‘ನಮ್ಮ ಸರ್ಕಾರ ಇನ್ನೇನು ಅಧಿಕಾರಕ್ಕೆ ಬರಲಿದೆ, ಬರ್ರಪ್ಪಾ ಹಾಲು ಕುಡಿಯಿರಿ’: ಅಶೋಕ್

ಭಾನುವಾರ, ಜೂಲೈ 21, 2019
22 °C

‘ನಮ್ಮ ಸರ್ಕಾರ ಇನ್ನೇನು ಅಧಿಕಾರಕ್ಕೆ ಬರಲಿದೆ, ಬರ್ರಪ್ಪಾ ಹಾಲು ಕುಡಿಯಿರಿ’: ಅಶೋಕ್

Published:
Updated:

ಬೆಂಗಳೂರು: ಅತ್ತ ವಿಧಾನಸಭೆಯೊಳಗೆ ಸಂತಾಪ ನಡೆಯುತ್ತಿದ್ದರೆ, ಇತ್ತ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಬಿಜೆಪಿ ಶಾಸಕರು ಸರ್ಕಾರ ರಚನೆಯ ಕನಸಿನ ಸೌಧವನ್ನು, ಇಲಾಖೆ ಹಂಚಿಕೆಯ ಲೆಕ್ಕಾಚಾರವನ್ನು ನಡೆಸುತ್ತಿದ್ದರು.

ಮಂಗಳವಾರವರೆಗೆ ಯಥಾಸ್ಥಿತಿ ಕಾಪಾಡಿ ಎಂದು ಸುಪ್ರೀಂಕೋರ್ಟ್‌ ಸೂಚನೆ ಹೊರಬರುವವರೆಗೆ ಹಾಗೂ ವಿಶ್ವಾಸ ಮತ ಯಾಚನೆಯ ನಿರ್ಣಯವನ್ನು ಕುಮಾರಸ್ವಾಮಿ ಪ್ರಕಟಿಸುವವರೆಗೆ ಆಡಳಿತಪಕ್ಷದ ಮೊಗಸಾಲೆಯಲ್ಲಿ ಶಾಸಕರೇ ಇರಲಿಲ್ಲ. ಯಾವಾಗ, ಕೋರ್ಟ್ ಆದೇಶ ಹೊರಬಿತ್ತೋ ಆಗ ಸದನದಲ್ಲಿದ್ದ ಶಾಸಕರೆಲ್ಲ ಹೊರಗೆ ದೌಡಾಯಿಸಿ ಸರ್ಕಾರ ಉಳಿಸಿಕೊಳ್ಳುವ ಉತ್ಸಾಹ ಉಕ್ಕಿದಂತೆ ಚರ್ಚೆಯಲ್ಲಿ ಭಾಗಿಯಾದರು.

‘ರಾಜೀನಾಮೆ ಕೊಟ್ಟವರನ್ನು ಅನರ್ಹಗೊಳಿಸಲು ಸಭಾಧ್ಯಕ್ಷರು ಚಿಂತನೆ ನಡೆಸಿದ್ದರು. ಆದರೆ, ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿರುವುದರಿಂದ ಸಭಾಧ್ಯಕ್ಷರ ಕೈ ಕಟ್ಟಿಹಾಕಿದಂತಾಗಿದೆ. ಇದು ನಮಗೆ ಸಿಕ್ಕ ಗೆಲುವು’ ಎಂದು ಬಿಜೆಪಿ ಶಾಸಕರು ವಿಶ್ಲೇಷಣೆ ನಡೆಸತೊಡಗಿದರು. ಆದರೆ, ಇದು ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ ಅವರಿಗೆ ಸಿಕ್ಕಿದ ಅವಕಾಶ ಎಂಬುದು ಅರಿವಾಗತೊಡಗಿದಂತೆ ಚರ್ಚೆಯ ದಿಕ್ಕು ಬದಲಾಗಿ ಹೋಯಿತು.


ಶುಕ್ರವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ಡಿ.ಕೆ.ಶಿವಕುಮಾರ್‌, ಆರ್‌. ವಿ. ದೇಶಪಾಂಡೆ ಇದ್ದಾರೆ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌

ಹಾಲು ಕುಡಿರಿ: ಮೊಗಸಾಲೆಯಲ್ಲಿ ಕುಳಿತಿದ್ದ ಬಿಜೆಪಿ ಶಾಸಕ ಆರ್. ಅಶೋಕ್‌, ಅಲ್ಲಿ ಸುಳಿದಾಡುತ್ತಿದ್ದ ಪಕ್ಷದ ಶಾಸಕರಿಗೆ ಬನ್ರೀ ಹಾಲು ಕುಡಿರಿ. ನಮ್ಮ ಸರ್ಕಾರ ಇನ್ನೇನು ಅಧಿಕಾರಕ್ಕೆ ಬರಲಿದೆ. ಬರ್ರಪ್ಪಾ ಹಾಲು ಕುಡಿಯಿರಿ. ಇಂತಹ ಸಂಭ್ರಮದ ಗಳಿಗೆ ನಮ್ಮದು ಎಂದು ಎಲ್ಲರಿಗೂ ಆಮಂತ್ರಣ ನೀಡುತ್ತಿದ್ದರು.

ಬಣ್ಣ ಹಚ್ಚುತ್ತಿದ್ದಾರೆ: ಯಾವಾಗ ಸಚಿವರಾಗುತ್ತೀರಿ ಎಂದು ಬೆಳಗಾವಿಯ ಶಾಸಕರೊಬ್ಬರನ್ನು ಮಾತಿಗೆ ಎಳೆದಾಗ, ಯಡಿಯೂರಪ್ಪನವರು ಗಾಡಿಗೆ ಬಣ್ಣ ಹಚ್ಚುತ್ತಿದ್ದಾರೆ. ಅದಕ್ಕೆ ಚಕ್ರ, ನೊಗ, ಎತ್ತೆಲ್ಲ ಬೇಕು. ಅವೆಲ್ಲ ಆದ ಮೇಲಷ್ಟೇ ಗಾಡಿ ಮುಂದೆ ಹೋಗಲು ಸಾಧ್ಯ. ಆಗ ಯಡಿಯೂರಪ್ಪನವರನ್ನು ಗಾಡಿ ಮೇಲೆ ಕುರಿಸಿಕೊಂಡು ಕರೆತರುತ್ತೇವೆ. ಎಷ್ಟು ದಿನ ಬೇಕಾದರೂ ಅದಕ್ಕೆ ಬೇಕಾಗಬಹುದು ಎಂದು ನಗುತ್ತಲೇ ಹೇಳಿದರು.

ಖಾತೆ ಹಂಚಿಕೆ: ಬಿಜೆಪಿ ಸರ್ಕಾರ ಬಂದರೆ ಸಭಾಧ್ಯಕ್ಷರು ಯಾರು, ಯಾವ ಇಲಾಖೆಗೆ ಯಾವ ಸಚಿವರು ಎಂಬ ಖಾತೆ ಹಂಚಿಕೆಯ ಕೆಲಸವೂ ಬಿಜೆಪಿ ಶಾಸಕರ ಮಧ್ಯೆ ನಡೆಯುತ್ತಿತ್ತು.

ಬರಹ ಇಷ್ಟವಾಯಿತೆ?

 • 17

  Happy
 • 10

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !