ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನವಾಗದ ‘ಸತ್ಯ’: ಟೀಕೆಗಳಿಗೆ ಸೀಮಿತ

ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ
Last Updated 24 ಫೆಬ್ರುವರಿ 2020, 1:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೂರುಸಾವಿರ ಮಠದ ಭಕ್ತರಲ್ಲಿ ಕುತೂಹಲ ಮೂಡಿಸಿದ್ದ ಉತ್ತರಾಧಿಕಾರಿ ವಿವಾದ ಪರಿಹಾರಕ್ಕಾಗಿ ಭಾನುವಾರ ಕರೆಯಲಾಗಿದ್ದ ‘ಸತ್ಯ ದರ್ಶನ’ ಸಭೆಯು ಆರೋಪ, ಟೀಕೆಗಳಿಗೆ ಮಾತ್ರ ಸೀಮಿತವಾಯಿತು.

ಇಲ್ಲಿನ ನೆಹರೂ ಮೈದಾನದಿಂದ ಸಾವಿರಾರು ಭಕ್ತರೊಂದಿಗೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮೂರುಸಾವಿರ ಮಠದವರೆಗೆ ಪಾದಯಾತ್ರೆ ನಡೆಸಿದರು. ದಿಂಗಾಲೇಶ್ವರ ಸ್ವಾಮೀಜಿಯನ್ನು ಮಠದ ಉತ್ತರಾಧಿಕಾರಿ ಎಂದು ಘೋಷಿಸಬೇಕು ಎಂದು ಭಕ್ತರು ಘೋಷಣೆ ಕೂಗಿದರು. ಮಠದ ಆವರಣದಲ್ಲಿ ಸಭೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಮುಖ್ಯದ್ವಾರದ ಮುಂಭಾಗದಲ್ಲಿಯೇ ಸಭೆ ನಡೆಸಿದರು.

‘ಉತ್ತರಾಧಿಕಾರಿಯಾಗುವುದಕ್ಕೆಕೆಲವು ಕಾವಿಧಾರಿಗಳು ಅಡ್ಡಿ ಪಡಿಸುತ್ತಿದ್ದಾರೆ. ನ್ಯಾಯಾಲಯದ ಹೊರಗಡೆವಿವಾದ ಬಗೆಹರಿಸಲು ಮಠದ ಉನ್ನತ ಸಮಿತಿಯವರಿಗೆ 45 ದಿನಗಳವರೆಗೆ ಸಮಯ ನೀಡುತ್ತೇನೆ. ಒಳ್ಳೆಯ ನಿರ್ಧಾರಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ. ಒಂದುವೇಳೆ ಪರಿಹರಿಸದಿದ್ದರೆ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಮಠದ ಉತ್ತರಾಧಿಕಾರಿ ನಾನೇ ಎನ್ನುತ್ತಿರುವ ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿಯೂ ಮಠಕ್ಕೆ ಬಂದು ಕರ್ತೃ ಗದ್ದುಗೆಗೆ ನಮಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಲಿಂಗೈಕ್ಯ ಮೂಜಗಂ ಹಾಗೂ ಈಗಿನ ಮೂಜಗು ಅವರು ಉತ್ತರಾಧಿಕಾರಿ ಎಂದು ನೋಂದಣಿ ಮಾಡಿಸಿದ್ದಾರೆ. ಮಠದ ಉತ್ತರಾಧಿಕಾರಿಯ ವಿವಾದ ನ್ಯಾಯಾಲಯದಲ್ಲಿದೆ. ಈಗಿರುವ ಮೂಜಗು ಅವರು ಸಮರ್ಥರಾಗಿದ್ದಾರೆ. ಹೊಸ ಉತ್ತರಾಧಿಕಾರಿ ನೇಮಕದ ಅಗತ್ಯ ಇಲ್ಲ’ ಎಂದು ಈಗಿನ ಪೀಠಾಧಿಪತಿಯ ಪರವಾಗಿ ಮಾತನಾಡಿದರು.

ಸಭೆಯಲ್ಲಿ ಮೂರುಸಾವಿರ ಮಠದ ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದ ದಾಖಲೆ ಮಂಡಿಸುತ್ತೇನೆ ಎಂದಿದ್ದ ದಿಂಗಾಲೇಶ್ವರ ಸ್ವಾಮೀಜಿ ಯಾವ ದಾಖಲೆಗಳನ್ನೂ ಪ್ರದರ್ಶಿಸಲಿಲ್ಲ. ದಾಖಲೆಗಳಿಗೆ ಉತ್ತರ ನೀಡಲುಬರಬೇಕಾಗಿದ್ದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ದಿಂಗಾಲೇಶ್ವರ ಆಯ್ಕೆ ಪತ್ರಕ್ಕೆ ಸಹಿ ಹಾಕಿದ್ದ 52 ಗಣ್ಯರಲ್ಲಿ ಬಹುತೇಕರು ಬರಲಿಲ್ಲ.

ಶಿವರಾತ್ರಿ ಅಮಾವಾಸ್ಯೆಯಾಗಿದ್ದರಿಂದಭಕ್ತ ಸಮೂಹ ಮಠದತ್ತ ಹರಿದು ಬಂತು. ಬ್ಯಾರಿಕೇಡ್‌ಗಳ ನಡುವೆ ಸಾಲಿನಲ್ಲಿ ಸಾಗಿ ಕರ್ತೃ ಗದ್ದುಗೆಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

****

ಅಂದು ನಿನ್ನನ್ನು ಉತ್ತರಾಧಿಕಾರಿಯಾಗಿ ಮಾಡಿದ್ದೆ. ಇಂದು ಬೇಡ ಎಂದು ಕರ್ತೃ ಗದ್ದುಗೆ ಬಳಿ ಗುರುಗಳು (ಗುರುಸಿದ್ಧ ರಾಜಯೋಗೀಂದ್ರ) ಹೇಳಲಿ. ನಾನು ಹೊರಟು ಬಿಡುವೆ’
-ದಿಂಗಾಲೇಶ್ವರ ಸ್ವಾಮೀಜಿ, ಬಾಲೇಹೂಸೂರು

ಉತ್ತರಾಧಿಕಾರಿ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಮಠದ ಆವರಣದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದೆಂದು ತಿಳಿಸಿದರೂ ಸಭೆ ನಡೆದಿರುವುದು ವಿಷಾದನೀಯ
ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಪೀಠಾಧಿಪತಿ, ಮೂರುಸಾವಿರ ಮಠ

ಮೂರುಸಾವಿರ ಮಠಕ್ಕೆ ನ್ಯಾಯಾಲಯ ಬಿಟ್ಟು ಬೇರೆ ರೀತಿಯಿಂದ ಉತ್ತರಾಧಿಕಾರಿಯಾಗಲು ಪ‍್ರಯತ್ನ ಪಟ್ಟರೆ ನಮಗೂ ಭಕ್ತರಿದ್ದಾರೆ. ತಕ್ಕ ಉತ್ತರ ನೀಡುತ್ತೇವೆ
-ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ, ಘಟಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT