ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಮೊಬೈಲ್ ವ್ಯಸನ ಮುಕ್ತಿಗೆ ಕ್ಲಿನಿಕ್‌

Last Updated 16 ನವೆಂಬರ್ 2019, 23:11 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ವ್ಯಸನಕ್ಕೆ ತುತ್ತಾದವರನ್ನು ಮುಕ್ತಗೊಳಿಸಲು ನಿಮ್ಹಾನ್ಸ್‌ ವಿಶೇಷ ಕ್ಲಿನಿಕ್‌ ಆರಂಭಿಸಿದ್ದು. ಇದಕ್ಕೆ SHUT c*inic (Service for Hea*thy use of Techno*ogy) ಎಂದು ಹೆಸರಿಡಲಾಗಿದೆ. ಇಲ್ಲಿ ಮೊಬೈಲ್‌ ಸೇರಿದಂತೆ ಎಲ್ಲ ಬಗೆಯ ತಂತ್ರಜ್ಞಾನಗಳ ವ್ಯಸನಕ್ಕೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಇಂಟರ್‌ನೆಟ್‌ ಬ್ರೌಸಿಂಗ್‌, ಚಾಟಿಂಗ್‌, ಟೆಕ್ಸ್ಟಿಂಗ್‌, ಗೇಮಿಂಗ್‌ ಮುಂತಾದವುಗಳನ್ನು ಗೀಳಾಗಿ ಅದೇ ಜಗತ್ತಿನಲ್ಲಿ ಮುಳುಗಿದವರಿಗೆ ಈ ಚಿಕಿತ್ಸಾ ಕೇಂದ್ರ ಹೊಸ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತದೆ. ಗಂಭೀರ ಮನೋರೋಗ ಹೊಂದಿರುವವರು ಇದ್ದರೆ ಒಳರೋಗಿಗಳನ್ನಾಗಿ ಸೇರಿಸಿಕೊಳ್ಳಲಾಗುತ್ತದೆ. ಈಗ ಯಾವುದೇ ಬಗೆಯ ವ್ಯಸನಿಗಳು ಬಂದರೂ ಅವರೆಲ್ಲರಿಗೂ ಕಡ್ಡಾಯವಾಗಿ ಮೊಬೈಲ್‌ ಅಡಿಕ್ಷನ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಪ್ರೊ.ಮನೋಜ್‌ ಕುಮಾರ್‌ ಶರ್ಮಾ ಈ ಕ್ಲಿನಿಕ್‌ನ ಮುಖ್ಯಸ್ಥರು.

ಸದ್ಯ ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿರುವ ಚಿಕಿತ್ಸಾ ಕೇಂದ್ರಕ್ಕೆರಾಜ್ಯ ಮಾತ್ರವಲ್ಲ, ದೇಶದ ನಾನಾ ಭಾಗಗಳಿಂದಲೂ ಮೊಬೈಲ್ ವ್ಯಸನಿಗಳು ಬರುತ್ತಾರೆ. ದೆಹಲಿ, ಮುಂಬೈ, ಕೋಲ್ಕತ್ತಾ, ಈಶಾನ್ಯ ರಾಜ್ಯದ ಜನರೂ ಬಂದಿದ್ದಾರೆ. ಮೊಬೈಲ್‌ ವ್ಯಸನ ಮುಕ್ತಗೊಳಿಸಲು ಹಲವು ಬಗೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ಮನೋಜ್‌ ಕುಮಾರ್‌.

ಜೀವನದಲ್ಲಿ ಹಿಂದಕ್ಕೆ ಬನ್ನಿ ಮತ್ತು ಉಪವಾಸ ಮಾಡಿ: ಜೀವನದಲ್ಲಿ ಮುಂದಕ್ಕೆ ಬನ್ನಿ, ಆಧುನಿಕತೆ ಅಳವಡಿಸಿಕೊಳ್ಳಿ ಎಂದು ಹೇಳುವುದು ಸಾಮಾನ್ಯ. ಮೊಬೈಲ್‌ ವ್ಯಸನದಿಂದ ಸಮಸ್ಯೆಗೆ ತುತ್ತಾದವರಿಗೆ ವೈದ್ಯರು ನೀಡುವ ಸರಳ ಸಲಹೆ ಎಂದರೆ ಕೊಂಚ ಹಿಂದಕ್ಕೆ ಬನ್ನಿ, ಉಪವಾಸ ಮಾಡಿ. ಇದರಿಂದ ವ್ಯಸನ ಅಂಟಿಕೊಳ್ಳುವುದಿಲ್ಲ.

ನಮ್ಮಲಿ ಒಂದೆರಡು ದಶಕಗಳ ಹಿಂದೆ ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಯೇ ಭಿನ್ನವಾಗಿತ್ತು. ಪರಸ್ಪರ ಮಾತನಾಡುವುದು, ಸಮಯ ಸಿಕ್ಕಾಗ ಹರಟೆ ಹೊಡೆಯುವುದು, ಆಟಗಳನ್ನು ಆಡುವುದು ಅಥವಾ ದೈಹಿಕ ಶ್ರಮದ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಶ್ರಮದಾನ ಇತ್ಯಾದಿಗಳು ಜನರ ಮನಸ್ಸಿನಿಂದ ಮರೆಯಾಗಿ ಹೋಗಿವೆ. ಮೊಬೈಲ್‌ ಮಾಯಾಂಗನೆ ಜಾಲದಿಂದ ಬಿಡಿಸಿಕೊಳ್ಳಬೇಕಾದರೆ, ಹಳೆ ಪದ್ಧತಿಯನ್ನೇ ಆರಂಭಿಸಿ, ಸಾಮಾಜಿಕ– ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎನ್ನುತ್ತಾರೆ ಮನೋವಿಜ್ಞಾನಿಗಳು.

ಹಿಂದೆಲ್ಲ ಹೆಂಗಳೆಯರು ಸೇರಿ ಮನೆಯ ಜಗುಲಿ ಮೇಲೆ ಕುಳಿತು ಸಂಜೆ ವೇಳೆಯಲ್ಲಿ ಹರಟೆ ಹೊಡೆಯುತ್ತಿದ್ದರು. ಈಗ ಮನೆ ಮುಂದಿನ ಜಗುಲಿಗಳು ಖಾಲಿ. ಬೆಳಗ್ಗಿನಿಂದ ರಾತ್ರಿಯವರೆಗೆ ಟಿ.ವಿಗಳಲ್ಲಿ ಧಾರಾವಾಹಿ ನೋಡುವುದರಲ್ಲಿ ಮಹಿಳೆಯರು ಬಿಜಿಯಾಗಿರುತ್ತಾರೆ. ಪರಸ್ಪರ ಕಷ್ಟ–ಸುಖ ಹಂಚಿಕೊಂಡು ಮಾತನಾಡುವ ಪರಂಪರೆಯೇ ನಿಂತು ಹೋಗಿದೆ. ಪುರುಷರೂ ಇದರಲ್ಲಿ ಹಿಂದೆ ಬಿದ್ದಿಲ್ಲ.

ಉಪವಾಸ ಮತ್ತು ಉಪಶಮನ: ಮೊಬೈಲ್‌ ಮತ್ತು ಅಂತರ್ಜಾಲತಾಣದ (ಮೊಬೈಲ್‌ ಫಾಸ್ಟಿಂಗ್‌) ಉಪವಾಸ ವನ್ನು ಪ್ರತಿಯೊಬ್ಬರೂ ಮಾಡಲೇಬೇಕು. ಇದರಿಂದ ವ್ಯಸನಕ್ಕೆ ತುತ್ತಾಗುವುದರಿಂದ ತಪ್ಪಿಸಿಕೊಳ್ಳಬಹುದು. ಇದಕ್ಕಾಗಿ ನಿರ್ದಿಷ್ಟವಾಗಿ ಯೋಜನೆ ರೂಪಿಸಿಕೊಂಡು ವ್ರತದಂತೆ ಪಾಲಿಸಬೇಕು. ಪ್ರತಿ ದಿನ ಒಂದೆರಡು ಗಂಟೆಗಳ ಕಾಲ ಡೆಟಾ ಕಾರ್ಡ್‌ ಆಫ್‌ ಮಾಡಬೇಕು. ಆ ಸಮಯವನ್ನು ಯಾವುದಾದರೂ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ಇದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಕಣ್ಣಿಗೆ ಮತ್ತು ತಲೆಗೆ ವಿಶ್ರಾಂತಿ ಹೇಗೆ?: ಕಂಪ್ಯೂಟರ್‌ ಅಥವಾ ಮೊಬೈಲ್‌ ಬಳಕೆ ಮಾಡುವಾಗ ಅರ್ಧ ಗಂಟೆಗೆ ಕೆಲ ಸೆಕೆಂಡುಗಳ ಕಾಲ ಬಿಡುವು ಕೊಡಬೇಕು. ಆಗ ಹತ್ತು ಬಾರಿ ಕಣ್ಣು ಮಿಟುಕಿಸುವುದರಿಂದ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ. ತಲೆಯನ್ನು ಹಿಂದಕ್ಕೂ ಮುಂದಕ್ಕೂ ಐದು ಬಾರಿ ಆಡಿಸಬೇಕು. ಕತ್ತನ್ನು ನಿಧಾನವಾಗಿ ವೃತ್ತಾಕಾರದಲ್ಲಿ ತಿರುಗಿಸಬೇಕು. ಮುಂಗೈಯನ್ನು ಮೆಲ್ಲಗೆ ವೃತ್ತಾಕಾರದಲ್ಲಿ ತಿರುಗಿಸುವುದರಿಂದ ನೋವು ಕಡಿಮೆ ಆಗುತ್ತದೆ. ನೀರನ್ನು ಯಥೇಚ್ಛವಾಗಿ ಕುಡಿಯಬೇಕು ಎನ್ನುತ್ತಾರೆ ತಜ್ಞರು.

* ಪುರುಷರಷ್ಟೇ ಮಹಿಳೆಯರೂ ವ್ಯಸನಿಗಳು

* ಮೊಬೈಲ್‌ ವ್ಯಸನದಿಂದ ಮುಕ್ತರಾಗಲು ನಿಮ್ಹಾನ್ಸ್‌ಗೆ ಮಹಿಳೆಯರಿಗಿಂತ ಪುರುಷರು ಮತ್ತು ಗಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

* ಮಹಿಳೆಯರೂ ಸಮ ಪ್ರಮಾಣದಲ್ಲಿ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ನಿಮ್ಹಾನ್ಸ್‌ಗೆ ಬಂದರೆ ಜನ ಏನೋ ತಿಳಿದು
ಕೊಳ್ಳುತ್ತಾರೆ ಎಂಬ ಕಾರಣಕ್ಕೆ ಬರುತ್ತಿಲ್ಲ.

* ನಗರ ಮತ್ತು ಗ್ರಾಮಾಂತರ ಪ್ರದೇಶಗಳೆಂಬ ತಾರತಮ್ಯವಿಲ್ಲದೆ ಮೊಬೈಲ್ ವ್ಯಸನ ಸಾರ್ವತ್ರಿಕ ಸಮಸ್ಯೆಯಾಗಿ ವ್ಯಾಪಿಸುತ್ತಿದೆ.

* ಎಲ್ಲ ವಯೋಮಾನದವರೂ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ.

* ವಾರದಲ್ಲಿ 8–9 ಹೊರ ರೋಗಿಗಳು ಬರುತ್ತಾರೆ.

* ಮೊಬೈಲ್‌ ವ್ಯಸನದಿಂದ ವ್ಯಕ್ತಿಯ ಸಂವೇದನೆಗಳಲ್ಲಿ (ಎಮೋಷನ್ಸ್‌) ಗಮನಾರ್ಹ ಬದಲಾವಣೆ ಆಗುತ್ತದೆ.

* 30 ನಿಮಿಷ ನಿರಂತರ ಬಳಕೆ ಮಾಡಿದರೆ, ಕಣ್ಣು ಗುಡ್ಡೆಗಳು ಅದರ ಮೇಲೆ ನೆಟ್ಟಿರುತ್ತವೆ. ಕೊಂಚವೂ ಅಲ್ಲಾಡುವುದಿಲ್ಲ. ಕಣ್ಣು ಮಿಟುಕಿಸುವ ಅವಧಿ ಕಡಿಮೆ ಆಗುತ್ತದೆ. ಕಣ್ಣು ಗುಡ್ಡೆಗಳು ನಿತ್ರಾಣಗೊಳ್ಳುತ್ತವೆ.

* ಹೆಚ್ಚು ಬಳಕೆಯಿಂದ ಕುತ್ತಿಗೆ ನೋವು ಆರಂಭವಾಗುತ್ತದೆ. ಅತಿಯಾಗಿ ಸಂದೇಶಗಳನ್ನು ಟೈಪ್‌ ಮಾಡುವುದು ಮತ್ತು ತಲೆ ತಗ್ಗಿಸಿ ನೋಡುವುದು ನೋವಿಗೆ ಕಾರಣ.

* ರಿಸ್ಟ್‌ ಕಾರ್ಪಲ್‌ ಸಿಂಡ್ರೋಮ್‌; ನಿರಂತರ ಬ್ರೌಸಿಂಗ್‌ನಿಂದ ಮುಂಗೈ ನೋವು ಬರುತ್ತದೆ.

* ಟೆನ್ನಿಸ್‌ ಎಲ್ಬೋ ಸಿಂಡ್ರೋಮ್; ಮೊಬೈಲ್‌ ಕೈಯಲ್ಲೇ ನಿರಂತರ ಹಿಡಿದುಕೊಳ್ಳುವುದರಿಂದ ಮೊಣಕೈ ನೋವು ಬರುತ್ತದೆ.

* ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌; ಇಡೀ ದೇಹದಲ್ಲಿ ಆಯಾಸ ಉಂಟಾಗುತ್ತದೆ, ತಲೆನೋವು ಬರುತ್ತದೆ.

ಮೊಬೈಲ್ ವ್ಯಸನದ ಎಚ್ಚರಿಕೆ ಗಂಟೆ

ಈ ಕೆಳಗಿನ ಸಮಸ್ಯೆಗಳು ಕಂಡು ಬಂದರೆ ಮೊಬೈಲ್‌ ಗೀಳಿಗೆ ಸಿಲುಕಿದ್ದಾರೆ ಎಂಬುದು ಖಚಿತ.

* ನಿದ್ರಾಭಂಗ ಅಥವಾ ನಿದ್ದೆಯ ಸಮಸ್ಯೆ

* ಸಾಮಾಜಿಕ ಮತ್ತು ಕೌಟುಂಬಿಕ ವಲಯದಲ್ಲಿ ಸಮಾಲೋಚನೆ ಕಡಿಮೆ ಆಗುವುದು

* ಆಹಾರ ಸೇವನೆಯಲ್ಲಿ ವ್ಯತ್ಯಾಸ

* ಕಚೇರಿಯಲ್ಲಿ ಕುಸಿತ ಅಥವಾ ಬದಲಾವಣೆ

* ಮೊಬೈಲ್‌ ಬಹಳ ಬಳಸುತ್ತಿದ್ದೀರಿ ಎಂದು ಆಪ್ತರು ಹೇಳುವುದು

ಡಾ. ಮನೋಜ್‌ ಕುಮಾರ್‌ ಶರ್ಮಾ
ಡಾ. ಮನೋಜ್‌ ಕುಮಾರ್‌ ಶರ್ಮಾ

ಕುತೂಹಲಕಾರಿ ಅಂಶಗಳು
* ಒಂದು ದಿನಕ್ಕೆ 60 ರಿಂದ 70 ಬಾರಿ ಮೊಬೈಲ್‌ ಬಳಕೆ ಮಾಡಿದರೆ ಸರಾಸರಿ ಒಂದೂವರೆ ಗಂಟೆ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ.

* ಅರಿವಿನ ಸಾಮರ್ಥ್ಯ (cognitive abi*ity) ಕುಂಠಿತವಾಗುತ್ತದೆ. ಎಲ್ಲದಕ್ಕೂ ಮೊಬೈಲ್‌ ಅನ್ನೇ ಅವಲಂಬಿಸುವುದರಿಂದ ಮನೆಯ ಮತ್ತೊಬ್ಬರ ಮೊಬೈಲ್‌ ಸಂಖ್ಯೆ ಅಥವಾ ಲ್ಯಾಂಡ್‌ ಲೈನ್‌ ಸಂಖ್ಯೆ ಕೂಡ ಸ್ಮರಣೆಯಲ್ಲಿ ಇರುವುದಿಲ್ಲ. ಮಿದುಳಿನಲ್ಲಿ ಆ ಭಾಗವನ್ನು ಬಳಸುವುದೇ ನಿಂತು ಹೋಗುತ್ತದೆ.

* ಏಕಾಂಗಿತನ, ಒತ್ತಡದಿಂದ ಹೊರಬರಲು ಮೊಬೈಲ್‌ಗೆ ಮೊರೆ ಹೋಗುತ್ತೇವೆ ಎನ್ನುವವರ ಸಂಖ್ಯೆ ಸಾಕಷ್ಟಿದೆ.

* ಈಗ ಮಕ್ಕಳು ಸ್ಮಾರ್ಟ್‌ಫೋನ್‌ ಮತ್ತು ವೇಗದ ವೈಫೈ ಸಂಪರ್ಕ ಕೊಡಿಸಿ ಎಂದು ತಂದೆ–ತಾಯಿಗೆ ದುಂಬಾಲು ಬೀಳುವುದು ಹೆಚ್ಚಾಗಿದೆ. ತಂದೆ–ತಾಯಿಯೂ ಬೇಡ ಮೊಬೈಲ್‌ ಒಂದಿದ್ದರೆ ಸಾಕು ಎಂಬ ಮನೋಭಾವ ಮಕ್ಕಳಲ್ಲಿ ಬೆಳೆಯುತ್ತಿದೆ.

* ಮೊಬೈಲ್‌ ಬಳಕೆ ಆರಂಭಿಸಿದರೆ, ಎಷ್ಟು ಹೊತ್ತು ಬಳಕೆ ಮಾಡಬೇಕು ಎಂಬ ಸ್ವಯಂ ನಿಯಂತ್ರಣ ಇರುವುದಿಲ್ಲ. 3 ರಿಂದ 6 ಗಂಟೆಗಳ ಕಾಲ ನಿರಂತರವಾಗಿ ಬಳಸುವವರೂ ಇದ್ದಾರೆ. ಕೆಲವು ಮಕ್ಕಳು ಮೊಬೈಲ್‌ನಲ್ಲಿ 10 ರಿಂದ 12 ಗಂಟೆಗಳ ಕಾಲ ಗೇಮಿಂಗ್‌ನಲ್ಲಿ ತೊಡಗುತ್ತಾರೆ.

ಅಸಹಜ ನಡವಳಿಕೆಗಳು
* ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟವರು ಕದ್ದು ಮುಚ್ಚಿ ಚಾಟ್‌ ಮಾಡುತ್ತಿರುತ್ತಾರೆ. ಮನೆಯವರು ಅಥವಾ ಬೇರೆಯವರು ನೋಡಿ ಬಿಡುತ್ತಾರೆ ಎಂಬ ಭಯ ಅವರನ್ನು ಕಾಡುತ್ತದೆ. ಇದಕ್ಕೆ ಹೆದರಿಸಿ, ಹೊಡೆದು ಬಡಿದು ಬುದ್ಧಿ ಕಲಿಸಲು ಹೋಗುವುದು ಸರಿಯಲ್ಲ. ತಿಳಿವಳಿಕೆ ಮೂಡಿಸಲು ನಿರಂತರ ಪ್ರಯತ್ನಿಸಿ ಸರಿ ದಾರಿಗೆ ತರಬಹುದು.

* ಕೆಲ ವಯಸ್ಕ ಪುರುಷರು ಹೆಚ್ಚಿನ ಒಡನಾಟ ಇಲ್ಲದಿದ್ದರೂ ಮಹಿಳೆಯರಿಗೆ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಇದು ಮಹಿಳೆಯರಿಗೆ ಕಿರಿಕಿರಿ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT