘ಹದಿಹರೆಯದ ಮಕ್ಕಳು ಹೆಚ್ಚಾಗಿ ಮೊಬೈಲ್‌ ಮಾಯಾಜಾಲದಲ್ಲಿ ಸಿಲುಕುತ್ತಿದ್ದಾರೆ. ಜನರ ನಡುವೆ ಸಂಬಂಧಗಳ ಅಂತರ ಹೆಚ್ಚಾಗುತ್ತಿದೆ’ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ‌. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ. 

 

‘ಪೋಷಕರು ಎಚ್ಚರ ವಹಿಸಿ’

ಮಕ್ಕಳು ಮೊಬೈಲ್ ಗೀಳಿಗೆ ಸಿಲುಕಿರುವ ಬಗ್ಗೆ ಪೋಷಕರು ಸಂಕಷ್ಟ ತೋಡಿಕೊಳ್ಳುತ್ತಾರೆ. ಅವುಗಳಿಗೆ ಸೂಕ್ತ ಪರಿಹಾರ ಹಾಗೂ ಉತ್ತರ ‘ಪ್ರಜಾವಾಣಿ’ ನೀಡಿದೆ. ಮಕ್ಕಳಿಗೆ ಮೊಬೈಲ್‌ ವ್ಯಸನ ಅಂಟದಂತೆ ಪೋಷಕರು ಎಚ್ಚರ ವಹಿಸಬೇಕು. ವಾರದಲ್ಲಿ ಒಮ್ಮೆಯಾದರೂ ಮೊಬೈಲ್‌ಮುಕ್ತ ದಿನ ನಿಮ್ಮದಾಗಲಿ.

ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

 

ಜನರ ನಡುವೆ ಅಂತರ ಹೆಚ್ಚುತ್ತಿದೆ

ಮೊಬೈಲ್ ಸಾಮಾನ್ಯವಾಗಿ ಹೇಳುವ ಪ್ರಕಾರ ದೂರದ ಜನರನ್ನು ಸಮೀಪಿಸುತ್ತಿದೆ. ಆದರೆ, ನಿಜವಾಗಿ ಹೇಳುವುದಾದರೆ ಜನರನ್ನು ಪರಸ್ಪರ ದೂರ ಮಾಡುತ್ತಿದೆ. ಮುಖಾಮುಖಿ ಮಾತು ಜನರ ಸಂಬಂಧ ಹಾಗೂ ಆತ್ಮೀಯತೆಯನ್ನು ಸದೃಢಗೊಳಿಸುತ್ತಿತ್ತು. ಆದರೆ, ಈಗ ಮೊಬೈಲ್‌ನಲ್ಲೇ ಎಲ್ಲರ ಭೇಟಿ ಮಾಡುವ ದುಸ್ಥಿತಿ ತಲುಪಿದ್ದೇವೆ.

ಸಂಪತ್ ಬೆಟ್ಟಗೆರೆ, ಮೂಡಿಗೆರೆ 

ಇದನ್ನೂ ಓದಿ: ಮೊಬೈಲ್‌ ಎಂಬ 'ಮಾಣಿಕ್ಯ'

ಮುಗ್ಧರ ಹಾದಿ ತಪ್ಪಿಸುತ್ತಿದೆ

ಶಾಲಾ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಬಳಕೆ ಪ್ರಮಾಣ ಹೆಚ್ಚಾಗಿದೆ. ಆ ವಯಸ್ಸಿಗೆ ಶಿಕ್ಷಣದ ಮೇಲಿನ ಆಸಕ್ತಿಗಿಂತ ಮೊಬೈಲ್ ಬಳಕೆಯ ಮೋಹದಲ್ಲಿ ಸಿಲುಕಿದ್ದಾರೆ. ಸರಿ ತಪ್ಪಿನ ಅರಿವಿಲ್ಲದ ಮುಗ್ಧ ಮನಸ್ಸುಗಳು ಅಂತರ್ಜಾಲದಲ್ಲಿ ಒಳ್ಳೆಯ ಮಾಹಿತಿಗಿಂತ ಕೆಟ್ಟ ವಿಚಾರ ತಿಳಿಯುವ ಸಾಧ್ಯತೆ ಇದೆ.

ಶೃತಿ, ಚಿತ್ರದುರ್ಗ

 

ಸಾಮರಸ್ಯ ಜೀವನಕ್ಕೆ ಕಂಟಕ

ಬೆಳೆಯುತ್ತಿರುವ ಮಕ್ಕಳಿಂದ ಮೊಬೈಲ್‌ ಕೊಂಚ ದೂರ ಉಳಿಯಲಿ. ಪ್ರೌಢಾವಸ್ಥೆಗೆ ಬರುವ ಮುನ್ನವೇ ಮೊಬೈಲ್ ಜಾಲದಲ್ಲಿ ಸಿಲುಕುವುದು ಅವರ ಭವಿಷ್ಯಕ್ಕೆ ಕಂಟಕವಾಗಲಿದೆ. ಪೋಷಕರು ಹಾಗೂ ಮಕ್ಕಳ ನಡುವಿನ ಸಾಮರಸ್ಯಕ್ಕೂ ಅಡ್ಡಿಯಾಗಲಿದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು.

‌ವಿಜಯಲಕ್ಷ್ಮಿ, ಕೂಡ್ಲಿಗಿ

 

ಮಿತವಾದ ಬಳಕೆ ಇರಲಿ

ಮೊಬೈಲ್ ಇಂದು ಆರೋಗ್ಯಕರವಾಗಿ ಒಂದೆಡೆ ಜನರ ಒಡನಾಡಿಯಾಗಿದೆ. ಮತ್ತೊಂದೆಡೆ ಮೊಬೈಲ್ ಇದ್ದರೆ ಸಾಕು ಮತ್ತೇನೂ ಬೇಡ ಎನ್ನುವಷ್ಟು ಜನರನ್ನು ತನ್ನ ವಶದಲ್ಲಿ ಇರಿಸಿಕೊಂಡಿದೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಮೊಬೈಲ್‌ ಬಳಸಿ.

ಮಲಿಕ್ ಲಾ‌ ಜಮಾದಾರ, ವಿಜಯಪುರ

 

‘ಸಾಮಾಜಿಕ ಮಾಧ್ಯಮಗಳಿಗೆ ಆದ್ಯತೆ ಬೇಡ’

ತುರ್ತು ಸಂದರ್ಭಗಳಿಗಾಗಿ ಇತರರನ್ನು ಸಂಪರ್ಕಿಸುವ ಉದ್ದೇಶದಿಂದ ಮೊಬೈಲ್ ಜನಿಸಿತು. ಆದರೆ, ಅಸಂಖ್ಯಾತ ಸಾಮಾಜಿಕ ಮಾಧ್ಯಮಗಳಿಂದ ಇಂದು ಜನರಿಗೆ ವ್ಯಕ್ತಿಗಿಂತ ಮೊಬೈಲ್ ಹೆಚ್ಚಿನ ಆದ್ಯತೆ ಪಡೆದುಕೊಂಡಿದೆ. ಹಗಲು ರಾತ್ರಿ ಎನ್ನದೆ ಅದರಲ್ಲೇ ಮುಳುಗುವ ಗೀಳು ದೂರಾಗಲಿ.

ಭೀಮಣ್ಣ, ಬಾಗಲಕೋಟೆ

 

ಜೀವಂತ ಶವ ಆಗುತ್ತಿದ್ದಾರೆ

ಮದ್ಯಪಾನ, ಧೂಮಪಾನಗಳಂತಹ ದುಶ್ಚಟಗಳು ಜನರನ್ನು ಶವ ಮಾಡಿದರೆ, ಈ ಮೊಬೈಲ್ ಆತನನ್ನು ಜೀವಂತ ಶವವನ್ನಾಗಿ ಮಾಡುತ್ತಿದೆ. ಜನರಲ್ಲಿ ಆರೋಗ್ಯಕರ ಮೊಬೈಲ್ ಬಳಕೆ ಬಗ್ಗೆ ಜಾಗೃತಿ ಮೂಡಬೇಕು. ಸಮಾಜದಲ್ಲಿ ಬೇರುಬಿಡುವ ಮುನ್ನವೇ ಅದು ನಿಯಂತ್ರಣವಾಗಲಿ.

ಪ್ರಸನ್ನ ಎಂ.ಮಾವಿನಕುಳಿ , ಸಾಫ್ಟ್‌ವೇರ್‌ ತಂತ್ರಜ್ಞ 

 

ಮೊಬೈಲ್ ವ್ಯಸನದಿಂದ ಸಾವು

ಲಂಡನ್‌ನಲ್ಲಿ ಹತ್ತು ವರ್ಷದೊಳಗಿನ ಸುಮಾರು 2,500ಕ್ಕೂ ಹೆಚ್ಚು ಮಕ್ಕಳು ಮಿದುಳು ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ. ಇದಕ್ಕೆ ಮೊಬೈಲ್‌ ವ್ಯಸನವೇ ಕಾರಣ ಎಂಬ ಅಂಶ ತಿಳಿದು ಬಂದಿದೆ. ಇದರ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ.

ನಾರಾಯಣ ಎಸ್.ಹೊಸ್ಮನೆ, ನಾರ್ತನ್ ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಅಮೆರಿಕ

 

ವರ್ತನೆ ಬದಲಿಸಿದೆ

ಮೊಬೈಲ್‌ ಬಳಕೆಯಿಂದ ಮನೆಗೆ ಬಂದ ಸ್ನೇಹಿತರು ಹಾಗೂ ಬಂಧುಗಳನ್ನು ಮಾತನಾಡಿಸುವ ಕನಿಷ್ಟ ಸೌಜನ್ಯ ನಮ್ಮಲ್ಲಿಲ್ಲ. ಮಕ್ಕಳ ಜೊತೆ ಕಳೆಯಬೇಕಾದ ಸಮಯವನ್ನೂ ಮೊಬೈಲ್‌ ಕಸಿದಿದೆ. ಇದರಿಂದ ಸಂಬಂಧಗಳ ನಡುವೆ ಅಂತರ ಹೆಚ್ಚುತ್ತಿದೆ.

ಎಚ್‌.ಜಿ.ರಾಜೇಶ್‌, ಅಧ್ಯಾಪಕ, ಬೆಂಗಳೂರು

 

ಇನ್ನಷ್ಟು...

ಮೊಬೈಲ್ ವ್ಯಸನ ಮುಕ್ತಿಗೆ ಕ್ಲಿನಿಕ್‌

ಸ್ಕ್ರೀನ್ ಟೈಮ್ ಆ್ಯಪ್ಸ್ ಮಾಹಿತಿ

ಮೊಬೈಲ್‌ ವ್ಯಸನದ ‘ಕಾಯಿಲೆ’ಗಳು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು