ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೋದಯ, ಸಮಾನತೆಗೆ ಸಾಧನವಲ್ಲ ಇ–ಶಿಕ್ಷಣ

Last Updated 4 ಜೂನ್ 2020, 20:03 IST
ಅಕ್ಷರ ಗಾತ್ರ

ಕೋವಿಡ್–19 ಕಾಯಿಲೆ ಯಿಂದಾಗಿ ಸೃಷ್ಟಿಯಾಗಿರುವ ವಿಶಿಷ್ಟ ಸನ್ನಿವೇಶದ ಪರಿಣಾಮ, ಆನ್‍ಲೈನ್ ಶಿಕ್ಷಣದ ಬಗ್ಗೆ ಈಗ ಚರ್ಚೆಯಾಗುತ್ತಿದೆಯೆಂದು ಬಹಳ ಜನ ಭಾವಿಸಿದ್ದಾರೆ. ಆದರೆ, ನಿಜವೇನೆಂದರೆ ಈ ವಿಶಿಷ್ಟ ಪರಿಸ್ಥಿತಿಯನ್ನು ನೆಪವಾಗಿ ಮಾಡಿಕೊಂಡು ನೇರ ಶಿಕ್ಷಣವನ್ನೇ ಮೊಟಕುಗೊಳಿಸಿ, ಸಾಧ್ಯವಿದ್ದರೆ ಭವಿಷ್ಯದಲ್ಲಿ ಅದನ್ನು ತೆಗೆದೇ ಹಾಕುವ ಹುನ್ನಾರಗಳ ಹಿಂದೆ ಬೇರೆ ರಾಜಕೀಯವೇ ಇದೆ.

ನೇರ ಶಿಕ್ಷಣವೆಂದರೆ ತರಗತಿ ಪಾಠಗಳಲ್ಲ; ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಒಂದು ಪುಟ್ಟ ಸಮಾಜವೇ ಆಗಿದೆ. ಅಲ್ಲಿ ನಡೆಯುವ ಮಾನವೀಯ ಸಂಪರ್ಕ, ಸಂಬಂಧಗಳಿಂದ ಮತ್ತು ಸಾಮಾಜೀಕರಣದಿಂದ ಪ್ರಜಾಪ್ರಭುತ್ವದ ಜೀವನಾಡಿ ಆಗಿರುವಂತಹ, ವಿಮರ್ಶಾತ್ಮಕ ಚಿಂತನೆ ಮಾಡಬಲ್ಲ ಪ್ರಜೆಗಳು ಹೊರಬರುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ವಿಪರೀತವಾದ ಸಾಂಪ್ರದಾಯಿಕ ಅಸಮಾನತೆಗಳಿರುವ ನಮ್ಮ ಸಮಾಜದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವುದೆಂದರೆ ಬಿಡುಗಡೆಯ ಅನುಭವವಾಗಿರುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್‌ರಿಂದ ಶುರುವಾಗಿ ಹಳ್ಳಿಯಿಂದ ಬರುವ ಇಂದಿನ ದಲಿತ ಹುಡುಗನವರೆಗೆ ಇದು ಅನ್ವಯ. ಬಡ ಮಧ್ಯಮವರ್ಗದ ಮಕ್ಕಳಿಗೆ, ಮುಸ್ಲಿಂ ಹುಡುಗಿಯರಿಗೆ, ರೈತರ ಮಕ್ಕಳಿಗೆ ಕಲಿಯುವುದೆಂದರೆ ಒಂದು ಸಾಂಸ್ಕೃತಿಕ ಸ್ಥಿತ್ಯಂತರದ ಅನುಭವವೇ ಆಗಿರುತ್ತದೆ. ಅಕ್ಷರಗಳು, ಮಾತುಗಳು, ತಮ್ಮ ಅಭಿಪ್ರಾಯಗಳನ್ನು ಎಗ್ಗಿಲ್ಲದೆ ಹೇಳಿಕೊಳ್ಳುವುದು – ಇವೆಲ್ಲ ತಮಗಲ್ಲವೆಂದು ಭಾವಿಸಿದವರು ಶಿಕ್ಷಣ ಸಂಸ್ಥೆಗಳಲ್ಲಿ ಈ ಹಕ್ಕುಗಳನ್ನು ಪಡೆಯುತ್ತಾರೆ. ಈ ಸಂಸ್ಥೆಗಳಲ್ಲಿಯೂ ಇರುವ ಜಾತಿವ್ಯವಸ್ಥೆ, ಅಸಮಾನತೆ... ಇವುಗಳ ನಡುವೆಯೂ ಸ್ವತಂತ್ರ ವ್ಯಕ್ತಿಗಳಾಗುವ ಅವಕಾಶ ಇರುತ್ತದೆ.

ಮುಖ್ಯವಾಗಿ ಮಾತು, ಭಾಷೆ, ನಂಬಿಕೆ ಇವೆಲ್ಲವುಗಳಲ್ಲಿ ಅಪ್ಪಟ ಬಹುಮುಖಿಯಾದ ಮಾನವೀಯ ಸಂದರ್ಭಗಳನ್ನು ತಮ್ಮ ಸಂಗಾತಿಗಳೊಂದಿಗೆ ಕಲಿಯುತ್ತಾರೆ. 44 ವರ್ಷ ಶಿಕ್ಷಕನಾಗಿದ್ದ ನಾನು ನೋಡಿದ ದಿನನಿತ್ಯದ ಪವಾಡಗಳು ಇವು. ಈಗ ಒಬ್ಬೊಬ್ಬ ವಿದ್ಯಾರ್ಥಿಯೂ ಆನ್‍ಲೈನ್ ತರಗತಿಯಲ್ಲಿ ಒಂದು email idಯಾಗಿ ಅಥವಾ ಮೊಬೈಲ್ ನಂಬರ್ ಆಗಿ ಸಂಗಾತಿಗಳಿಂದ ಹಾಗೂ ಮನುಷ್ಯ ಸಮಾಜದಿಂದಲೇ ಅಸಹಜವಾದ ಅಂತರವನ್ನು ಕಾಪಾಡಿಕೊಂಡು ಏನನ್ನು ಕಲಿಯುತ್ತಾರೆ? ಹೌದು, ಕಲ್ಪಿಸಿಕೊಳ್ಳಲೂ ಕಷ್ಟವಾಗುವ ಪ್ರಮಾಣದಲ್ಲಿ ಜ್ಞಾನ, ಮಾಹಿತಿಗಳು ಇಂದು ಆನ್‍ಲೈನ್‍ನಲ್ಲಿ ಲಭ್ಯವಿವೆ. ಇವುಗಳನ್ನು ವಿದ್ಯಾರ್ಥಿಗಳು ಖಂಡಿತ ಬಳಸಬೇಕು. ಆದರೆ, ಅದು ಶಿಕ್ಷಣವಲ್ಲವೆನ್ನುವುದು ನಮಗೂ, ಅವರಿಗೂ ತಿಳಿದಿರಬೇಕು.

ತಂತ್ರಜ್ಞಾನವು ತಾನೇ ಏನನ್ನೂ ಮಾಡುವುದಿಲ್ಲ. ಸಮಾಜದ ಸ್ಥಿತಿಗಳು ಅದರ ಸಾಮರ್ಥ್ಯವನ್ನು ತಮಗೆ ಬೇಕಾದ ಹಾಗೆ ದುಡಿಸಿಕೊಳ್ಳುತ್ತವೆ. ಹೀಗಾಗಿ ಜ್ಞಾನದ ಬಾಗಿಲನ್ನು ಎಲ್ಲರಿಗೆ ಸಮಾನವಾಗಿ ತೆರೆಯಬಲ್ಲ ಮಾಹಿತಿ ತಂತ್ರಜ್ಞಾನವು ನಮ್ಮಲ್ಲಿ ಹೊಸಬಗೆಯ ಅಸಮಾನತೆಯನ್ನು ತಂದಿತು (ಇದಕ್ಕೆ digital divide ಎನ್ನುತ್ತೇವೆ). ಸ್ತ್ರೀಯರು ಹಾಗೂ ‘ಇತರರು’ ಮತ್ತು ವಿಚಾರವಂತರನ್ನು ಹಿಂಸಿಸುವ ಟ್ರೋಲ್ ಮಾಧ್ಯಮವಾಗಿ ಅಂತರ್ಜಾಲವು ಇಂದು ಕೆಲಸ ಮಾಡುತ್ತಿದೆ. ಹೀಗಾಗಿ ಆನ್‍ಲೈನ್ ಶಿಕ್ಷಣವು ನಮ್ಮ ಸಮಾಜದಲ್ಲಿ ಸರ್ವೋದಯ ಸಮಾನತೆಯ ಸಾಧನವಾಗುವುದಿಲ್ಲ; ಶೇಕಡಾ 73ರಷ್ಟು ಅಂದ್ರೆ 91.2 ಕೋಟಿ ಜನರಿಗೆ ಅಂತರ್ಜಾಲ ಸೌಲಭ್ಯವಿಲ್ಲದ, ನಾನು ಕಲಿಸಿದ ವಿಶ್ವವಿದ್ಯಾಲಯದಿಂದ 30 ಕಿ.ಮೀ ದೂರದ ಹಳ್ಳಿಗಳಲ್ಲಿ ಮೊಬೈಲ್ ಕರೆಗಳೂ ಸುಲಭವಿಲ್ಲದ ಪರಿಸ್ಥಿತಿಯಲ್ಲಿ, ಆನ್‍ಲೈನ್ ಶಿಕ್ಷಣವು ಇಂದಿನ ರಾಜಕೀಯ ಶಕ್ತಿಗಳು ಬಯಸುವ ಅಲ್ಪಸಂಖ್ಯಾತ ‘ಮೆರಿಟ್’ ಜನರನ್ನು ಮತ್ತು ಬಹುಸಂಖ್ಯಾತ ಅವಕಾಶವಂಚಿತರನ್ನು ಸೃಷ್ಟಿಮಾಡುತ್ತದೆ. ಇದೇ ರಾಜಕೀಯ ಶಕ್ತಿಗಳಿಗೆ ಇನ್ನೊಂದು ಗೊತ್ತಿದೆ, ಆನ್‍ಲೈನ್ ತರಗತಿಯಲ್ಲಿ ಒಂದು click ಮಾಡಿದರೆ ಒಬ್ಬ ಬಂಡವಾಳಶಾಹಿಯ ಜೇಬಿಗೆ ಒಂದಿಷ್ಟು ದುಡ್ಡುಬೀಳುತ್ತದೆ.

ಸಾಂಕೇತಿಕವಾಗಿ ಹೇಳುವುದಾದರೆ ಶಿಕ್ಷಣವು ಸಮಗ್ರವಾಗಿ ಆನ್‍ಲೈನ್ ಆಗಲಿ ಎನ್ನುವ ರಾಜಕೀಯವು ಪ್ರತಿಯೊಬ್ಬ ಶಿಕ್ಷಕನ ಮೇಲೆ, ವಿದ್ಯಾರ್ಥಿಯ ಮೇಲೆ ಕುಳಿತಲ್ಲಿಯೇ ನಿಗಾ (ಸರ್ವೈಲೆನ್ಸ್‌) ಇಡುವ ಸಮರ್ಥ ವ್ಯವಸ್ಥೆಯಾಗಿ ಆನ್‍ಲೈನ್ ಶಿಕ್ಷಣವನ್ನು ಕಂಡಿದೆ. ಈ ವ್ಯವಸ್ಥೆ ಯಲ್ಲಿ ಯಾವ ಶಿಕ್ಷಕನೂ ರಾಜ್ಯಶಾಸ್ತ್ರ ಪಾಠ ಮಾಡುವಾಗ ಸರ್ವಾಧಿಕಾರಿ ಪ್ರವೃತ್ತಿಗಳನ್ನು ಟೀಕಿಸಲಾರ. ಸ್ತ್ರೀವಾದವನ್ನು ಬೋಧಿಸುವ ಯಾವ ಶಿಕ್ಷಕಿಯೂ ಕೋಮುವಾದ ಮತ್ತು ಅತ್ಯಾಚಾರಗಳ ಸಂಬಂಧವನ್ನು ಚರ್ಚಿಸುವುದಿಲ್ಲ, ಏಕೆಂದರೆ ತರಗತಿ ಮುಗಿಯುವ ಮೊದಲೇ ಅವರ ಮೇಲೆ ದೇಶದ್ರೋಹದ ಎಫ್‌ಐಆರ್‌, ಆನ್‍ಲೈನ್ ಮೂಲಕವೇ ಬಂದಿರುತ್ತದೆ! ಇದು ಆನ್‍ಲೈನ್ ತಂತ್ರಜ್ಞಾನದ ತಪ್ಪಲ್ಲ. ಇಂದಿನ ರಾಜಕೀಯ ಶಕ್ತಿಗಳು ಪ್ರಜೆಗಳ ಮೇಲೆ ಸಾಧಿಸಬಯಸುವ ನಿಯಂತ್ರಣದ ಫಲ. ಅವುಗಳು ವಿದ್ಯಾರ್ಥಿಗಳಲ್ಲಿ ಬಹುಮುಖಿ ಸಂಸ್ಕೃತಿಯನ್ನು ಬಯಸುವುದಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ತೊಟ್ಟಿರುವ ಏಕಮುಖಿ ರಾಷ್ಟ್ರದ ವಿಧೇಯ ಪ್ರಜೆಗಳಾಗಿದ್ದರೆ ಸಾಕು ಎಂದಷ್ಟೇ ಅಪೇಕ್ಷಿಸುತ್ತವೆ.

ಮಾಹಿತಿ ತಂತ್ರಜ್ಞಾನದ ತೊಂದರೆಯೆಂದರೆ ಅದು ನಿರಂತರವಾದ ಸಂಪರ್ಕವನ್ನು ಕೊಡುತ್ತದೆ; ಸಂಬಂಧಗಳನ್ನು ಮೊಟಕುಮಾಡಿ ಯಾಂತ್ರಿಕಗೊಳಿಸುತ್ತದೆ. ಹೀಗಾಗಿ ನಾವು ಈಗಲೇ ನೋಡಿರುವಂತೆ ಅದು ವೈಯಕ್ತಿಕತೆ, ಸಮುದಾಯದಿಂದ ವಿಮುಖತೆ ಹಾಗೂ ಸಾಮಾಜಿಕ ತಿಳಿವಳಿಕೆಯ ಕೊರತೆಯನ್ನು ತೀವ್ರಗೊಳಿಸಬಲ್ಲದು. ನಿಜವಾದ ಶಿಕ್ಷಣವು ನಮ್ಮಲ್ಲಿ ಮಾನವೀಯ ಜವಾಬ್ದಾರಿಯನ್ನು, ಸಮುದಾಯದ ಬಗ್ಗೆ ಕಾಳಜಿಯನ್ನು ತರಬೇಕು. ಆನ್‍ಲೈನ್ ಶಿಕ್ಷಣವು ಇದರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ. ಹಾಗಿದ್ದರೆ ಆನ್‍ಲೈನ್ ಕಲಿಕೆ ನಿಷಿದ್ಧವೇ? ಇಲ್ಲ; ಶಿಕ್ಷಣ ಸಂಸ್ಥೆಗಳ ಮೂಲಭೂತ ಮಾನವೀಯ, ಸಾಮಾಜಿಕ ಹಾಗೂ ವೈಚಾರಿಕ ವಾತಾವರಣ
ವನ್ನು ಭದ್ರವಾಗಿರಿಸಿಕೊಂಡು, ನೇರವಾದ ಸಮಗ್ರ ಶಿಕ್ಷಣದ ಮೂಲಕವೇ ಜ್ಞಾನವನ್ನು ಸೃಷ್ಟಿಮಾಡು
ವುದಾದರೆ, ಇದರ ಭಾಗವಾಗಿ ಆನ್‍ಲೈನ್ ಶಿಕ್ಷಣವನ್ನು ಬಳಸಿಕೊಳ್ಳಬಹುದು. ಏಕೆಂದರೆ ಅಪಾರವಾದ ವಿಶ್ವಮಟ್ಟದ ಜ್ಞಾನದ ಆಕರವು ಮಾಹಿತಿ ತಂತ್ರಜ್ಞಾನದಿಂದಾಗಿ ಲಭ್ಯವಿದೆ. ಇದರ ಪ್ರಯೋಜನವನ್ನು ಪಡೆಯದಿದ್ದರೆ ಅದು ಮೂರ್ಖತನವಾಗುತ್ತದೆ. ಆದರೆ, ಅದನ್ನು ನೇರ ಶಿಕ್ಷಣಕ್ಕೆ ಒಂದು ಪರ್ಯಾಯವೆಂದು ರೂಪಿಸಲು ಹೊರಟರೆ ನಾವು ಬಲಪಂಥೀಯ ಬಂಡವಾಳಶಾಹಿ ರಾಜಕೀಯದ ಬಲಿಪಶುಗಳಾಗುತ್ತೇವೆ. ಈ ಎಚ್ಚರ ಅಗತ್ಯ.

ಲೇಖಕ: ಕುವೆಂಪು ವಿ.ವಿ.ಯ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT