ಆರ್‌ಟಿಒ: ಇಲ್ಲಿ ನಿಯಮಗಳೇ ಕಾನೂನುಬಾಹಿರ, ಲಂಚವೇ ₹200 ಕೋಟಿ

ಶುಕ್ರವಾರ, ಮಾರ್ಚ್ 22, 2019
24 °C
ಸಾರಿಗೆ ಅಲ್ಲ ಸೋರಿಕೆ: ‘2ಜಿ’ಗಳು ಕೊಟ್ಟ ಪಟ್ಟಿಗೆ ಸಹಿಯಷ್ಟೇ ಸಚಿವರ ಕೆಲಸ

ಆರ್‌ಟಿಒ: ಇಲ್ಲಿ ನಿಯಮಗಳೇ ಕಾನೂನುಬಾಹಿರ, ಲಂಚವೇ ₹200 ಕೋಟಿ

Published:
Updated:
Prajavani

ವಸೂಲಿಯೇ ಅಧಿಕಾರವಾಗಿ, ಲಂಚವೇ ಆಹಾರವಾಗಿ ನಿತ್ಯವೂ ಲಕ್ಷಗಟ್ಟಲೇ ಕಮಾಯಿ ಸಂಗ್ರಹವಾಗುವ ಸಾರಿಗೆ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ಅಕರಾಳ ವಿಕರಾಳ ಮುಖ ಇಲ್ಲಿದೆ. .

ಬೆಂಗಳೂರು: ದಿನಕ್ಕೆ ಲಕ್ಷ ಲಕ್ಷ ಸಂಪಾದಿಸುವ ಸರ್ಕಾರಿ ಹುದ್ದೆ ಬೇಕಾ? ಸರ್ಕಾರದ ಯಾವುದೇ ನಿಯಮಗಳು, ಕಟ್ಟುಪಾಡುಗಳು ಅನ್ವಯವಾಗುವುದು ಬೇಡವೇ? ಹಾಗಿದ್ದರೆ ನೇರಾನೇರ ಸಾರಿಗೆ ಇಲಾಖೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಅಥವಾ ಹಿರಿಯ ಮೋಟಾರು ಇನ್‌ಸ್ಪೆಕ್ಟರ್‌(ಹಿಮೋನಿ, ಮೋನಿ) ಹುದ್ದೆಗಳಿಗೆ ಹೋಗಿ. . .

ಬಹುಕೋಟಿ ಸಂಪಾದನೆಯ ಜಾಗ ಎಂದು ಜಗತ್ತಿನಲ್ಲಿ ಗುರುತಿಸಲಾಗುತ್ತಿರುವ ಹುದ್ದೆಗಳಿಗೆ ಹೋಗ ಬೇಕಾದರೆ ತೀಕ್ಷ್ಣ ಬುದ್ಧಿ, ಅಪ್ರತಿಮ ಆಲೋಚನಾ ಶಕ್ತಿ ಅಗತ್ಯ. ಆ ಹುದ್ದೆ ಗಳಿಗಿಂತ ಮಿಗಿಲಾಗಿ ಕರ್ನಾಟಕದಲ್ಲಿ ಸಂಪಾದನೆ ಮಾಡಬೇಕಾದರೆ ಯಾವುದೇ ಹೆಚ್ಚುವರಿ ಅರ್ಹತೆಯೂ ಬೇಕಿಲ್ಲ. ದುಡ್ಡಷ್ಟೇ ತೊಪತೊಪ ಉದುರುವ ಲಾಭಕಟ್ಟಿನ ಸ್ಥಳಗಳಲ್ಲಿ ಆರ್‌ಟಿಒ, ಎಆರ್‌ಟಿಒ, ಹಿಮೋನಿ, ಮೋನಿ ಅಂತಹ ಹುದ್ದೆಗಳನ್ನು ಅಲಂಕರಿಸಿದರಾಯಿತು. ಲಾಡ್ಜೋ, ಮಸಾಜ್ ಪಾರ್ಲರೋ, ಗೋವಾದ ಕ್ಯಾಸಿನೊ ಹೀಗೆ ಎಲ್ಲಿ ಕುಳಿತರೂ ತಪ್ಪದೇ ಕಪ್ಪ ಸಲ್ಲುತ್ತದೆ. 

ಇಲ್ಲಿ ಜಾತಿ, ಮತ, ಪ್ರಾದೇಶಿಕ ಪ್ರಭಾವ ಅಥವಾ ಯಾವುದೋ ರಾಜ ಕಾರಣಿಯ ಕೃಪಾಕಟಾಕ್ಷ ಬೇಕಿಲ್ಲ. ವರ್ಗಾವಣೆಯ ಮಾರ್ಗಸೂಚಿಗಳು, ನಿಯೋಜನೆಯ ನಿಯಮಗಳು ಯಾವುವೂ ಅನ್ವಯಿಸುವುದಿಲ್ಲ. ಇಲ್ಲಿ ಖುಲ್ಲಂಖುಲ್ಲಾ ‘ಹಣದ ನ್ಯಾಯ’. 

* ಇದನ್ನೂ ಓದಿ: ಚೆಕ್‌ಪೋಸ್ಟ್‌ಗಳಲ್ಲಿ ಸುಲಿಗೆ ನಿರಂತರ: ನಿಯೋಜನೆಯೇ ಲೂಟಿಗೆ ರಹದಾರಿ

ಮುಖ್ಯಮಂತ್ರಿ ಷರಾ ಬರೆದರೂ, ಸಾರಿಗೆ ಸಚಿವರು ಕೆಂಪು–ಹಸಿರು ಬಣ್ಣ ದಲ್ಲಿ ಗುರುತು ಹಾಕಿದರೂ ಇಲ್ಲಿನ ಯಾವುದೇ ಹುದ್ದೆಯಲ್ಲಿ ಕುಳಿತವರು ಹಲ್ಲಿಯಷ್ಟೂ ಅಲುಗಾಡುವುದಿಲ್ಲ. ಇವರೆಲ್ಲರೂ ನಿರ್ಬಂಧಾತೀತರು. ಎಂಥದೇ ಅಂಕುಶವನ್ನು ಚುಚ್ಚಿ ಇವರನ್ನು ಬಗ್ಗಿಸುವುದು ಅಸಾಧ್ಯ. ನಿಯಮಗಳೇ ಇಲ್ಲಿ ಕಾನೂನುಬಾಹಿರ. ಇಲ್ಲಿ ನಡೆಯುವುದು ಪೂರ್ತಿ ಷೇರು ಮಾರುಕಟ್ಟೆಯಂತಹ ವ್ಯವಹಾರ. ದಿನದ ವಹಿವಾಟು ಆಧರಿಸಿ ವಸೂಲಿ, ಬಂದ ಹಣದಲ್ಲಿ ಹುದ್ದೆಗೆ ತಕ್ಕಂತೆ ಪಾಲು. ಅಷ್ಟರಮಟ್ಟಿಗೆ ವ್ಯಾಪಾರ ನೈಪುಣ್ಯತೆ, ದುಡ್ಡು ಹಂಚಿಕೆಯಲ್ಲಿ ಸರ್ವ ಸಮಾನತೆ ಇಲ್ಲಿನ ವ್ಯವಸ್ಥೆ.

ಮುಖ್ಯಮಂತ್ರಿ, ಸಾರಿಗೆ ಸಚಿವ, ಇಲಾಖೆಗೊಬ್ಬ ಪ್ರಧಾನ ಕಾರ್ಯದರ್ಶಿ ಇದ್ದರೂ ಯಾರೂ ಕಮಕ್‌ಕಿಮಕ್ ಎನ್ನುವಂತಿಲ್ಲ. ಎಲ್ಲರನ್ನೂ ಆಟವಾ ಡಿಸುವ ‘ಅಸ್ತ್ರ’ ಎಂದರೆ ವರ್ಷಕ್ಕೆ ಏನಿಲ್ಲ ವೆಂದರೂ ಸಂಗ್ರಹವಾಗುವ ₹200 ಕೋಟಿಯಷ್ಟು ಲಂಚದ ಬಾಬತ್ತು.

‘2 ಜಿ’ ಕರಾಮತ್ತು: ಎಲ್ಲ ಇಲಾಖೆಗಳಲ್ಲೂ ಜವಾಬ್ದಾರಿ ಹಂಚಿಕೆಗೆ ನೀತಿ, ನಿಯಮ ಗಳಿವೆ. ಇಲ್ಲಿ ಅವ್ಯಾವುದೂ ಇಲ್ಲ; ಇದ್ದರೂ ಅದು ನಡೆಯುವುದೂ ಇಲ್ಲ.

ಇಡೀ ಇಲಾಖೆಯನ್ನು ನಿಯಂತ್ರಣದಲ್ಲಿಟ್ಟು ಕೊಂಡು ತಮ್ಮ ಅಂಗೈಯಲ್ಲಿ ಆಟವಾಡಿಸುವ ಶಕ್ತಿ ಇರುವುದು ಈಗ ‘2 ಜಿ’ಗಳಿಗೆ ಮಾತ್ರ. ಒಂದೆರಡು ವರ್ಷಗಳ ಹಿಂದೆ ‘4 ಜಿ’ ಗಳ ಕಾರುಬಾರು ಇತ್ತು. ಇವರು ದೊಡ್ಡ ಹುದ್ದೆಯಲ್ಲಿ ಇದ್ದವರೇನಲ್ಲ. ಹಿಮೋನಿಗಳಷ್ಟೆ. ಈ ಪೈಕಿ ಇಬ್ಬರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಹಾಗಿದ್ದರೂ ಇವರ ಬಲವೇನೂ ಕುಗ್ಗಿಲ್ಲ ಎಂಬ ಮಾತುಗಳು ಇವೆ.

ಈಗ ಅಧಿಕಾರ ಚಲಾಯಿಸುತ್ತಿರುವ ‘2ಜಿ’ಗಳಲ್ಲಿ ಪ್ರಭಾವಶಾಲಿಗಳಾಗಿರುವವರು ಹುದ್ದೆಗಷ್ಟೇ ಕಲಬುರ್ಗಿ ಜಂಟಿ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಹಿಮೋನಿ , ಇನ್ನೊಬ್ಬರು ಬೆಂಗಳೂರು ಗ್ರಾಮಾಂತರ ಜಂಟಿ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಹಿಮೋನಿ. ಇವರಿಬ್ಬರೂ ಕಚೇರಿ ಕಡೆ ಹೋಗುವ ಅಭ್ಯಾಸವನ್ನೇ ಇಟ್ಟುಕೊಂಡಿಲ್ಲ ಎಂಬ ಟೀಕೆಯೂ ಇದೆ.

‘4ಜಿ’ ಗುಂಪು ಒಡೆಯಲು ಇಬ್ಬರು ಜಂಟಿ ಆಯುಕ್ತರು ಯತ್ನಿಸಿದ್ದರು. ಆದರೆ, ಅದರ ಫಲ ಕಾಣಲಿಲ್ಲ ಎನ್ನುತ್ತವೆ ಮೂಲಗಳು.

275 ‘ಹಿಮೋನಿ’ಗಳನ್ನು ಕೈವಶದಲ್ಲಿಟ್ಟು ಕೊಂಡಿರುವ ‘4 ಜಿ’ ಗಳ ಕಪಿಮುಷ್ಠಿಯಲ್ಲಿ ಇಲಾಖೆ ಸಿಕ್ಕಿ ನಲುಗುತ್ತಿದೆ. ಹೆಚ್ಚಿನ ಸಂಖ್ಯೆಯ ಹಿಮೋನಿಗಳು ಅಧಿಕಾರ ಚಲಾಯಿಸುತ್ತಿರುವ ‘2 ಜಿ’ ಗಳು ಹಾಗೂ ನಿವೃತ್ತರಾದ ‘2 ಜಿ’ಗಳ ಹಿಡಿತದಲ್ಲಿ ಇದ್ದಾರೆ. 40ರಷ್ಟು ಹಿಮೋನಿಗಳು ಎಲ್ಲರ ಜತೆಗೂ ಸಮಾನವಾಗಿ ಗುರುತಿಸಿಕೊಂಡಿದ್ದಾರೆ.

‘2 ಜಿ’ಗಳು ಎಷ್ಟು ಪ್ರಭಾವಶಾಲಿಗಳೆಂದರೆ ಆಯುಕ್ತರನ್ನು ವರ್ಗಾ ಮಾಡಿಸುವುದಷ್ಟೇ ಅಲ್ಲ; ಮನಸ್ಸು ಮಾಡಿದರೆ ಸಚಿವರನ್ನೇ ಎತ್ತಂಗಡಿ ಮಾಡಿಸುವಷ್ಟು ಶಕ್ತಿಶಾಲಿಗಳು ಎಂಬ ಮಾತಿದೆ. ‘ಹಣವೊಂದಿದ್ದರೆ ವರ್ಗಾವಣೆ, ನಿಯೋಜನೆಯ ಎಲ್ಲವೂ ‘ಪಾರದರ್ಶಕ’ವಾಗಿ ನಡೆಯುತ್ತದೆ. ಮುಖ್ಯಮಂತ್ರಿ, ಸಾರಿಗೆ ಸಚಿವ, ವಿರೋಧ ಪಕ್ಷದ ನಾಯಕರು, ಸ್ಥಳೀಯ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೀಗೆ ಆಯಾ ಕಾಲದಲ್ಲಿ ಅಧಿಕಾರದಲ್ಲಿ ಇರುವ ಎಲ್ಲರಿಗೂ ಕಪ್ಪ–ಕಾಣಿಕೆ ತಪ್ಪದೇ ಹೋಗುತ್ತದೆ. ಹೀಗಾಗಿ ಯಾರೊಬ್ಬರೂ ಮೂಗು ತೂರಿಸುವುದಿಲ್ಲ’ ಎನ್ನುತ್ತಾರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತ ಕೆ.ಎನ್. ಸೋಮಶೇಖರ್.

ಹರಾಜು ಕೂಗಿದರಷ್ಟೇ ಆಯಕಟ್ಟು ಲಾಭದ ಹುದ್ದೆ...!
ಸಚಿವರು, ಶಾಸಕರ ಮರ್ಜಿಗೆ ತಕ್ಕಂತೆ ಕೆಲವು ಇಲಾಖೆಗಳಲ್ಲಿ ವರ್ಗಾವಣೆ ನಡೆದರೆ, ಇಲ್ಲಿ ಲಾಭ ಕಟ್ಟಿನ ಹುದ್ದೆ ಬೇಕಾದರೆ ಅತಿ ಹೆಚ್ಚಿನ ಮೊತ್ತಕ್ಕೆ ಹರಾಜು ಕೂಗಬೇಕು. ಲಕ್ಷಗಟ್ಟಲೆ ಸಂಪಾದನೆ ಇರುವ ಆರ್‌ಟಿಒ ಹುದ್ದೆಗೆ ಒಮ್ಮೆ ಬಂದರೆ ಮತ್ತೆ 10 ವರ್ಷ, ಕೆಲವೊಮ್ಮೆ ಜೀವಿತಾವಧಿ ಉದ್ದಕ್ಕೂ ಹರಾಜು ಕೂಗುವಂತಿಲ್ಲ ಎಂಬ ‘ನಿಯತ್ತು’ ಇಲ್ಲಿದೆ.

ಆರ್‌ಟಿಒಗಳ ಸಂಘ ಹಾಗೂ ‘2 ಜಿ’ಗಳು ಹುದ್ದೆಯ ಕಿಮ್ಮತ್ತನ್ನು ತೀರ್ಮಾನ ಮಾಡುತ್ತಾರೆ. ಹೆಚ್ಚು ಕಮಾಯಿ ಇರುವ ಹುದ್ದೆಗಳ ಮೊತ್ತ ಸಹಜವಾಗಿ ಹೆಚ್ಚಿರುತ್ತದೆ. ಅದನ್ನು ಮಾತ್ರ ಬಿಡ್‌ ಹಾಕಲಾಗುತ್ತದೆ. ಮೊದಲು ಆಯ್ದ ಕೆಲವರ ಸಭೆ ಕರೆದು ಹರಾಜು ಕೂಗಲಾಗುತ್ತಿತ್ತು. ಆದರೆ, ಅದು ಸಮಸ್ಯೆ ತಂದೊಡ್ಡಬಹುದು ಎಂಬ ಕಾರಣಕ್ಕೆ ಈಗ ದೂರವಾಣಿ ಕರೆ ಮಾಡಿ, ಇಷ್ಟು ನಡೆಯುತ್ತಿದೆ, ಎಷ್ಟಕ್ಕೆ ಬೇಕು ಎಂದು ಕೇಳಲಾಗುತ್ತದೆ. ಅದನ್ನು ಪಟ್ಟಿ ಮಾಡಿ ಇಟ್ಟುಕೊಂಡು ಹೆಚ್ಚು ಮೊತ್ತ ಕೂಗಿದವರಿಗೆ ಹುದ್ದೆ ಕೊಡಲಾಗುತ್ತದೆ.

ಸದರಿ ಪಟ್ಟಿಗೆ ಅನುಮೋದನೆ ನೀಡುವುದಷ್ಟೇ ಸಚಿವರ ಕೆಲಸ. ಹೊಸದಾಗಿ ಖಾತೆ ವಹಿಸಿಕೊಂಡವರು ಈ ವಿಷಯದಲ್ಲಿ ಕಿರಿಕ್ ತೆಗೆದರೆ, ಅವರನ್ನು ಮಣಿಸುವ ಹಾಗೂ ನೇರವಾಗಿ ಮುಖ್ಯಮಂತ್ರಿಗೆ ‘ಕಪ್ಪ’ ಕೊಡುವ ಮೂಲಕ ತಮ್ಮ ಆದೇಶಕ್ಕೆ ಮುದ್ರೆ ಒತ್ತಿಸುವ ತಾಕತ್ತು ಈ ಗುಂಪಿನದ್ದಾಗಿದೆ.

ಆರ್‌ಟಿಒಗಳು 2ರಿಂದ 3 ವರ್ಷಕ್ಕೆ ಬಿಡ್ಡು ಕೂಗಿ ಹುದ್ದೆಗೆ ಹೋದರೂ, ದಿನದ ಸಂಗ್ರಹದಲ್ಲಿ ಸರ್ವರಿಗೂ ಸಮಪಾಲು ನೀಡಬೇಕಾದದು ಅಲಿಖಿತ ನಿಯಮ. ಹೀಗಾಗಿ, ಒಮ್ಮೆ ಕೊಟ್ಟರೆ ಮುಗಿಯುವುದಿಲ್ಲ ಹಂಚಿಕೆಯ ವರಾತ.

ಹರಾಜು ಕೂಗಲು ಒಪ್ಪದ, ವಸೂಲು ಮಾಡಿಕೊಡದ ಕೆಲವೇ ಪ್ರಾಮಾಣಿಕರಿಗೆ ‘ಶಿಕ್ಷೆ’ ಖಚಿತ. ಆಟೋ ರಿಕ್ಷಾ ಚಾಲಕರಿಗಾಗಿಯೇ ಇರುವ ಬಹಳ ಕಿರಿಕಿರಿ ಇರುವ ಶಾಂತಿನಗರ ಆರ್‌ಟಿಒ, ರಸ್ತೆ ಸುರಕ್ಷತಾ ವಿಭಾಗದ ಜವಾಬ್ದಾರಿ, ಕಾನೂನು ಕೋಶ ಇಂತಹ ಹುದ್ದೆಗಳಿಗೇ ಸೀಮಿತವಾಗಿಸಲಾಗುತ್ತದೆ ಎಂದು ನಿವೃತ್ತ ಆರ್‌ಟಿಒ ಒಬ್ಬರು ವಿವರಿಸುತ್ತಾರೆ.

 

Tags: 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 1

  Frustrated
 • 8

  Angry

Comments:

0 comments

Write the first review for this !