ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದ ಮಹಿಳೆಗೆ ‘ಸಖಿ’ ಸಾಂತ್ವನ

ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಒಂದೇ ಸೂರಿನಡಿ ಸಕಲ ಸೌಲಭ್ಯ, ಪ್ರತಿ ಕೇಂದ್ರದಲ್ಲೂ 8 ಸಿಬ್ಬಂದಿ
Last Updated 12 ಜನವರಿ 2020, 20:00 IST
ಅಕ್ಷರ ಗಾತ್ರ

ಹಾವೇರಿ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಕಲ ಸೌಲಭ್ಯ ಒದಗಿಸಲು ರಾಜ್ಯದ 30 ಜಿಲ್ಲೆಗಳಲ್ಲೂ ‘ಸಖಿ’ ಹೆಸರಿನಲ್ಲಿ ‘ಒನ್‌ ಸ್ಟಾಪ್‌ ಸೆಂಟರ್‌’ಗಳು ಶೀಘ್ರ ಆರಂಭವಾಗಲಿವೆ.

ಕೇಂದ್ರ ಸರ್ಕಾರದ ಅನುದಾನ ನೀಡಿರುವ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾರಿ ಮಾಡಲಿದೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ, ಕಿರುಕುಳ, ಕೌಟುಂಬಿಕ ದೌರ್ಜನ್ಯ ಮುಂತಾದ ಸಮಸ್ಯೆಗಳಿಗೆ ಸಿಲುಕಿದ ಮಹಿಳೆಯರು ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆ, ಪೊಲೀಸ್‌ ನೆರವು, ಆಪ್ತ ಸಮಾಲೋಚನೆ, ಕಾನೂನು ಸಲಹೆ, ಪುನರ್ವಸತಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ದಿನದ 24 ಗಂಟೆಯೂ ಕೇಂದ್ರ ಕಾರ್ಯನಿರ್ವಹಿಸಲಿದೆ.

ಕಾರ್ಯ‍ಪಡೆ ರಚನೆ: ಜಿಲ್ಲಾ ಕೇಂದ್ರದ ‘ಸಖಿ’ಗಳ ಸಮರ್ಪಕ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿ ಸಿಇಒ, ಎಸ್ಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಜಿಲ್ಲಾ ಆರೋಗ್ಯಾಧಿಕಾರಿ, ನಾಗರಿಕ ಸೇವಾ ಸಂಸ್ಥೆಗಳ ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸಮಿತಿಯ ಸದಸ್ಯರಾಗಿರುತ್ತಾರೆ.

ಪ್ರತಿ ಕೇಂದ್ರದಲ್ಲಿ ಆಡಳಿತಾಧಿಕಾರಿ, ಆಪ್ತ ಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಪೊಲೀಸ್‌ ಸಿಬ್ಬಂದಿ, ಶುಶ್ರೂಷಕಿಯರು, ಸಹಾಯಕರು, ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 8 ಮಂದಿ ಕಾರ್ಯನಿರ್ವಹಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

₹ 53 ಲಕ್ಷ ಮಂಜೂರು: ‘ಹಾವೇರಿ ಜಿಲ್ಲೆಯಲ್ಲಿ ಘಟಕ ತೆರೆಯಲು ಕೇಂದ್ರ ಸರ್ಕಾರದಿಂದ ₹ 53 ಲಕ್ಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ಮೊದಲ ಕಂತಿನ ₹ 24 ಲಕ್ಷ ಬಿಡುಗಡೆಯಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ‘ಸಖಿ’ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಿಸುವ ಹೊಣೆ ನೀಡಲಾಗಿದೆ. 1,400 ಚ.ಅಡಿಯ ಎರಡಂತಸ್ತಿನ ಈ ಕಟ್ಟಡದಲ್ಲಿ ಕಚೇರಿ, ಆಪ್ತ ಸಮಾಲೋಚಕರ ಕೊಠಡಿ, ತಾತ್ಕಾಲಿಕ ಪುನರ್ವಸತಿ ಕೊಠಡಿ, ಶೌಚಾಲಯ, ದಾಸ್ತಾನು ಕೊಠಡಿ ಸೇರಿದಂತೆ ಸಕಲ ಸೌಲಭ್ಯಗಳಿರುತ್ತವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ವೈ.ಶೆಟ್ಟಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನವೆಂಬರ್‌ 2019ಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಸ್ಥಗಿತಗೊಂಡಿದೆ. ಈಗ ಅದೇ ಕೊಠಡಿಯಲ್ಲಿ ತಾತ್ಕಾಲಿಕವಾಗಿ ‘ಸಖಿ’ ಆರಂಭಿಸಲಾಗಿದೆ. ಸಾಂತ್ವನದ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಟ್ಟಡ ಪೂರ್ಣಗೊಂಡ ನಂತರ ಘಟಕ ಸ್ಥಳಾಂತರ ಮಾಡಲಾಗುತ್ತದೆ’ ಎಂದು ಶೆಟ್ಟಪ್ಪನವರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT