ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪಲಿಯಿಂದ ಹೊಡೆಯಿರಿ ಎನ್ನುವುದು ದೇಶ ದ್ರೋಹವೇ?: ಬೃಂದಾ ಕಾರಟ್‌

ಶಾಹೀನ್‌ ಶಾಲೆ, ಜೈಲಿಗೆ ಭೇಟಿ
Last Updated 13 ಫೆಬ್ರುವರಿ 2020, 18:45 IST
ಅಕ್ಷರ ಗಾತ್ರ

ಬೀದರ್: ‘ದೇಶದ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರು ಗುಂಡು ಹೊಡೆಯಿರಿ ಎಂದರೂ ಎಫ್‌ಐಆರ್‌ ದಾಖಲಾಗುವುದಿಲ್ಲ. ಆದರೆ, ನಾಟಕದಲ್ಲಿ ಬಾಲಕಿ ಒಂದು ಶಬ್ದ ಬಳಸಿದ್ದಕ್ಕೆ ಅವಳ ತಾಯಿಯನ್ನೇ ದೇಶದ್ರೋಹದ ಅಡಿಯಲ್ಲಿ ಬಂಧಿಸಲಾಗಿದೆ. ಇದು ನಾಚಿಕೆಗೇಡು’ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿಯ ಶಾಹೀನ್‌ ಶಾಲೆಯಲ್ಲಿ ವಿವಾದಿತ ನಾಟಕ ಪ್ರದರ್ಶಿಸಿದ ಬಾಲಕಿ ಹಾಗೂ ಜೈಲಿನಲ್ಲಿರುವ ಆಕೆಯ ತಾಯಿಯನ್ನು ಗುರುವಾರ ಭೇಟಿಯಾದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಸಮವಸ್ತ್ರದಲ್ಲಿದ್ದ ಪೊಲೀಸರು ಶಾಹೀನ್‌ ಶಾಲೆಯ ಏಳು ಮಕ್ಕಳನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಬಾಲಕಿಯ ಮನೆಗೆ ಹೋಗಿ ಶೋಧ ನಡೆಸಿ ಸಾಕ್ಷ್ಯಾಧಾರವಾಗಿ ಆಕೆ ಧರಿಸಿದ್ದ ಚಪ್ಪಲಿಯನ್ನು ಒಯ್ದಿದ್ದಾರೆ. ಸ್ವತಂತ್ರ ಭಾರತದಲ್ಲಿ ದೇಶದ್ರೋಹದಂತಹ ಕಾನೂನು ಇರಲೇ ಬಾರದು. ಬಾಲಕಿ ಹಾಗೂ ಅವಳ ತಾಯಿಗೆ ಅನ್ಯಾಯ ಮಾಡಲಾಗಿದ್ದು, ಅವರೊಂದಿಗೆ ನಾವಿದ್ದೇವೆ’ ಎಂದರು.

‘ಬಿಜೆಪಿ, ಆರ್‌ಎಸ್‌ಎಸ್‌ ಮುಖಂಡರು ಕೋಮು ಭಾವನೆ ಕೆರಳಿಸುವಂತಹ ಹೇಳಿಕೆಗಳನ್ನು ಬಹಿರಂಗವಾಗಿ ಕೊಡುತ್ತಿದ್ದರೂ ಅವರ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುತ್ತಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿರುವುದು ಅಪರಾಧ. ಆ ಘಟನಾವಳಿಯನ್ನು ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಹಾಗೂ ಸಚಿವರ ಎದುರಲ್ಲೇ ಪ್ಲೇ ಮಾಡಲಾಗುತ್ತಿದೆ. ಅಂಥವರ ವಿರುದ್ಧ ಏಕೆ ಎಫ್‌.ಐ.ಆರ್‌ ದಾಖಲಿಸುತ್ತಿಲ್ಲ?ಬಿಜೆಪಿ ಸರ್ಕಾರ ಆಳುವ ವರ್ಗಕ್ಕೆ ಒಂದು ನೀತಿ, ಪ್ರಶ್ನಿಸುವ ವರ್ಗಕ್ಕೆ ಇನ್ನೊಂದು ನೀತಿಯನ್ನು ಅನುಸರಿಸುತ್ತಿದೆ’ ಎಂದು ದೂರಿದರು.

‘ಮಕ್ಕಳು ಯುಟ್ಯೂಬ್‌ನಲ್ಲಿ ನೋಡಿ ನಾಟಕ ಮಾಡಿದ್ದಾರೆ. ಅದಕ್ಕಾಗಿ ಬಡ ಕುಟುಂಬದ ವಿಧವೆಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ತಾಯಿ, ಮಗಳನ್ನು ಬೇರ್ಪಡಿಸಲಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದೊಂದು ದಿನ ನಾವೂ ಸಹ ದೇಶದ್ರೋಹ ಅರೋಪಕ್ಕೆ ಸಿಲುಕುತ್ತೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT