ಭಾನುವಾರ, ಆಗಸ್ಟ್ 1, 2021
27 °C
ಕೊಡಗು ವಿದ್ಯಾಲಯದ ಆವರಣದಲ್ಲಿ ಪೋಷಕರ ಆಕ್ರೋಶ

ಮಡಿಕೇರಿ | ಖಾಸಗಿ ಶಾಲೆಯಿಂದ ಶುಲ್ಕ ವಸೂಲಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಪುಸ್ತಕ ಬೇಕಾದರೆ ಶಾಲಾ ಶುಲ್ಕ ಕಟ್ಟಬೇಕು; ಇಲ್ಲದಿದ್ದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ...’ ಇದು ಮಡಿಕೇರಿಯ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯೊಂದು ಪೋಷಕರಿಗೆ ನೀಡಿದ ಸೂಚನೆ.

ನಗರದ ಕೊಡಗು ವಿದ್ಯಾಲಯ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಸಲುವಾಗಿ ಶಾಲೆಗೆ ಬರಲು ಹೇಳಿತ್ತು. ಈ ಹಿನ್ನೆಲೆ ಪೋಷಕರು ಶಾಲೆಗೆ ತೆರಳಿದಾಗ ಮೊದಲು ಶಾಲಾ ಶುಲ್ಕವನ್ನು ಕಟ್ಟುವಂತೆ ಅಲ್ಲಿನ ಆಡಳಿತ ಮಂಡಳಿ ಸೂಚಿಸಿದೆ ಎಂಬ ಆರೋಪ ಗುರುವಾರ ಕೇಳಿಬಂದಿದೆ.

‘ಇದು ಲಾಕ್‌ಡೌನ್ ಸಮಯ. ಶಾಲೆ ಆರಂಭವಾಗಲು ಇನ್ನೂ ಸಮಯವಿದೆ. ಸರ್ಕಾರವು ಇನ್ನೂ ಯಾವುದೇ ಆದೇಶ ಬಂದಿಲ್ಲ’ ಎಂದು ಪೋಷಕರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿಯವರು, ‘ಪುಸ್ತಕ ಬೇಕಿದ್ದಲ್ಲಿ ವಿದ್ಯಾರ್ಥಿಗಳ ಶುಲ್ಕ ಪಾವತಿಸುವುದು ಕಡ್ಡಾಯ. ಶುಲ್ಕ ಕಟ್ಟಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಹೇಳಿದ್ದು ಪೋಷಕರ ಅಸಮಾಧಾನಕ್ಕೆ ಕಾರಣವಾಯಿತು.

ಪೋಷಕರು ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಸ್ಥಳಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಪದಾಧಿಕಾರಿಗಳೂ ಆಗಮಿಸಿದರು. ಶಾಲಾ ಆಡಳಿತ ಮಂಡಳಿಯ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು. ಪೋಷಕರು, ವೇದಿಕೆ ಕಾರ್ಯಕರ್ತರು ಹಾಗೂ ಶಾಲಾ ಆಡಳಿತ ಮಂಡಳಿಯವರ ನಡುವೆ ಮಾತಿನ ಚಕಮಕಿ ನಡೆಯಿತು.

ಡಿ.ಸಿಗೆ ವರದಿ: ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂಬಂಧ ಪತಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

**

ಶುಲ್ಕ ಪಡೆಯದಿದ್ದಲ್ಲಿ ಶಾಲೆ ನಡೆಸಲು ಅಸಾಧ್ಯ. ಶಿಕ್ಷಕರಿಗೆ ಇದೇ ಹಣದಲ್ಲಿ ವೇತನ ಪಾವತಿಸಬೇಕು. ರಜೆ ಇದ್ದರೂ ನಾವು ಶಾಲೆ ನಿರ್ವಹಣೆ ಮಾಡಬೇಕು.
-ವಿದ್ಯಾ, ಪ್ರಾಂಶುಪಾಲರು, ಕೊಡಗು ವಿದ್ಯಾಲಯ

**

ಪುಸ್ತಕ ಪಡೆಯಲು ಶಾಲೆಗೆ ತೆರಳಿದ ಸಂದರ್ಭ ಶುಲ್ಕ ಕೇಳುತ್ತಿದ್ದಾರೆ. ಶುಲ್ಕ ಪಾವತಿಸಲು ಸಾಧ್ಯವಾಗದಿದ್ದಲ್ಲಿ ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದೊಯ್ಯಿರಿ ಎಂದು ಹೇಳಿದ್ದಾರೆ. ಇವರ ವಿರುದ್ಧ ಕ್ರಮವಾಗಬೇಕು.
-ಸಮೀನಾ, ಪೋಷಕರು

**

ಶಾಲೆ ತೆರೆಯಲು ಇನ್ನೂ ಸರ್ಕಾರದಿಂದ ಆದೇಶವೇ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಪುಸ್ತಕ ಪಡೆಯಲು ಪೋಷಕರನ್ನು ಕರೆಯಿಸಿ ಶುಲ್ಕ ಕೇಳುತ್ತಿರುವುದು ಸರಿಯಲ್ಲ.
-ಪವನ್ ಪೆಮ್ಮಯ್ಯ, ಅಧ್ಯಕ್ಷ, ನಗರ ರಕ್ಷಣಾ ವೇದಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು