ಸೋಮವಾರ, ಏಪ್ರಿಲ್ 19, 2021
23 °C
ಬೆಳಗಾವಿಯ ಜಿಎಸ್‌ಎಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ವಿನೂತನ ಉಪಕ್ರಮ

ಮರ ಮಾಹಿತಿಗೂ ಕ್ಯೂಆರ್‌ ಕೋಡ್!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ತಿಲಕವಾಡಿಯಲ್ಲಿರುವ ಗೋವಿಂದರಾಮ್ ಸೆಕ್ಸಾರಿಯಾ (ಜಿಎಸ್‌ಎಸ್‌) ಪಿಯು ಹಾಗೂ ಪದವಿ ಕಾಲೇಜು ಕ್ಯಾಂಪಸ್‌ನಲ್ಲಿರುವ ಮರಗಳನ್ನು ಪರಿಚಯಿಸಲು ಅವುಗಳಿಗೆ ‘ಕ್ಯೂಆರ್‌ ಕೋಡ್‌’ವುಳ್ಳ ಲ್ಯಾಮಿನೇಟ್ ಮಾಡಿದ ಶೀಟ್‌ಗಳನ್ನು ಹಾಕಿರುವುದು ಆಕರ್ಷಿಸುತ್ತಿದೆ.

ಅರಳಿ, ಆಲ, ಬೇವು, ಮಾವು ಸೇರಿದಂತೆ 110 ವಿವಿಧ ಜಾತಿಯ 700ಕ್ಕೂ ಹೆಚ್ಚಿನ ಮರ–ಗಿಡಗಳನ್ನು ಈ ಕ್ಯಾಂಪಸ್‌ ಹೊಂದಿದೆ. ಈವರೆಗೆ 700 ಗಿಡ–ಮರಗಳಿಗೆ ಕ್ಯೂಆರ್‌ ಕೋಡ್‌ ತಂತ್ರಜ್ಞಾನದ ಶೀಟ್‌ಗಳನ್ನು ಹಾಕಲಾಗಿದೆ. ಕಪ್ಪು ಹಾಗೂ ಬಿಳಿ ಬಣ್ಣಗಳನ್ನು ಒಳಗೊಂಡಿರುವ ಈ ಕ್ಯೂಆರ್‌ ಕೋಡ್‌ಗಳನ್ನು ವೆಬ್‌ ಲಿಂಕ್‌ ಇಲ್ಲವೇ ಅಂತರ್ಜಾಲ ಸಂಪರ್ಕವುಳ್ಳ ಸ್ಮಾರ್ಟ್‌ ಫೋನ್‌ಗಳ ಮೂಲಕ ಸ್ಕ್ಯಾನ್ ಮಾಡಿ ಓದಬಹುದು. ಆಯಾ ಮರದ ಬಗ್ಗೆ ಚಿತ್ರಸಮೇತ ಮಾಹಿತಿ ಹಾಕಲಾಗಿದೆ. ಕಾಲೇಜು ಕ್ಯಾಂಪಸ್‌ ಒಂದರಲ್ಲಿ ಈ ರೀತಿ ವಿನೂತನವಾಗಿ ಮರಗಳನ್ನು ಪರಿಚಯಿಸುವ ಕೆಲಸ ನಡೆದಿರುವುದು ಇದೇ ಮೊದಲ ಎನ್ನಲಾಗಿದೆ.

ಹಲವು ಮಾಹಿತಿ: ಈ ಶೀಟ್‌ನಲ್ಲಿ ‘ಜಿಎಸ್‌ಎಸ್‌ ಮರಗಳು’ ಎಂದು ಬರೆಯಲಾಗಿದೆ. ‘ನನ್ನನ್ನು ತಿಳಿದುಕೊಳ್ಳಲು ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಸ್ಯ್ಕಾನ್ ಮಾಡಿದರೆ, ಮರಾಠಿ, ಕನ್ನಡ ಹಾಗೂ ಹಿಂದಿಯಲ್ಲಿ ಹೆಸರು ತಿಳಿದುಕೊಳ್ಳಬಹುದು. ಉಳಿದಂತೆ, ವೈಜ್ಞಾನಿಕ ಹೆಸರು, ಹೂ ಬಿಡುವುದು ಯಾವಾಗ, ಆ ಮರದಿಂದ ಆಗುವ ಉಪಯೋಗವೇನು, ಔಷಧೀಯ ಗುಣವಿದೆಯೇ ಎನ್ನುವ ಸಂಪೂರ್ಣ ಮಾಹಿತಿ (ಇಂಗ್ಲಿಷ್‌ನಲ್ಲಿ) ತೆರೆದುಕೊಳ್ಳುತ್ತದೆ. ಅಲ್ಲದೇ, ಆ ಮರ ಕ್ಯಾಂಪಸ್‌ನ ಯಾವ ಭಾಗದಲ್ಲಿದೆ ಎನ್ನುವುದನ್ನೂ ತಿಳಿದುಕೊಳ್ಳಬಹುದು. ಎಲೆ, ಹೂವಿನ ಫೋಟೊಗಳನ್ನು ಕೂಡ ನೋಡಬಹುದಾಗಿದೆ. ಇದು ವಿದ್ಯಾರ್ಥಿಗಳೊಂದಿಗೆ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

‘ನಮ್ಮದು ಬಹುತೇಕ ಹಸಿರು ಕ್ಯಾಂಪಸ್‌ ಆಗಿದೆ. ದೊಡ್ಡ ದೊಡ್ಡ ಮರಗಳಿವೆ. ಜೊತೆಗೆ, ವಿನಾಶದ ಅಂಚಿನಲ್ಲಿರುವ ಜಾತಿಯ ಮರ ಹಾಗೂ ಗಿಡಗಳಿವೆ. ಅವುಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಮರಗಳ ಕುರಿತು ಮಾಹಿತಿ ನೀಡಲು ಈ ಸ್ಮಾರ್ಟ್‌ ಹಾಗೂ ಆಕರ್ಷಕ ವಿಧಾನ ಅನುಸರಿಸಿದ್ಙೇವೆ. ಕ್ಯಾಂಪಸ್‌ಗೆ ಬರುವವರು ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಆ ಮರದ ಮೂಲ ಮಾಹಿತಿಯಿಂದಿಗೆ ವೈಶಿಷ್ಟ್ಯತೆಯನ್ನು ಚಿತ್ರಗಳ ಸಮೇತ ತಿಳಿದುಕೊಳ್ಳಬಹುದು’ ಎಂದು ಯೋಜನೆಯನ್ನು ನಿರ್ವಹಿಸುತ್ತಿರುವ ಭೌತವಿಜ್ಞಾನ ಉಪನ್ಯಾಸಕ ಪ್ರವೀಣ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳ ಸಹಕಾರ:

‘ಎಲ್ಲ ಮರಗಳಿಗೂ ಕ್ಯೂಆರ್‌ ಕೋಡ್ ಸಿದ್ಧಪಡಿಸಲು, ಕಾಲೇಜಿನ ಮೇಕರ್ ಸ್ಪೇಸ್‌ ಗ್ರೂಪ್‌ ಸಹಯೋಗದಲ್ಲಿ ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ವೈಜ್ಞಾನಿಕ ಮಾಹಿತಿಯನ್ನು ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದರು’ ಎಂದು ಮಾಹಿತಿ ನೀಡಿದರು.

‘ಬೆಳಗಾವಿಯ ಶ್ರೀನಗರ, ಅಶೋಕನಗರ ಉದ್ಯಾನ ಹಾಗೂ ವ್ಯಾಕ್ಸಿನ್ ಡಿಪೊದಲ್ಲಿರುವ ಮರಗಳಿಗೂ ಕ್ಯೂಆರ್‌ ಕೋಡ್‌ ಅಳವಡಿಸುವುದಕ್ಕೆ ಅವಕಾಶವಿದೆ. ನಗರಪಾಲಿಕೆಯವರು ಆಸಕ್ತಿ ವಹಿಸಿದರೆ ತಾಂತ್ರಿಕ ಸಹಕಾರ ನೀಡಲು ಮೇಕರ್ ಸ್ಪೇಸ್‌ ಗ್ರೂಪ್‌ ಸಿದ್ಧವಿದೆ’ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು