ಭಾನುವಾರ, ಜನವರಿ 19, 2020
23 °C
* ನಾಳೆಯಿಂದ ಕಡ್ಡಾಯವೆಂದ ಎನ್‌ಎಚ್‌ಎಐ * ಟೋಲ್‌ಗೇಟ್‌ನ ನಗದು ಸಾಲಿನಲ್ಲೇ ಹೆಚ್ಚು ವಾಹನ

ಅರ್ಧದಷ್ಟು ವಾಹನಗಳಿಗೂ ಸಿಕ್ಕಿಲ್ಲ ಫಾಸ್ಟ್ಯಾಗ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fastag

ಬೆಂಗಳೂರು: ಟೋಲ್‌ಗೇಟ್‌ಗಳಲ್ಲಿ ಜ. 15ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸುವುದಾಗಿ ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಹೇಳಿದ್ದು, ರಾಜ್ಯದ ಅರ್ಧದಷ್ಟು ವಾಹನಗಳಿಗೆ ಈವರೆಗೂ ಫಾಸ್ಟ್ಯಾಗ್ ಸಿಕ್ಕಿಲ್ಲ.

ದೇಶದಾದ್ಯಂತ ಫಾಸ್ಟ್ಯಾಗ್‌ಗಳ ಕೊರತೆ ಇದೆ. ಎನ್‌ಎಚ್‌ಎಐ ಸೂಚಿಸಿರುವ ಬ್ಯಾಂಕ್‌ಗಳಲ್ಲಿ ಹಾಗೂ ಅಮೆಜಾನ್ ಜಾಲತಾಣದಲ್ಲೂ ಫಾಸ್ಟ್ಯಾಗ್‌ ಸಿಗುತ್ತಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಬಹುತೇಕ ವಾಹನಗಳು ಇಂದಿಗೂ ಟೋಲ್‌ಗೇಟ್‌ಗಳಲ್ಲಿ ನಗದು ನೀಡಿಯೇ ಮುಂದೆ ಸಾಗುತ್ತಿವೆ.

ರಾಜ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಪ್ರತಿಯೊಂದು ಟೋಲ್‌ಗೇಟ್‌ಗಳಲ್ಲೂ ಫಾಸ್ಟ್ಯಾಗ್‌ ಹೊಂದಿರುವ ವಾಹನಗಳ ಪ್ರವೇಶಕ್ಕೆ ಪ್ರತ್ಯೇಕ ಸಾಲು ಮೀಸಲಿರಿಸಲಾಗಿದೆ. ಇದರ ಮೂಲಕ ಟೋಲ್‌ಗೇಟ್‌ ದಾಟಿ ಹೋಗುವವರ ಸಂಖ್ಯೆ ತೀರಾ ಕಡಿಮೆ. ಫಾಸ್ಟ್ಯಾಗ್‌ ಇಲ್ಲದವರಿಗೆ ದೂರದಲ್ಲೇ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಉಪಕರಣದ ಮೂಲಕ ರಸೀದಿ ನೀಡಿ ಪ್ರತ್ಯೇಕ ಸಾಲಿನಲ್ಲೇ ಕಳುಹಿಸಲಾಗುತ್ತಿದೆ.

ಇನ್ನೊಂದೆಡೆ ಪ್ರತಿ ಟೋಲ್‌ಗೇಟ್‌ನಲ್ಲಿ ನಗದು ಸ್ವೀಕಾರಕ್ಕೆಂದು ಎರಡಕ್ಕಿಂತ ಹೆಚ್ಚು ಸಾಲುಗಳನ್ನು ಮೀಸಲಿಡಲಾಗಿದೆ. ಅಂಥ ಸಾಲುಗಳಲ್ಲೇ ಹೆಚ್ಚಿನ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಸಾಕಷ್ಟು ವಾಹನ ಮಾಲೀಕರು ಬ್ಯಾಂಕ್‌ಗೆ ಅರ್ಜಿ ನೀಡಿದರೂ ಫಾಸ್ಟ್ಯಾಗ್‌ ಕೈ ಸೇರಿಲ್ಲ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸಕೋಟೆ, ದೇವನಹಳ್ಳಿ, ತುಮಕೂರು ರಸ್ತೆ ಹಾಗೂ ನೈಸ್‌ ರಸ್ತೆಯ ಟೋಲ್‌ಗೇಟ್‌ನಲ್ಲೂ ನಗದು ಪಾವತಿಸಿ ಹೋಗುವ ವಾಹನಗಳ ಸಂಖ್ಯೆ ಹೆಚ್ಚಿದೆ.

‘ಅಮೆಜಾನ್‌ನಲ್ಲಿ ಫಾಸ್ಟ್ಯಾಗ್ ಕಾಯ್ದಿರಿಸಿದ್ದೆ. ಅದು ನಿಗದಿತ ಸಮಯಕ್ಕೆ ಬರಲಿಲ್ಲ. ಬಳಿಕ, ಬ್ಯಾಂಕ್‌ಗೂ ಅರ್ಜಿ ಸಲ್ಲಿಸಿದ್ದೆ. 20 ದಿನವಾದರೂ ಬಂದಿಲ್ಲ. ಅನಿವಾರ್ಯವಾಗಿ ನಗದು ನೀಡಿ ಟೋಲ್‌ಗೇಟ್ ಬಳಸುತ್ತಿದ್ದೇನೆ’ ಎಂದು ಗೂಡ್ಸ್ ವಾಹನ ಚಾಲಕ ಮೋಹನ್‌ ಕುಮಾರ್ ಹೇಳಿದರು.‌

‘ಕಡ್ಡಾಯ ಆದೇಶ ಹೊರಡಿಸುವ ಮುನ್ನ ಸರ್ಕಾರ, ಎಲ್ಲ ವಾಹನಗಳ ಮಾಲೀಕರಿಗೂ ಫಾಸ್ಟ್ಯಾಗ್‌ ಸಿಕ್ಕಿದೆಯಾ ಎಂಬುದನ್ನು ಗಮನಿಸಬೇಕಿತ್ತು. ಆ ಕೆಲಸವನ್ನು ಮಾಡಿಲ್ಲ. ನಾಳೆಯಿಂದ (ಜ. 15ರಿಂದ) ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಅವರು ತಿಳಿಸಿದರು.

ಫಾಸ್ಟ್ಯಾಗ್ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಎಚ್‌ಎಐ ಅಧಿಕಾರಿಯೊಬ್ಬರು, ‘ಎರಡು ವರ್ಷಗಳಿಂದ ಫಾಸ್ಟ್ಯಾಗ್‌ ವ್ಯವಸ್ಥೆ ಜಾರಿಯಲ್ಲಿದೆ. ಈಗ ಅದನ್ನು ಕಡ್ಡಾಯ ಮಾಡಲಾಗಿದೆ. ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಫಾಸ್ಟ್ಯಾಗ್‌ ನೀಡುವ ಕೆಲಸ ಚುರುಕಿನಿಂದ ಸಾಗಿದೆ. ಎಲ್ಲೆಲ್ಲಿ ಫಾಸ್ಟ್ಯಾಗ್ ಕೊರತೆ ಇದೆ ಎಂಬುದನ್ನು ನೋಡಿಕೊಂಡು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.‌

‘ಪ್ರತಿಯೊಂದು ಸಾಲಿನಲ್ಲೂ ಫಾಸ್ಟ್ಯಾಗ್‌ ಗ್ರಹಿಸುವ ಉಪಕರಣ ಅಳವಡಿಸಲಾಗಿದೆ. ಜ. 15ರಿಂದ ಫಾಸ್ಟ್ಯಾಗ್‌ ಕಡ್ಡಾಯ ನಿಯಮ ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ, ನಗದು ಸಾಲು ಬಂದ್‌ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ’ ಎಂದು ನೆಲಮಂಗಲ ನವಯುಗ ಟೋಲ್‌ಗೇಟ್‌ ಸಿಬ್ಬಂದಿಯೊಬ್ಬರು ಹೇಳಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು