ರಮೇಶ ಬಿಜೆಪಿಗೆ ಹೋದರೆ ಪರಿಸ್ಥಿತಿಯೇ ಬೇರೆ: ಅಣ್ಣನಿಗೆ ಸತೀಶ ಜಾರಕಿಹೊಳಿ ಎಚ್ಚರಿಕೆ

ಸೋಮವಾರ, ಮೇ 27, 2019
29 °C

ರಮೇಶ ಬಿಜೆಪಿಗೆ ಹೋದರೆ ಪರಿಸ್ಥಿತಿಯೇ ಬೇರೆ: ಅಣ್ಣನಿಗೆ ಸತೀಶ ಜಾರಕಿಹೊಳಿ ಎಚ್ಚರಿಕೆ

Published:
Updated:

ಬೆಳಗಾವಿ: ‘ಗೋಕಾಕದ ಶಾಸಕ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಅಧಿಕೃತ ಹಾಗೂ ಬಹಿರಂಗವಾಗಿ ಬಿಜೆಪಿ ಸೇರ್ಪಡೆಯಾದರೆ ಪರಿಸ್ಥಿತಿಯೇ ಬೇರೆಯಾಗುತ್ತದೆ‌’ ಎಂದು ಸೋದರ, ಅರಣ್ಯ ಸಚಿವ ಸತೀಶ ಜಾರಕಿಹೊಳಿ ಇಲ್ಲಿ ಎಚ್ಚರಿಕೆ ನೀಡಿದರು.‌

‘ಅವರು ಇನ್ನೂ ರಂಗಮುಸುಕಿನಲ್ಲಿ, ಕತ್ತಲಲ್ಲಿ ಕುಳಿತು ಕಲ್ಲೆಸೆಯುತ್ತಿದ್ದಾರೆ’ ಎಂದು ಭಾನುವಾರ ಪತ್ರಕರ್ತರಿಗೆ ತಿಳಿಸಿದರು.

‘ಈಗಾಗಲೇ ಅವರು ಪಕ್ಷದಿಂದ ಹೊರಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಂಡರೂ ಅಷ್ಟೇ, ಬಿಟ್ಟರೂ ಅಷ್ಟೆ. ಕ್ರಮ ಜರುಗಿಸಿದರೆ ಅದು ಸಾಂಕೇತಿಕವಾಗುತ್ತದಷ್ಟೇ. ಅವರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸ್ಪೀಕರ್‌ಗೆ ದೂರು ನೀಡಿದ್ದಾರಲ್ಲವೇ? ಅದು ಇನ್ನೂ ಬಾಕಿ ಇದ್ದು, ಇತ್ಯರ್ಥವಾದರೆ ಮುಗಿದು ಹೋಗುತ್ತದಷ್ಟೇ’ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ರಮೇಶ ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ ಎನ್ನುವ ಸುಳಿವು ನೀಡಿದರು.

‘ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ, ಈ ಚುನಾವಣೆಯಲ್ಲಿ ಸ್ವಲ್ಪ ಗೊಂದಲವಾಗುತ್ತದೆ ನಿಜ. ಏಕೆಂದರೆ 20 ವರ್ಷದಿಂದ ಅವರ ಹಿಡಿತದಲ್ಲಿತ್ತು. ನಾವು ಒಂದೇ ವಾರದಲ್ಲಿ ಸುಲಭವಾಗಿ ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವುದು ಗೊತ್ತಿದೆ. ಆದರೆ, ಪಕ್ಷದಲ್ಲಿ ಉಳಿಯುವವರೂ ಇದ್ದಾರೆ. ರಮೇಶ, ಸತೀಶ ಎಂದೇನಿಲ್ಲ. 35–40 ವರ್ಷದಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ; ಶಾಸಕರು (ರಮೇಶ) ಹೇಳಿದರೂ ನಾವು ಕಾಂಗ್ರೆಸ್‌ಗೇ ವೋಟ್ ಹಾಕುತ್ತೇವೆ ಎಂದು ಅಲ್ಲಿನ ಬಹಳಷ್ಟು ಮಂದಿ ಹೇಳಿದ್ದಾರೆ. ಅವರಿಗೆ ಕ್ಲೋಸ್ ಇರುವ ಅಭಿಮಾನಿಗಳು ಬಿಜೆಪಿಗೆ ಹಾಕೇ ಹಾಕುತ್ತಾರೆ; ಅದರಲ್ಲಿ ಪ್ರಶ್ನೆ ಇಲ್ಲ’ ಎಂದರು.

‘ಗೋಕಾಕ ಶಾಸಕ ನಮ್ಮ ಪಕ್ಷದ ಜತೆಗಿಲ್ಲ. ಹೀಗಾಗಿ, ಅನಿವಾರ್ಯವಾಗಿ ನಾನು ಪ್ರಚಾರ ನಡೆಸಬೇಕಾಗಿದೆ. ಅವರು ಶನಿವಾರ ಗೋಕಾಕದಲ್ಲಿ ಸಭೆ ನಡೆಸಿ, ಬಿಜೆಪಿ ಬೆಂಬಿಸುವಂತೆ ಬೆಂಬಲಿಗರಿಗೆ ಹೇಳಿದ್ದಾರೆ. ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ’ ಎಂದು ತಿಳಿಸಿದರು.

‘ಗೋಕಾಕ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಳೆಸಿದ್ದು ನಾನು. ಬೆಳೆಸಿ ಅವರ ಕೈಗೆ ಕೊಟ್ಟಿದ್ದೇವೆ. ಯಾರ ಶಕ್ತಿ ಏನು ಎಂಬುದು ಶೀಘ್ರವೇ ಗೊತ್ತಾಗಲಿದೆ. ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್. ಮುಂದೆ ಫೈನಲ್ ಪಂದ್ಯವಿದೆ. ಅದಕ್ಕೆ 6 ತಿಂಗಳು ಅವಕಾಶವಿದ್ದು, ಸಿದ್ಧತೆ ಮಾಡಿಕೊಳ್ಳುತ್ತೇವೆ. ಫೈನಲ್ ಮ್ಯಾಚ್ ಬಗ್ಗೆ ಹೆಚ್ಚಿನ ಆಸಕ್ತಿ ನಮಗೂ ಇದೆ. ಅಲ್ಲಿ ಕಾರ್ಯಕರ್ತರು ನಮ್ಮ ಜತೆಗೆ ಅಥವಾ ಅವರೊಂದಿಗೆ ಗುರುತಿಸಿಕೊಳ್ಳಬೇಕು’ ಎಂದು ಉಪಚುನಾವಣೆಯ ಸಾಧ್ಯತೆಯ ಸುಳಿವು ನೀಡಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಆಪರೇಷನ ಕಮಲ ಆರಂಭವಾಗಲಿದೆ ಎಂಬ ಸುಳಿವು ನೀಡಿದ ಅವರು, ‘ರಮೇಶ ಜಾರಕಿಹೊಳಿ ಅವರಿಂದ ಸಮ್ಮಿಶ್ರ ಸರ್ಕಾರಕ್ಕೆ ನಿರಂತರವಾಗಿ ಕಂಟಕವಿದೆ. ಮಾರ್ಚ್‌ನಲ್ಲೂ ಆಪರೇಷನ್‌ ಕಮಲದ ಯತ್ನ ನಡೆದತ್ತು. ಅದು ಮುಂದುವರಿಯಲಿದೆ’ ಎಂದೂ ಹೇಳಿದರು.

ಇದಕ್ಕೂ ಮುನ್ನ, ಬಿಜೆಪಿಯ 300 ಯುವ ಕಾರ್ಯಕರ್ತರು ಸತೀಶ ಜಾರಕಿಹೊಳಿ ಬೆಂಬಲಿಸಿ ಕಾಂಗ್ರೆಸ್‌ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 22

  Happy
 • 2

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !