ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್ ಗಾದಿಗೆ ಸಚಿವ ರೇವಣ್ಣ ಕಣ್ಣು

Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನದ ಮೇಲೆ ಸಚಿವ ಎಚ್.ಡಿ.ರೇವಣ್ಣ ಕಣ್ಣಿಟ್ಟಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೊಂದು ಸುತ್ತಿನ ‘ರಾಜಕೀಯ ಸಮರ’ಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಸುಮಾರು ಒಂದೂವರೆ ದಶಕಗಳ ಕಾಲ ಕೆಎಂಎಫ್ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದ್ದು, ಈಗ ಮತ್ತೊಮ್ಮೆ ಆ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಹ ರೇವಣ್ಣ ಬೆಂಬಲಕ್ಕೆ ನಿಂತಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷ ಸ್ಥಾನ ತಮಗೇ ಬೇಕು ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆ ಆಗಿದ್ದಾರೆ. ಜತೆಗೆ ಆಪರೇಷನ್ ಕಮಲದ ಸಮಯದಲ್ಲಿಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವ ಭರವಸೆ ಕೊಡಲಾಗಿದೆ. ಹಾಗಾಗಿ
ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ಪಡೆದುಕೊಳ್ಳಬೇಕು ಎಂಬ ಬೇಡಿಕೆಯೂ ಪಕ್ಷದ ಆಂತರಿಕ ವಲಯದಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಹ ಭೀಮಾನಾಯ್ಕ್ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಭರವಸೆ ಕೊಟ್ಟಿದ್ದಾರೆ. ಬಿಜೆಪಿಗೆ ಹೋಗದೆ ಪಕ್ಷದಲ್ಲೇ ಉಳಿದರೆ ಮುಂದಿನ ದಿನಗಳಲ್ಲಿ ಅಧಿಕಾರ ಸಿಗಲಿದೆ. ಸ್ವಲ್ಪ ದಿನ ಕಾಯುವಂತೆ ಅವರಿಗೆ ಸಲಹೆ ಮಾಡಿದ್ದರು. ಇದರಿಂದ ಅವರು ಪಕ್ಷ ತೊರೆದಿಲ್ಲ. ಈಗ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ವರಿಷ್ಠರು, ಭೀಮಾನಾಯ್ಕ್ ಪರವಾಗಿ ನಿಂತಿರುವುದು ಜೆಡಿಎಸ್ ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಎರಡೂ ಕಡೆಯೂ ಬಿಗಿಪಟ್ಟು ಮುಂದುವರಿದರೆ ಸಮಸ್ಯೆ ಕಗ್ಗಂಟಾಗಲಿದೆ. ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT