ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ನುಡಿಯಲ್ಲೇ ಸೇವೆ ನೀಡಿ: ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಹಕ್ಕೊತ್ತಾಯ

ವಿಶ್ವ ಗ್ರಾಹಕರ ದಿನಾಚರಣೆ: ಟ್ವಿಟ್ಟರ್‌ನಲ್ಲಿ ಹಕ್ಕೊತ್ತಾಯ
Last Updated 15 ಮಾರ್ಚ್ 2020, 14:15 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಹಾಗೂ ಕಂಪನಿಗಳು ಗ್ರಾಹಕರಿಗೆ ಅವರ ತಾಯಿ ನುಡಿಯಲ್ಲೇ ಸೇವೆ ನೀಡಬೇಕು ಎಂದು ಒತ್ತಾಯಿಸಿ ಟ್ವಿಟ್ಟರ್‌ನಲ್ಲಿ ಭಾನುವಾರ ಹಕ್ಕೊತ್ತಾಯ ಮಂಡಿಸಲಾಯಿತು. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲೇ ಸೇವೆಗಳನ್ನು ಒದಗಿಸಬೇಕಾದ ಮಹತ್ವದ ಬಗ್ಗೆ ಸಾವಿರಾರು ಗ್ರಾಹಕರು ವಿವರಿಸಿ ಹೇಳಿದರು. ಈ ಕುರಿತ ಸಾವಿರಾರು ಟ್ವೀಟ್‌ಗಳು ಹರಿದಾಡಿದವು.

ಕನ್ನಡ ಗ್ರಾಹಕರ ಕೂಟವು ಭಾನುವಾರ ಬೆಳಿಗ್ಗೆ 10 ರಿಂದ #ServeInMyLanguage ಹ್ಯಾಷ್‌ಟ್ಯಾಗ್‌ನಡಿ ಈ ಕುರಿತು ಟ್ವಿಟರ್‌ ಅಭಿಯಾನ ಏರ್ಪಡಿಸಿತ್ತು. ‘ಈ ಹ್ಯಾಷ್‌ಟ್ಯಾಗ್‌ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಕರ್ನಾಟಕದ ಮಟ್ಟಿಗೆ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಈ ಹ್ಯಾಷ್‌ಟ್ಯಾಗ್‌ನಡಿ ಸಂಜೆ 4 ಗಂಟೆವರೆಗೆ ಸುಮಾರು 7 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ. 31 ಲಕ್ಷ ಟ್ವಿಟರ್‌ ಬಳಕೆದಾರರಿಗೆ ಈ ಸಂದೇಶ ತಲುಪಿದೆ’ ಎಂದು ಕನ್ನಡ ಗ್ರಾಹಕರ ಕೂಟದ ಬಾಬು ಅಜಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಗ್ರಾಹಕರ ಸೇವೆ ಒದಗಿಸುವುದು ಬೇರೆ ಭಾಷೆಗಳ ಗ್ರಾಹಕರ ಹಕ್ಕುಗಳನ್ನು ನಿರಾಕರಿಸಿದಂತೆ. ದೇಶದ 22 ಅನುಸೂಚಿತ ಭಾಷೆಗಳಲ್ಲೂ ಈ ಸೇವೆ ಸಿಗಬೇಕು. ಆಯಾ ರಾಜ್ಯದಲ್ಲಿ ಆಡು ಭಾಷೆಯಲ್ಲೇ ವಿವರಗಳು ಲಭ್ಯವಾಗಬೇಕು. ಈ ಕುರಿತು ಬಲವಾದ ಕಾನೂನು ಜಾರಿಯಾಗಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಈ ಸಲುವಾಗಿಯೇ ನಾವು 2013ರರಿಂದ ಪ್ರತಿ ವರ್ಷವೂ ವಿಶ್ವ ಗ್ರಾಹಕರ ದಿನದಂದು ಟ್ವಿಟರ್‌ ಅಭಿಯಾನ ನಡೆಸುತ್ತಾ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ನಮಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಅವರು ವಿವರಿಸಿದರು.

‘ತಾಯಿ ನುಡಿಯಲ್ಲಿ ಸೇವೆ ಪಡೆಯುವುದಕ್ಕೆ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿಯ ಪಾತ್ರ ಮಹತ್ವದ್ದು. ಗ್ರಾಹಕರಿಗೆ ಅರ್ಥವಾಗುವ ಆಡು ನುಡಿಯಲ್ಲೇ ಸೇವೆ ಸಿಗಬೇಕು ಎಂಬ ಬಗ್ಗೆ ಇತ್ತೀಚೆಗೆ ಅರಿವು ಹೆಚ್ಚುತ್ತಿದೆ. ಜನ ಸ್ವಯಂಪ್ರೇರಿತವಾಗಿ ನಮ್ಮ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಎಟಿಎಂ, ಐಒಎಸ್‌, ಆ್ಯಂಡ್ರಾಯ್ಡ್‌ಗಳಲ್ಲಿ ಕನ್ನಡ ಬಂದಿದ್ದು, ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳೂ ಕನ್ನಡದಲ್ಲಿ ಸೇವೆ ಆರಂಭಿಸಿದ್ದು, ಗ್ರಾಹಕರ ಹಕ್ಕೊತ್ತಾಯದಿಂದ. ಇದು ಮುಂದುವರಿಯಲಿದೆ’ ಎಂದರು.

‘ಈ ಸಲದ ಅಭಿಯಾನದಲ್ಲಿ ಕನ್ನಡದ ಜೊತೆ ತಮಿಳು, ತೆಲುಗು, ಮರಾಠಿ, ಬಂಗಾಳಿ ಭಾಷೆಗಳ ಗ್ರಾಹಕರೂ ಕೈಜೋಡಿಸಿದ್ದಾರೆ. ನಮ್ಮ ರಾಜ್ಯದ ಶಾಸಕರು ಸಂಸದರೂ ಇದರ ಮಹತ್ವ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಕೇಂದ್ರ ಸರ್ಕಾರಕ್ಕೆ ನಾವು ಕಟ್ಟುವ ತೆರಿಗೆ ಬೇಕು. ಹಿಂದಿ ಭಾಷಿಕರಿಗಿಂತ ಹೆಚ್ಚು ತೆರಿಗೆ ಕಟ್ಟುವವರು ದಕ್ಷಿಣ ಭಾರತದ ಜನರು. ಆದರೂ ನಮಗೆ ಅರ್ಥವಾಗುವ ಭಾಷೆಯಲ್ಲಿ ಸೇವೆ ಒದಗಿಸಲು ಕೇಂದ್ರ ಸಿದ್ಧವಿಲ್ಲ. ನಮ್ಮ ದುರಂತವೆಂದರೆ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಸುವ ಕೇಂದ್ರ ಸರ್ಕಾರದ ಪೋರ್ಟಲ್‌ ಕೂಡಾ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಲಭ್ಯ’ ಎಂದು ಬೇಸರ ವ್ಯಕ್ತಪಡಿಸಿದರು.

ಗಮನ ಸೆಳೆದ ಟ್ವೀಟ್‌ಗಳು

ಕೊರೋನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಳ್ಳು ಮಾಹಿತಿಗಳನ್ನು ಹತ್ತಿಕ್ಕಲು ಜನರಿಗೆ ಸರಿಯಾದ ಮಾಹಿತಿ ನೀಡಬೇಕಾದ ಅಗತ್ಯವಿದೆ. ಸಂಬಂಧಪಟ್ಟ ಎಲ್ಲಾ ಸಂಪರ್ಕ ಸಾಧನಗಳನ್ನು ಬಳಸಿ ಜನರ ಆಡುಭಾಷೆಯಲ್ಲೇ ಮಾಹಿತಿ ನೀಡಿದರೆ ಮಾತ್ರ ಇದು ಸಾಧ್ಯವಾಗಬಲ್ಲುದು ‌

ವಸಂತ ಶೆಟ್ಟಿ

***

ನಿಜವಾದ ಒಕ್ಕೂಟ ವ್ಯವಸ್ಥೆಯನ್ನು, ಪ್ರಜಾಸತ್ತೆಯನ್ನು ರೂಪಿಸಲು ಸಂವಿಧಾನದಲ್ಲಿ 343ರಿಂದ 351ರವರೆಗಿನಪರಿಚ್ಚೇದಗಳಿಗೆ ತುರ್ತಾಗಿ ತಿದ್ದುಪಡಿ ತರುವ ಅಗತ್ಯವಿದೆ. ಅನುಸೂಚಿತ ಭಾಷೆಗಳೆಲ್ಲವನ್ನೂ ಅಧಿಕೃತ ಭಾಷೆಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕಿದೆ. ಆಯಾ ರಾಜ್ಯಗಳಲ್ಲಿ ಆಡುಭಾಷೆಯಲ್ಲೇ ಸೇವೆಗಳು ಸಿಗಬೇಕು

ಪ್ರಶಾಂತ್‌ ಎಸ್‌.

***

ದುರ್ಬಲವಾದ ಭಾಷಾ ನೀತಿಯನ್ನು ಸಾಂವಿಧಾನಿಕವಾಗಿ ಸರಿಪಡಿಸದೇ ಇದ್ದರೆ ಭಾರತ ಬಿಡಿ, ಕರ್ನಾಟಕದಲ್ಲೂ ಗ್ರಾಹಕರ ಸೇವೆಗಳಲ್ಲಿ ಕನ್ನಡ ಭಾಷೆಯನ್ನು ಸೇರ್ಪಡೆಗೊಳಿಸುವಂತಹ ಸುಧಾರಣಾ ಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ

ವಿಜಯ್‌ ಕಲ್ಯಾಣರಾಮನ್‌

***

ನಾನು ಆಗಾಗ ವಿದೇಶಗಳಿಗೆ ಹೋಗಿಬರುತ್ತೇನೆ. ಪ್ರತಿ ಬಾರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಭೇಟಿ ನೀಡಿದಾಗಲೂ ಈ ನೆಲದ ಭಾಷೆಯ ಸ್ಥಾನವನ್ನು ನೋಡಿ ಬೇಸರವಾಗುತ್ತದೆ– ಇಲ್ಲಿನ ಮಾಹಿತಿ ಫಲಕಗಳಲ್ಲಿ ಕನ್ನಡಕ್ಕೆ ಮೂರನೇ ಸ್ಥಾನ ನೀಡಲಾಗಿದೆ. ಅದೂ ಕಾಣಿಸದಷ್ಟು ಸಣ್ಣ ಅಕ್ಷರಗಳಲ್ಲಿರುತ್ತದೆ

ಸಂದೀಪ್‌ ಕಂಬಿ

***

ಗ್ರಾಹಕ ಸೇವೆಗಳು ಮಾತ್ರವಲ್ಲ, ಕಾನೂನುಗಳು, ಅಧಿಸೂಚನೆಗಳು, ಸರ್ಕಾರದ ಆದೇಶಗಳು ಎಲ್ಲವೂ ನಮ್ಮ ಭಾಷೆಯಲ್ಲೇ ಸಿಗುವಂತಾಗಬೇಕು

ವಿನಯಶ್ರೀನಿವಾಸ್‌

***

ಎಲ್ಲ ಭಾರತೀಯರೂ ಸಮಾನರು ಎಂದಾದರೆ, ಅವರ ಭಾಷೆಗಳಿಗೂ ಸಮಾನ ಮನ್ನಣೆ ಸಿಗಬೇಕಲ್ಲವೇ? ಇದು ಇಂಡಿಯಾನೋ ಅಥವಾ ಹಿಂದಿಯಾನೋ?

ಕಿರಣ್‌ ಕೊಡ್ಲಾಡಿ

***

ಹಿಂದಿಯೇತರರ ಜೀವಗಳಿಗೆ ಬೆಲೆ ಇಲ್ಲವೇ? ಕರ್ನಾಟಕದಲ್ಲಿ ಮಾರಾಟ ಮಾಡುವ ಸಿಲಿಂಡರ್‌ಗಳಲ್ಲೂ ಕನ್ನಡ ಭಾಷೆ ಕಾಣಿಸದು. ಸರ್ಕಾರ ನಿದ್ರೆ ಮಾಡುತ್ತಿದೆಯೇ?

ಸುಹೃತ ಯಜಮಾನ

***

ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಪ್ರಕಾರ ಮಾಹಿತಿಯನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನೀಡಿದರೆ ಸಾಕು. ಹಾಗಿದ್ದರೆ ಹಿಂದಿ– ಇಂಗ್ಲಿಷ್‌ ಬಾರದವರಿಗೆ ಅದು ಅರ್ಥವಾಗುವುದು ಬೇಡವೇ?

ಅರುಣ್‌ ಜಾವಗಲ್‌

***

ರೈತರಿಗೆ ಸಂಬಂಧಿಸಿದ ವಿಷಯಗಳಿರಲೀ ಅಥವಾ ಜೀವಕ್ಕೆ ಕುತ್ತು ತರುವಂತಹ ರೋಗಗಳ ಮಾಹಿತಿಗಳ ವಿಚಾರದಲ್ಲೇ ಇರಲಿ, ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷಿಕರ ಕುರಿತಷ್ಟೇ ಕಾಳಜಿ. ಉಳಿದ ನಾವೆಲ್ಲರೂ ವೋಟು ಹಾಕಲು ಹಾಗೂ ತೆರಿಗೆ ಕಟ್ಟಲು ಮಾತ್ರ

ಜಯತೀರ್ಥ ನಾಡಗೌಡ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT