ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಕ್ಕೆ ಯತ್ನಿಸಿ ಮೊಣಕೈ ಕಚ್ಚಿದ ಸೆಕ್ಯುರಿಟಿ

ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಘಟನೆ| ಮಂಕಿ ಟೋಪಿ ಧರಿಸಿ ಅಮಾಯಕನಂತೆ ನಟಿಸಿದ್ದ ಆರೋಪಿ
Last Updated 17 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ತಾನು ಕೆಲಸಕ್ಕಿದ್ದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಅಲ್ಲಿಂದ ಪರಾರಿಯಾಗಿ ಪುನಃ ಸೆಕ್ಯುರಿಟಿ ಕೆಲಸ ಮಾಡುತ್ತ ಅಮಾಯಕನಂತೆ ನಟಿಸುತ್ತಿದ್ದ ಆರೋಪಿ ಸುಮನ್ ದೇವ್‌ (21) ಎಂಬಾತ ಬಾಗಲೂರು ಪೊಲೀಸರ ಚುರುಕಿನ ತನಿಖೆಯಿಂದ ಜೈಲು ಪಾಲಾಗಿದ್ದಾನೆ.

‘ಅಸ್ಸಾಂನ ಸುಮನ್‌ದೇವ್‌ ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಸೆಕ್ಯುರಿಟಿ ಏಜೆನ್ಸಿಯೊಂದರ ಮೂಲಕ ಬಾಗಲೂರಿನ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅದೇ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲೇ ಆರೋಪಿ ಕೃತ್ಯ ಎಸಗಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪತಿಯಿಂದ ವಿಚ್ಛೇದನ ಪಡೆದಿರುವ 35 ವರ್ಷದ ಮಹಿಳೆ ಒಂಟಿಯಾಗಿ ಫ್ಲ್ಯಾಟ್‌ನಲ್ಲಿ ವಾಸವಿದ್ದಾರೆ. ಅವರ ಬಗ್ಗೆ ತಿಳಿದುಕೊಂಡಿದ್ದ ಆರೋಪಿ ನಿತ್ಯವೂ ಹಿಂಬಾಲಿಸುತ್ತಿದ್ದ. ಅಕ್ಟೋಬರ್ 19ರಂದು ತಡರಾತ್ರಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದ’ ಎಂದರು.

ಆರೋಪಿ ವಿರುದ್ಧ ಹೋರಾಡಿದ್ದ ಮಹಿಳೆ: ‘ಮಹಿಳೆ ಎಂದಿನಂತೆ ಮನೆಯ ಕೊಠಡಿಯಲ್ಲಿ ಮಲಗಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಆರೋಪಿ ಕಿಟಕಿ ಮೂಲಕ ಒಳನುಗ್ಗಿ ಕೊಠಡಿಗೆ ಹೋಗಿದ್ದ. ಮಹಿಳೆಯ ಅಂಗಾಂಗಗಳನ್ನು ಮುಟ್ಟಿ ಎಳೆದಾಡಿದ್ದ. ಎಚ್ಚರಗೊಂಡ ಮಹಿಳೆ ಆತನನ್ನು ದೂರ ತಳ್ಳಿದ್ದರು’ ಎಂದು ಅಧಿಕಾರಿ ಹೇಳಿದರು.

‘ಪುನಃ ಮಹಿಳೆ ಮೈ ಮೇಲೆ ಬಿದ್ದಿದ್ದ ಆರೋಪಿ ಅವರ ಬಟ್ಟೆ ಹರಿದು ಅತ್ಯಾಚಾರಕ್ಕೆ ಯತ್ನಿಸಿದ್ದ. ಅದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಅವರ ಎರಡೂ ಮೊಣಕೈಗಳಿಗೆ ಕಚ್ಚಿ ಗಾಯಗೊಳಿಸಿದ್ದ. ದಿಟ್ಟವಾಗಿ ಎದುರಿಸಿದ್ದ ಮಹಿಳೆ ಆತನನ್ನು ತಳ್ಳುತ್ತಲೇ ಕೊಠಡಿಯಿಂದ ಹೊರಗೆ ಬಂದು ರಕ್ಷಣೆಗಾಗಿ ಕೂಗಾಡಿದ್ದರು. ಅಕ್ಕ–ಪಕ್ಕದ ನಿವಾಸಿಗಳು ಬರುವಷ್ಟರಲ್ಲಿ ಆರೋಪಿ ಕಿಟಕಿ ಮೂಲಕ ಅಲ್ಲಿಂದ ಪರಾರಿಯಾಗಿದ್ದ’ ಎಂದು ತಿಳಿಸಿದರು.

‘ನಿವಾಸಿಗಳೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಘಟನೆ ಬಗ್ಗೆ ಮಹಿಳೆ ನೀಡಿದ್ದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತುಲ’ ಎಂದು ಅಧಿಕಾರಿ ಹೇಳಿದರು.

ಮಂಕಿ ಟೋಪಿ ಧರಿಸಿ ದಿಕ್ಕುತಪ್ಪಿಸಿದ್ದ: ‘ಅಪಾರ್ಟ್‌ಮೆಂಟ್‌ ಸಮುಚ್ಚಯದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಯಾರೊಬ್ಬರೂ ಹೊರಗಡೆಯಿಂದ ಒಳಗೆ ಬಂದಿರುವುದು ಕಾಣಿಸಿಲಿಲ್ಲ. ಹೀಗಾಗಿ, ಸೆಕ್ಯುರಿಟಿ ಸಿಬ್ಬಂದಿ ಮೇಲೆಯೇ ಹೆಚ್ಚು ಅನುಮಾನ ಬಂದಿತ್ತು’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಸೆಕ್ಯುರಿಟಿ ಸಿಬ್ಬಂದಿಯನ್ನು ಸಾಲಾಗಿ ನಿಲ್ಲಿಸಿ ವಿಚಾರಣೆ ನಡೆಸಲಾಯಿತು. ಎಲ್ಲರೂ ಮುಖ ಕಾಣುವಂತೆ ನಿಂತಿದ್ದರು. ಆದರೆ, ಆರೋಪಿ ಸುಮನ್‌ದೇವ್‌ ಮಂಕಿ ಟೋಪಿ ಧರಿಸಿದ್ದ. ಆ ಬಗ್ಗೆ ಪ್ರಶ್ನಿಸಿದಾಗ, ತನಗೆ ಹುಷಾರಿಲ್ಲ ಜ್ವರವೆಂದು ಸುಳ್ಳು ಹೇಳಿ ಪೊಲೀಸರನ್ನೇ ದಿಕ್ಕುತಪ್ಪಿಸಿದ್ದ.’

‘ಆತನ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿತ್ತು. ಬೇರೆ ಫ್ಲ್ಯಾಟ್‌ನಲ್ಲೂ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆತ ಅಲ್ಲೆಲ್ಲ ಓಡಾಡುತ್ತಿದ್ದ ವಿಷಯ ಗೊತ್ತಾಯಿತು. ಇನ್‌ಸ್ಪೆಕ್ಟರ್ ರಾಮಮೂರ್ತಿ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಹಿರಿಯ ಅಧಿಕಾರಿ ಹೇಳಿದರು.

’ಕೃತ್ಯದ ದಿನ ಆರೋಪಿಯ ಗುರುತಿನ ಚೀಟಿ ಮನೆಯಲ್ಲೇ ಬಿದ್ದಿತ್ತು. ಆ ಚೀಟಿ ಮಹಿಳೆಗೆ ಕಂಡಿರಲಿಲ್ಲ. ಎರಡು ದಿನಗಳ ಬಳಿಕ ಮಹಿಳೆ ಇಲ್ಲದ ವೇಳೆಯಲ್ಲಿ ಪುನಃ ಮನೆಗೆ ಹೋಗಿ ಗುರುತಿನ ಚೀಟಿ ತಂದಿದ್ದ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT