ಬುಧವಾರ, ಏಪ್ರಿಲ್ 1, 2020
19 °C

ವೇತನ ವಿಳಂಬ: ನೌಕರರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಖಜಾನೆ 2’ರ ತಂತ್ರಾಂಶ ಗೊಂದಲ ಹಾಗೂ ಸರ್ವರ್‌ ಸಮಸ್ಯೆಯಿಂದ ಐಎಎಸ್‌, ಕೆಎಎಸ್‌ ಅಧಿಕಾರಿಗಳು, ಹಲವು ಇಲಾಖೆಗಳ ನೌಕರರು ಮತ್ತು ಸಚಿವಾಲಯ ಸಿಬ್ಬಂದಿಗೆ ಎರಡು–ಮೂರು ತಿಂಗಳಿನಿಂದ ಸಂಬಳವಾಗಿಲ್ಲ. ವೇತನ ವಿಳಂಬವಾಗಿರುವುದಕ್ಕೆ ನೌಕರ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ.

ಸುಮಾರು 8 ರಿಂದ 10 ಇಲಾಖೆಗಳ ನೌಕರರಿಗೆ ಡಿಸೆಂಬರ್‌ ಮತ್ತು ಜನವರಿ ತಿಂಗಳ ವೇತನ ಇನ್ನೂ ಆಗಿಲ್ಲ. ಇದರಿಂದ ಬಹಳಷ್ಟು ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ವಿವಿಧ ಇಲಾಖೆಗಳಲ್ಲಿ 6.50 ಲಕ್ಷ ನೌಕರರಿದ್ದಾರೆ. ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯನ್ನು(ಎಚ್‌ಆರ್‌ಎಂಎಸ್‌) ಖಜಾನೆ–1ರಿಂದ ಖಜಾನೆ–2 ತಂತ್ರಾಂಶಕ್ಕೆ ವರ್ಗಾಯಿಸಲಾಗುತ್ತಿದೆ. ಈ ಕಾರಣಕ್ಕೆ ಸಮಸ್ಯೆ ಉದ್ಭವಿಸಿದೆ. ಸದ್ಯವೇ ಎಲ್ಲವೂ ಸರಿಯಾಗಲಿದೆ’ ಎಂಬುದು ಆರ್ಥಿಕ ಇಲಾಖೆಯ ಸಮರ್ಥನೆ. 

‘ಖಜಾನೆ–2 ಅನ್ನು ನಿರ್ವಹಿಸುವ ಸರ್ವರ್‌ ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಿಲ್‌ ತಯಾರಿಕೆ, ಬಿಲ್‌ಗಳನ್ನು ಖಜಾನೆಗೆ ಸಲ್ಲಿಸುವುದು, ಜಮೆ, ಸಂದಾಯ, ಠೇವಣಿ ನಿರ್ವಹಣೆಯನ್ನು ಖಜಾನೆ 2 ತಂತ್ರಾಂಶದ ಮೂಲಕವೇ ನಿರ್ವಹಿಸಬೇಕು. ತಂತ್ರಾಂಶಕ್ಕೆ ಇವೆಲ್ಲವನ್ನೂ ಅಪ್‌ಲೋಡ್‌ ಮಾಡುವುದು ತೊಡಕಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೇಂದ್ರ ಸರ್ಕಾರದ ನಿರೀಕ್ಷಿಸಿರುವ ಅನುದಾನ ಬಾರದೇ ಇರುವುದು, ತೆರಿಗೆ ಸಂಗ್ರಹದಲ್ಲಿ ಅನುಭವಿಸುತ್ತಿರುವ ಹಿನ್ನಡೆಯಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ ಹಿಂಜರಿತ ಇದೇ ರೀತಿ ಮುಂದುವರಿದರೆ ಇನ್ನು ಎರಡು ತಿಂಗಳ ಬಳಿಕ ವೇತನ ನೀಡುವುದು ಕಷ್ಟವಾಗಬಹುದು. ಖಜಾನೆ–2 ಸಮಸ್ಯೆ ಎಂದು ಆರ್ಥಿಕ ಇಲಾಖೆ ಪ್ರತಿಪಾದಿಸುತ್ತಿದೆ. ಆದರೆ, ಸಂಪನ್ಮೂಲ ಕೊರತೆಯೇ ನೈಜ ಕಾರಣ. ಇದನ್ನು ಮುಚ್ಚಿಡಲು ಹೀಗೆ ಹೇಳಲಾಗುತ್ತಿದೆ’ ಎಂದು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯೊಬ್ಬರು ಹೇಳಿದರು. 

‘ಶಿಕ್ಷಕರು ಮತ್ತು ಉಪನ್ಯಾಸಕರ ಗೋಳು ಯಾರೂ ಕೇಳುತ್ತಿಲ್ಲ. ಬಹಳಷ್ಟು ಕಡೆಗಳಲ್ಲಿ ನಾಲ್ಕರಿಂದ ಐದು ತಿಂಗಳಿಂದ ವೇತನ ನೀಡಿಲ್ಲ. ಸರ್ಕಾರವು ವಾಸ್ತವ ಸಂಗತಿಯನ್ನು ಮುಚ್ಚಿಟ್ಟು ಸಬೂಬು ಹೇಳುತ್ತಿದೆ ಎಂದು ಶಿಕ್ಷಕರೊಬ್ಬರು ದೂರಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್ ಅವರಿಗೆ ಕರೆ ಮಾಡಿದರೆ, ಅವರು ಕರೆ ಸ್ವೀಕರಿಸಲಿಲ್ಲ.

ಸರ್ಕಾರದಲ್ಲಿ ಹಣಕ್ಕೆ ಸಮಸ್ಯೆ ಇಲ್ಲ. ಖಜಾನೆ 2 ನ ತಾಂತ್ರಿಕ ಸಮಸ್ಯೆಯೇ ಗೊಂದಲಕ್ಕೆ ಕಾರಣ. ವೇತನ ಬಿಡುಗಡೆಗೆ ಸರ್ಕಾರವನ್ನು ಒತ್ತಾಯಿಸಿದ್ದೇವೆ
-ಸಿ.ಎಸ್‌.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ 

ರಾಜ್ಯದ ಬಹುತೇಕ ಕಡೆಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ 3– 4 ತಿಂಗಳಿಂದ ಸಂಬಳ ಆಗಿಲ್ಲ. ಸರ್ಕಾರದ ಬಳಿ ಹಣವಿಲ್ಲ
- ತಿಮ್ಮಯ್ಯ ಪುರ್ಲೆ,ಗೌರವ ಅಧ್ಯಕ್ಷ, ಕರ್ನಾಟಕ ರಾಜ್ಯ ಪಿ.ಯು ಉಪನ್ಯಾಸಕರ ಸಂಘ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)