ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ | ಮತ್ತೆ ಗುಹೆಯತ್ತ ಬಲಿಗೆಯ ಅನಂತ!

ಜಿಲ್ಲಾಡಳಿತದ ಯತ್ನ ವಿಫಲ– ತಾತ್ಕಾಲಿಕ ಶೆಡ್‌ಗೂ ಹಾನಿ
Last Updated 2 ಜೂನ್ 2020, 1:30 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ ಬಲಿಗೆ ಸಮೀಪದ ಗುಹೆಯಲ್ಲಿ ವಾಸಿಸುತ್ತಿದ್ದ ಗಿರಿಜನ ಕುಟುಂಬದ ಅನಂತ ಅವರನ್ನು ನಾಗರಿಕ ಸಮಾಜದ ಜೊತೆಗೆ ಬೆರೆತು ಬಾಳುವಂತೆ ಮಾಡುವ ಜಿಲ್ಲಾಡಳಿತದ ಯತ್ನ ವಿಫಲವಾಗಿದೆ. ಕಳೆದ ತಿಂಗಳು ಗುಹೆಯಿಂದ ಹೊರತಂದು ಹೊರನಾಡಿನ ಗಿರಿಜನ ಆಶ್ರಮ ಶಾಲೆಯ ವಸತಿಗೃಹದಲ್ಲಿ ಇರಿಸಲಾಗಿದ್ದ ಅನಂತ ಅವರು ಒಂದು ವಾರದಿಂದ ಮತ್ತೆ ಗುಹೆಯಲ್ಲಿ ವಾಸಿಸುತ್ತಿದ್ದಾರೆ.

ಬಲಿಗೆ ಸಮೀಪದ ಕಲ್ಲಕ್ಕಿ ನಿವಾಸಿಯಾಗಿದ್ದ ಅನಂತ ಅವರು ಹೋದ ವರ್ಷದ ಮಳೆಗೆ ಮನೆ ಕುಸಿದು ಬಿದ್ದ ನಂತರ ಪತ್ನಿ ಜೊತೆ ಸಮೀಪದ ಗುಹೆಯಲ್ಲಿ ವಾಸ ಮಾಡುತ್ತಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿ ರಾಜ್ಯದ ಗಮನ ಸೆಳೆದಿತ್ತು. ಜಿಲ್ಲಾಡಳಿತವು ಕೂಡಲೇ ಸ್ಪಂದಿಸಿ ಗುಹೆಯಲ್ಲಿದ್ದ ಅನಂತ ಅವರ ಮನವೊಲಿಸಿ ಕುಟುಂಬ ಸಮೇತ ಗುಹೆಯಿಂದ ಹೊರಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

ಈ ಕುಟುಂಬಕ್ಕೆ ತಾತ್ಕಾಲಿಕವಾಗಿ ಹೊರನಾಡಿನ ಆಶ್ರಮ ಶಾಲೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು. ಕಳಸ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕವೀಶ್, ಸಿಬ್ಬಂದಿ ಮತ್ತು ಸದಸ್ಯರು ಶ್ರಮವಹಿಸಿ ತಾತ್ಕಾಲಿಕ ಶೆಡ್ ಅನ್ನು ಬಲಿಗೆ ಸರ್ಕಾರಿ ಶಾಲೆ ಸಮೀಪದಲ್ಲಿ ನಿರ್ಮಿಸಿಕೊಟ್ಟಿದ್ದರು.

‘ಎರಡು ದಿನದ ಹಿಂದೆ ಅನಂತ ಬಲಿಗೆಯಲ್ಲಿ ಗ್ರಾಮ ಪಂಚಾಯಿತಿ ನಿರ್ಮಿಸಿದ್ದ ತಾತ್ಕಾಲಿತ ಶೆಡ್ ಅನ್ನು ಧ್ವಂಸ ಮಾಡಿದ್ದಾರೆ. ಒಂದು ವಾರದಿಂದ ಅವರು ಆಶ್ರಮ ಶಾಲೆಗೂ ಹೋಗದೆ ಗುಹೆಯಲ್ಲೇ ವಾಸವಿದ್ದಾರೆ. ಅವರ ಪತ್ನಿ ಮತ್ತು ಮಗಳು ಆಶ್ರಮ ಶಾಲೆಯಲ್ಲೇ ಇದ್ದಾರೆ’ ಎಂದು ಸ್ಥಳೀಯರಾದ ಸವಿಂಜಯ ಮಾಹಿತಿ ನೀಡಿದ್ದಾರೆ.

‘ಅನಂತ ಅವರ ಕುಟುಂಬಕ್ಕೆ ದಿನಸಿ, ಬಟ್ಟೆಯನ್ನು ಕೊಡಿಸಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಮಾವಿನಕೆರೆ ಗ್ರಾಮದ ಸರ್ವೆ ನಂಬರ್ 85ರಲ್ಲಿ ನಿವೇಶನ ನೀಡಲು ಹಕ್ಕುಪತ್ರ ಸಿದ್ಧಪಡಿಸಲಾಗಿದೆ. ಆದರೆ, ಹಕ್ಕುಪತ್ರ ಪಡೆಯಲು ಅವರು ಆಸಕ್ತಿ ಹೊಂದಿಲ್ಲ’ ಎಂದು ಕಂದಾಯ ನಿರೀಕ್ಷಕ ಅಜ್ಜೇಗೌಡ ಹೇಳಿದರು.

‘ಅನಂತ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ₹ 1 ಲಕ್ಷ ತುರ್ತು ಪರಿಹಾರ ಘೋಷಣೆ ಮಾಡಿದ್ದನ್ನು ಪಡೆಯಲು ಅವಕಾಶ ಆಗುವಂತೆ ಬ್ಯಾಂಕ್ ಖಾತೆ ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ ವಾಸ ದೃಢೀಕರಣದ ಯಾವುದೇ ಸೂಕ್ತ ದಾಖಲೆ ಇಲ್ಲದ ಕಾರಣ ಅದು ವಿಳಂಬವಾಗಿದೆ’ ಎಂದು ಮಾಹಿತಿ ನೀಡಿದರು.

‘ಅನಂತ ಅವರನ್ನು ಬಲಿಗೆಯಿಂದ ಬೇರೆ ಊರಿಗೆ ಸ್ಥಳಾಂತರ ಮಾಡುವ ಯತ್ನವೇ ತಪ್ಪು. ಅವರ ಹಳೆಯ ಮನೆಯ ಸಮೀಪದಲ್ಲೇ ಮನೆ ಕಟ್ಟಿಕೊಟ್ಟರೆ ಮಾತ್ರ ಆ ಕುಟುಂಬ ನೆಮ್ಮದಿಯಿಂದ ಇರುತ್ತಿತ್ತು’ ಎಂಬುದು ಗ್ರಾಮ ಪಂಚಾಯಿತಿ ಸದಸ್ಯೆ ಸುವರ್ಣಮ್ಮ ಅವರ ಅಭಿಪ್ರಾಯ.

*

ಅನಂತ ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ. ಅವರಿಗೆ ಮಾನಸಿಕ ಸ್ಥಿಮಿತ ಇಲ್ಲ. ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸುತ್ತೇವೆ. ಅವರು ಪರಿವರ್ತನೆ ಆಗುವ ವಿಶ್ವಾಸ ಇದೆ.
-ಡಾ.ಎಚ್.ಎಲ್.ನಾಗರಾಜ್, ಉಪ ವಿಭಾಗಾಧಿಕಾರಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT