ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಪಣಕ್ಕಿಟ್ಟಿರುವ ಪೌರಕಾರ್ಮಿಕರು: ಕೊರೊನಾ ಆತಂಕದಲ್ಲೂ ಸ್ವಚ್ಛತಾ ಕಾರ್ಯ

Last Updated 29 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವ ಭೀತಿ ಹೆಚ್ಚುತ್ತಿರುವ ನಡುವೆಯೂ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ನಗರದ ನೈರ್ಮಲ್ಯ ಕಾಪಾಡಿಕೊಳ್ಳುವುದಕ್ಕೋಸ್ಕರ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.

ಕೊರೊನಾ ಹರಡುವುದನ್ನು ನಿಯಂತ್ರಿಸಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಬಹುತೇಕ ಇಲಾಖೆಗಳ ಸಿಬ್ಬಂದಿಗೆ ರಜೆ ನೀಡಲಾಗಿದೆ. ಕರ್ಫ್ಯೂ ಮಾದರಿ ನಿರ್ಬಂಧಗಳನ್ನು ಹೇರಿರುವುದರಿಂದ ಬಹುತೇಕರು ಮನೆಗಳಲ್ಲೇ ಉಳಿದಿದ್ದಾರೆ. ಆದರೆ, ಪೌರಕಾರ್ಮಿಕರು ಎಂದಿನಂತೆ ಮುಂಜಾನೆಯಿಂದಲೇ ಬೀದಿಗಿಳಿದು ಸ್ವಚ್ಛತಾ ಕಾಯಕವನ್ನು ಮುಂದುವರಿಸಿ ಗಮನಸೆಳೆದಿದ್ದಾರೆ. ಆದರೆ, ಹೀಗೆ ಕೆಲಸ ನಿರ್ವಹಿಸುತ್ತಿರುವ ಅವರಲ್ಲಿ ಕೆಲವರು ಸುರಕ್ಷತಾ ಪರಿಕರಗಳನ್ನು ಹಾಕಿಕೊಂಡಿಲ್ಲದಿರುವುದು ಅಥವಾ ಬಳಸದಿರುವುದು ಆತಂಕಕ್ಕೆ ಕಾರಣವಾಗಿದೆ.

ನಗರದಲ್ಲಿ 58 ವಾರ್ಡುಗಳಿದ್ದು, 1,200ಕ್ಕೂ ಹೆಚ್ಚು ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಕಾಯಂ, ನೇರ ಪಾವತಿ ಹಾಗೂ ಹೊರಗುತ್ತಿಗೆ ವ್ಯವಸ್ಥೆಯಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. 200 ಮಂದಿ ಕಾಯಂ, 700 ಮಂದಿ ನೇರಪಾವತಿ ಹಾಗೂ ಉಳಿದವರು ಹೊರಗುತ್ತಿಗೆಯವರು. ಸಾಮಾನ್ಯ ದಿನಗಳಲ್ಲಿ ಅವರು ಮಧ್ಯಾಹ್ನದವರೆಗೂ ಕೆಲಸ ಮಾಡಬೇಕಿತ್ತು. ಆದರೆ, ಕೊರೊನಾ ಸೋಂಕಿನ ಭೀತಿಯಿಂದಾಗಿ ಅವರಿಗೆ ಕೆಲಸದ ಅವಧಿಯನ್ನು ಕಡಿತಗೊಳಿಸುವ ಮೂಲಕ ನಗರಪಾಲಿಕೆ ಕಾಳಜಿ ಪ್ರದರ್ಶಿಸಿದೆ. ಅಂತೆಯೇ, ಅವರಿಗೆ ಅಗತ್ಯವಾದ ಎಲ್ಲ ಸುರಕ್ಷತಾ ಪರಿಕರಗಳನ್ನು ಕಲ್ಪಿಸುವ ಕೆಲಸವನ್ನು ಮಾಡಬೇಕು ಎನ್ನುವುದು ಪ್ರಜ್ಞಾವಂತರ ಸಲಹೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ‘ಬೆಳಿಗ್ಗೆ 10.30ರಿಂದ 11ರವರೆಗೆ ಮಾತ್ರವೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಅವರನ್ನು ಈಗ ಸಂಜೆವರೆಗೂ ದುಡಿಸಿಕೊಳ್ಳುತ್ತಿಲ್ಲ. ಜನರ ಸಂಚಾರ ಕಡಿಮೆ ಇರುವುದರಿಂದ ರಸ್ತೆಗಳಲ್ಲಿ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ಅವರಿಗೆ ಉಪಾಹಾರದ ವ್ಯವಸ್ಥೆಯನ್ನು ಪಾಲಿಕೆಯಂದಲೇ ಮಾಡಲಾಗುತ್ತಿದೆ. ಅವರ ಸುರಕ್ಷತೆಗಾಗಿ ಅಗತ್ಯ ಪರಿಕರಗಳನ್ನು ನೀಡಲಾಗಿದೆ. ಬಳಸುವಂತೆಯೂ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಮಾಸ್ಕ್‌, ಬೂಟುಗಳು, ಸಾಬೂನಿನ ವ್ಯವಸ್ಥೆ ಮಾಡಿದ್ದೇವೆ. 4ಸಾವಿರ ಮಾಸ್ಕ್‌ಗಳ ಸಂಗ್ರಹವಿದೆ. ಜೈನ ಸಮಾಜದವರು ಒಂದು ಸಾವಿರ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ನೀಡಿದ್ದಾರೆ. ಮನೆ–ಮನೆ ಕಸ ಸಂಗ್ರಹಕ್ಕೆ ಆದ್ಯತೆ ನೀಡಿದ್ದೇವೆ. ವಾಹನಗಳು ಹಾಗೂ ಯಂತ್ರಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸೋಂಕು ನಿವಾರಣೆಗೆ ಸಿಂಪಡಿಸಲು ಕ್ಲೋರೊನ್ ಫೌಡರ್‌ ಸ್ಟಾಕ್‌ ಇದೆ. ಸಮವಸ್ತ್ರ ಇಲ್ಲದಿದ್ದವರಿಗೆ ಸಮವಸ್ತ್ರ ಒದಗಿಸಿದ್ದೇವೆ. ನಗರಪಾಲಿಕೆ ಸಿಬ್ಬಂದಿ ಎಂದು ಬರೆದಿರುವ ರಿಫ್ಲೆಕ್ಟೆಡ್‌ ಜಾಕೆಟ್‌ಗಳನ್ನು ಅವರಿಗೆ ಒದಗಿಸಲಾಗಿದೆ. ಕೊರೊನಾ ಸೋಂಕಿನ ಬಗ್ಗೆ ಅವರಿಗೂ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಬಯೊಮೆಟ್ರಿಕ್ ಹಾಜರಾತಿ ರದ್ದುಪಡಿಸಲಾಗಿದೆ. ಆರೋಗ್ಯ ತಪಾಸಣೆಗೂ ಕ್ರಮ ಕೈಗೊಳ್ಳಲಾಗಿದೆ. ಸಮಗ್ರ ತಪಾಸಣೆಗಂದು ₹ 40 ಲಕ್ಷ ಮೀಸಲಿಡಲಾಗಿದೆ. ಕೆಎಲ್‌ಇ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಆರೋಗ್ಯ ತಪಾಸಣೆಗಾಗಿ ಒಬ್ಬರಿಗೆ ₹ 3ಸಾವಿರ ಖರ್ಚಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT