ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಸಂವಿಧಾನದಲ್ಲಿ ಪರಂಪರೆ ಇಲ್ಲ: ಎಸ್‌.ಎಲ್‌.ಭೈರಪ್ಪ

ಸುಮತೀಂದ್ರ ನಾಡಿಗ ಅವರ ಕೊನೆಯ ಕೃತಿ ‘ಶ್ರೀವತ್ಸ ಸ್ಮೃತಿ’ ಬಿಡುಗಡೆ ಕಾರ್ಯಕ್ರಮ
Published : 28 ಏಪ್ರಿಲ್ 2019, 10:26 IST
ಫಾಲೋ ಮಾಡಿ
Comments

ಬೆಂಗಳೂರು: ‘ನಮ್ಮ ದೇಶದ ನ್ಯಾಯಾಲಯಗಳು ನಮ್ಮ ಪರಂಪರೆಯನ್ನು ಕಡೆಗಣಿಸಿ, ಅಮೆರಿಕಾ, ಬ್ರಿಟನ್‌ ನ್ಯಾಯಾಧೀಶರ ತೀರ್ಪುಗಳಲ್ಲಿನ ಹೇಳಿಕೆಗಳನ್ನು ಉಲ್ಲೇಖಿಸಿ ನ್ಯಾಯತೀರ್ಮಾನ ಮಾಡುತ್ತಿವೆ’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಅಭಿಪ್ರಾಯಪಟ್ಟರು.

‘ಬ್ರಿಟೀಷರು ಬಂದು ಕಾನೂನು, ವಿವಾಹ ಹಾಗೂ ಭೂ ಒಡೆತನದಲ್ಲಿ ಸುಧಾರಣೆಗಳನ್ನು ತಂದರು. ಈ ಸುಧಾರಣೆಗಳನ್ನು ಭಾರತೀಯರು ವಿರೋಧಿಸಿದರು. ಆಗ ಬ್ರಿಟೀಷರೇ ‘ನಿಮ್ಮ ಧರ್ಮಶಾಸ್ತ್ರದ ಕಾನೂನುಗಳನ್ನು ಸಂಗ್ರಹಿಸಿ ನಮಗೆ ಕೊಡಿ’ ಎಂದು ಪಿ.ವಿ.ಕಾಣೆ ಅವರಂತ ವಿದ್ವಾಂಸರಿಗೆ ಮನವಿ ಮಾಡಿಕೊಂಡಿದ್ದರು. ಅವರು ಸುಮಾರು ಏಳು ಸಂಪುಟಗಳಲ್ಲಿ ಶಾಸ್ತ್ರಗಳ ಸಾರವನ್ನು ಸಂಗ್ರಹಿಸಿ ಕೊಟ್ಟಿದ್ದರು. ಆ ಸಾರವನ್ನು ಬಿಟ್ಟು ನಾವೀಗ ಪಾಶ್ಚಾತ್ಯ ನ್ಯಾಯಾಲಗಳಲ್ಲಿನ ತೀರ್ಪುಗಳ ಸಾರಾಂಶಗಳತ್ತ ಆಕರ್ಷಿತರಾಗಿದ್ದೇವೆ’ ಎಂದು ಅಸಮಾಧಾನ ಹೊರಹಾಕಿದರು.

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ಸುಮತೀಂದ್ರ ನಾಡಿಗ ಅವರ ಕೊನೆಯ ಕೃತಿ ‘ಶ್ರೀವತ್ಸ ಸ್ಮೃತಿ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಶಬರಿಮಲೆ ದೇಗುಲದ ಪ್ರವೇಶದ ವಿವಾದ ಪ್ರಸ್ತಾಪಿಸುತ್ತ, ‘ಈ ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡದಿದ್ದರೆ, ತಾರತಮ್ಯ ಮಾಡಿದಂತೆ ಆಗುತ್ತದೆ ಎಂಬ ವಾದ ಮಾಡುವವರು ಇದ್ದಾರೆ. ಹೆಣ್ಣು ಋತುಮತಿಯಾಗುವ ಮುನ್ನ ಹಾಗೂ ಮುಟ್ಟಾಗುವಿಕೆ ನಿಂತ ಬಳಿಕ ದೇಗುಲ ಪ್ರವೇಶಕ್ಕೆ ಅವಕಾಶ ಇದೆಯಲ್ಲ’ ಎಂದರು.

‘ಅಸುರರನ್ನು ಸಂಹರಿಸಲು ಪುರುಷ ದೈವಗಳಿಗೆ ಸಾಧ್ಯವಾಗದಿದ್ದಾಗ, ಅವರು ಚಾಮುಂಡೇಶ್ವರಿಯ ಮೊರೆ ಹೋದರು. ಆಕೆ ಮುಂದಾಳತ್ವ ವಹಿಸಿ ರಾಕ್ಷರನ್ನು ನಾಶ ಮಾಡಿದಳು. ‘ಈ ಮಿತ್‌ನಲ್ಲಿ ಪುರುಷರಿಗಿಂತ ಮಹಿಳೆ ಹೆಚ್ಚು ಬಲಶಾಲಿಯಾಗಿದ್ದಾಳೆ. ಇದರಿಂದ ಗಂಡಸರ ಸಮೂಹಕ್ಕೆ ಅವಮಾನ ಆಗುತ್ತಿದೆ’ ಎಂದು ಯಾರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಏನಾಗಬಹುದು. ವಿದ್ಯಾದೇವತೆಯಂದು ಸ್ತ್ರೀಯಾದ ಸರಸ್ವತಿಯನ್ನೆ ಯಾಕೆ ಪೂಜಿಸಲಾಗುತ್ತಿದೆ. ಇದರಿಂದ ಗಂಡನ್ನು ಕಡೆಗಣಿಸಿದಂಗಾಗುತ್ತದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಬಹುದಲ್ಲ. ಹೀಗೆ ಬಹಳಷ್ಟನ್ನು ಉದಾಹರಿಸಬಹುದು. ಒಂದೊಂದು ಮಿತ್‌ ಸಹ ಒಂದೊಂದು ಮೌಲ್ಯ ಹೇಳುತ್ತದೆ. ಅದನ್ನು ಒಪ್ಪಿಕೊಳ್ಳಬೇಕು ಅಷ್ಟೆ’ ಎಂದು ವಿಶ್ಲೇಷಿಸಿದರು.

‘ನಮ್ಮ ಧರ್ಮಶಾಸ್ತ್ರವೇ ನಮ್ಮ ಸಂವಿಧಾನ. ಈಗಿನ ನಮ್ಮ ಸಂವಿಧಾನದಲ್ಲಿ ಪರಂಪರೆ ಒಳಗೊಂಡಿದೆಯೇ, ಇಲ್ಲ’ ಎಂದರು.

‘ಅನುಮತಿಯಿಲ್ಲದೆ ಹೆಂಡತಿಯೊಂದಿಗೆ ಬಲವಂತದಿಂದ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರವೆಂದು ಪರಿಗಣಿಸಬೇಕು ಎಂದು ವಾದ ಮಾಡುತ್ತಿದ್ದಾರೆ. ಇದನ್ನು ಕಾನೂನು ಮಾಡಿ, ಅಂಗೀಕಾರ ಪಡೆಯಲು ಪ್ರಯತ್ನ ನಡೆದಿದೆ. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ ಎಂದು ಗೃಹ ಸಚಿವರೇ ಈಗಾಗಲೇ ಹೇಳಿದ್ದಾರೆ. ಒಂದೇ ವೇಳೆ ಕಾನೂನು ಬಂದರೆ, ಹೆಂಡತಿಯನ್ನು ಮುಟ್ಟುವ ಮುನ್ನ ರೆಜಿಸ್ಟ್ರಾರ್‌ ಒಂದರಲ್ಲಿ ಸಹಿ ಮಾಡಿಸಿಕೊಂಡು, ಒಪ್ಪಿಗೆ ಪಡೆದು ಮುಂದುವರೆಯಬೇಕಾದ ಸ್ಥಿತಿ ಬರಬಹುದೇನೋ’ ಎಂದು ಚಟಾಕಿ ಹಾರಿಸಿದರು.

‘ಈ ಕಾನೂನು ಹಿಂದೂಗಳಿಗೆ ಮಾತ್ರವಂತೆ. ಯಾಕೆಂದರೆ ಮೈನಾರಿಟಿ(ಅಲ್ಪಸಂಖ್ಯಾತರು) ಅವರಿಗೆ ಸ್ಪೆಷಾಲಿಟಿ ಇದೆಯಲ್ಲ. ಅವರ ಟ್ರಿಬಲ್‌ ತಲಾಖ್‌ ನಿಷೇಧದ ಬಗ್ಗೆ ಯಾಕೆ ಎಲ್ಲರೂ ಗಟ್ಟಿಯಾಗಿ ಮಾತನಾಡಲ್ಲ’ ಎಂದು ಪ್ರಶ್ನಿಸಿದರು.

‘ಈ ಎಲ್ಲವೂ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರದಂತೆ ಕಾಣುತ್ತವೆ. ಇದರ ಯೋಜನೆಗಳೆಲ್ಲ ವ್ಯಾಟಿಕನ್‌ನಲ್ಲಿ ಸಿದ್ಧವಾಗುತ್ತವೆ. ನಮ್ಮ ಸಮಾಜ, ಸಂಸಾರ, ದಾಂಪತ್ಯ ಬದುಕಿನ ಗಟ್ಟಿತನವನ್ನು ಒಡೆದು, ಭೀತಿ ಹುಟ್ಟಿಸುವ ಹುನ್ನಾರಗಳಿವು’ ಎಂದರು.

‘ಉಪದೇಶ ಕಾವ್ಯ ಆಡುಮಾತಿಗೆ ಹತ್ತಿರವಾಗಿರುತ್ತದೆ ಎಂಬ ಕಾರಣಕ್ಕೆ ನಾಡಿಗರು ಈ ಮಾದರಿ ಬಳಸಿದರು. ನವ್ಯದ ಕವಿಯಾಗಿ ನಮ್ಮ ಮೂಲದ ಬೇರು ಹುಡುಕಲು ಹೋದರು. ಆದರೆ, ನವ್ಯದ ಗದ್ಯ ಬರೆದವರು ನಾರ್ತೆ, ಕಾಮೂ, ಲಾರೆನ್ಸ್‌ ಅವರನ್ನು ಇಲ್ಲಿಗೆ ತಂದು ಬರೆಯಲು ಶುರು ಮಾಡಿದರು’ ಹೇಳಿದರು.

‘ನಾಡಿಗರ ಬರಹ ಕಿಟಲೆ ಮಾಡಿದಂತೆ ಇರುತ್ತದೆ. ಕಿಟಲೆ ಮಾಡುವವರು ಕಿಟಲೆಗಳನ್ನು ಎದುರಿಸುವ ಧೈರ್ಯವಂತರೂ ಆಗಿರಬೇಕು. ಅವರು ನವ್ಯರ ಗುಂಪಿನಲ್ಲಿ ಇದ್ದು ಪಾಯಿದೆ(ಲಾಭ) ಮಾಡಿಕೊಳ್ಳದೆ, ಹೊರಗಿದ್ದು ನಷ್ಟ ಮಾಡಿಕೊಂಡರು. ಇದು ಅವರ ಧೈರ್ಯವನ್ನು ತೋರಿಸುತ್ತದೆ’ ಎಂದರು.

‘ಹಿಂದಿನ ಕವಿಗಳೆಲ್ಲ ಕೇವಲ ಹೊಗಳುವ, ಇಲ್ಲವೆ ಬೈಯುವ ಕೆಲಸ ಮಾಡಿದ್ದಾರೆ. ಆದರೆ, ನಾಡಿಗರು ಕಿಟಲೆ ರಸವನ್ನು ಪರಿಚಯಿಸಿದ್ದಾರೆ. ನಿಜವಾದ ಸೃಷ್ಟಿಶೀಲತೆ, ಸೃಜನಶೀಲತೆ ಅವರಲ್ಲಿ ಇತ್ತು’ ಎಂದು ಹೊಗಳಿದರು.

ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಕೃತಿ ಕುರಿತು, ‘ಗದ್ಯ–ಪದ್ಯಾತ್ಮಕವಾಗಿದೆ. ಚಮತ್ಕಾರಗಳಿಲ್ಲ. ವಿದ್ಯಾತ್ಮಕವಾದ ಆದೇಶ ಪದಗಳಿವೆ. ಆಪ್ತ–ಉಪದೇಶಗಳಿವೆ. ಇದೊಂದು ಆಪ್ತಸಮಾಲೋಚನೆಯ ಕೈಪಿಡಿ’ ಎಂದರು.

‘ಸಾಂಗತ್ಯ, ದಾಂಪತ್ಯದ ಬಗ್ಗೆ ಋಷಿದರ್ಶನದ ಸ್ಪಷ್ಟತೆಯಲ್ಲಿ ಹೇಳಿದ್ದಾರೆ. ದಂಪತಿಗಳು ಪರಸ್ಪರರು ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ ಸಂಭವಿಸಬಹುದಾದ ಆಪತ್ತುಗಳನ್ನು ನಿಭಾಯಿಸುವುದನ್ನು ಕೃತಿಯಲ್ಲಿ ಹೃದಯಗೀತೆಯಾಗಿಸಿದ್ದಾರೆ. ಸತಿ–ಪತಿಯ ವಾಚನ ವ್ಯವಹಾರ ಹೇಗಿರಬೇಕೆಂದು ಸಲಹೆ ನೀಡಿದ್ದಾರೆ’ ಎಂದರು.

ಪತ್ರಕರ್ತ ದು.ಗು.ಲಕ್ಷ್ಮಣ, ‘ನಾಡಿಗರು ಪಂಥೀಯ ಸಾಹಿತಿಯಲ್ಲ. ಅವರ ಈ ಕೃತಿ ಪದ್ಯ, ಗದ್ಯ, ರಗಳೆಯಲ್ಲ. ಜೀವನದ ಒಳತತ್ವಗಳನ್ನು ಸುಲಭವಾಗಿ ತಿಳಿಸುವ ಹೊತ್ತಗೆ. ಇದರಲ್ಲಿ ಆನಂದ, ಜೀವನೋತ್ಸಾಹ ಇದೆ’ ಎಂದು ಹೇಳಿದರು.

ಕೃತಿ ಕುರಿತು

ಕೃತಿ: ಶ್ರೀವತ್ಸ ಸ್ಮೃತಿ
ಪ್ರಕಾಶನ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ₹ 130
ಪುಟಗಳು: 127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT