ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ ಮಹಾ ಸಮಾವೇಶ: ಭಾಗವತ್‌, ಭಯ್ಯಾಜಿ, ಹೊಸಬಾಳೆ ಭಾಗಿ

ಇದೇ 15 ರಿಂದ ಮೂರು ದಿನ ಸಭೆ
Last Updated 13 ಮಾರ್ಚ್ 2020, 19:57 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅಖಿಲ ಭಾರತೀಯ ಪ್ರತಿನಿಧಿಗಳ ಸಭೆ ಇದೇ 15ರಿಂದ 17ರವರೆಗೆ ನಗರದ ಚನ್ನೇನಹಳ್ಳಿಯಲ್ಲಿನ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಲಿದೆ.

ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್‌, ಸರ ಕಾರ್ಯವಾಹ ಸುರೇಶ ಭಯ್ಯಾಜಿ ಜೋಶಿ, ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಂಘದ ಪ್ರಮುಖರು ಭಾಗಿಯಾಗಲಿದ್ದಾರೆ.ಆರ್‌ಎಸ್‌ಎಸ್‌ನ 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಸಂಘವು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಿರುವ ಚಟುವಟಿಕೆಗಳು, ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ರದ್ದತಿ, ಕೊರೊನಾ ವೈರಸ್‌ ಕುರಿತ ಜಾಗೃತಿ ಸೇರಿದಂತೆ ದೇಶದ ಸಮಕಾಲೀನ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

‘ಕಳೆದ ವರ್ಷ ಕಾರ್ಯಕರ್ತರ ಸಮೀಕ್ಷೆ ನಡೆಸಿರುವ ಆರ್‌ಎಸ್‌ಎಸ್‌, ಈ ಪೈಕಿ 15 ಲಕ್ಷ ಸ್ವಯಂ ಸೇವಕರ ಮಾಹಿತಿ ಸಂಗ್ರಹಿಸಿದೆ. ಸೇವೆಗೆ ಲಭ್ಯವಾಗುವ ಸಮಯ, ಅವರು ಹೊಂದಿರುವ ಕೌಶಲ ಮತ್ತುಆಸಕ್ತಿ ಗಮನಿಸಿ, ಅವರನ್ನುಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸುವ ಯೋಜನೆ ಕುರಿತು ಈ ರಾಷ್ಟ್ರೀಯ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಆರ್‌ಎಸ್‌ಎಸ್‌ ಪ್ರಚಾರಕ ಅರುಣ್‌ಕುಮಾರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈ ಸ್ವಯಂಸೇವಕರಲ್ಲಿ ಕೆಲವರು ವೈದ್ಯರು, ಶಿಕ್ಷಕರು ಹಾಗೂ ಎಂಜಿನಿಯರ್‌ಗಳು ಇದ್ದಾರೆ. ಆಯಾ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ, ಕೊಳೆಗೇರಿ ಅಭಿವೃದ್ಧಿಗೆ ಇಂಥವರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಉಳಿದವರು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿ ನೀಡಿದ್ದಾರೆ. ಅವರ ಸೇವೆಯನ್ನು ಬಳಸಿಕೊಂಡು ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸಲಾಗುವುದು’ ಎಂದು ಅವರು ತಿಳಿಸಿದರು.

‘ರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯ ತೆಗೆದುಕೊಳ್ಳುವ ಪ್ರತಿನಿಧಿಗಳ ಸಭೆ ಇದಾಗಿದೆ’ ಎಂದೂ ಅವರು ಹೇಳಿದರು.

ಮಾ. 14ರಂದು ಅಖಿಲ ಭಾರತೀಯ ಕಾರ್ಯಕಾರಿಣಿಯಲ್ಲಿ ಸಭೆಯ ಕಾರ್ಯಸೂಚಿಯನ್ನು ನಿರ್ಧರಿಸಲಾಗುತ್ತದೆ. 15ರಂದು ಬೆಳಿಗ್ಗೆ 8.30ಕ್ಕೆ ಸಭೆಯು ಉದ್ಘಾಟನೆಯಾಗಲಿದೆ.ಕಳೆದ ವರ್ಷದ ಕಾರ್ಯದ ಅವಲೋಕನ ಮತ್ತು ಬರುವ ವರ್ಷದ ಯೋಜನೆ ಹಾಗೂ ಪ್ರತಿನಿಧಿಗಳ ಪ್ರವಾಸ ಯೋಜನೆಯನ್ನು ಇಲ್ಲಿ ಮಾಡಲಾಗುತ್ತದೆ ಎಂದು ಅರುಣ್‌ಕುಮಾರ್‌ ತಿಳಿಸಿದರು.

ಅಖಿಲ ಭಾರತೀಯ ಸಹ ಪ್ರಚಾರಕ ನರೇಂದ್ರ ಠಾಕೂರ್, ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಹಾಜರಿದ್ದರು.

ಪಾಲ್ಗೊಳ್ಳುವ ಪ್ರಮುಖರು
ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ಜೆ , ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಸುಬ್ಬಯ್ಯ ಷಣ್ಮುಗಂ, ಭಾರತೀಯ ಮಜ್ದೂರ್‌ ಸಂಘದ ಸಾಜಿ ನಾರಾಯಣನ್, ಬಿಜೆ‍‍ಪಿ ಅಧ್ಯಕ್ಷ ಜೆ.ಪಿ. ನಡ್ಡಾ, ವಿದ್ಯಾ ಭಾರತಿಯ ರಾಮಕೃಷ್ಣ ರಾವ್, ವನವಾಸಿ ಕಲ್ಯಾಣ ಆಶ್ರಮದ ಜಗದೇವ್‌ ರಾವ್‌ ಮತ್ತು ಇತರ ಪ್ರತಿನಿಧಿಗಳು.

ಅಂಕಿ–ಅಂಶ

11 -ಕ್ಷೇತ್ರದಿಂದ ಸಂಘದ ಪ್ರತಿನಿಧಿಗಳು

35 -ಸಂಘ ಪರಿವಾರದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT