ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀಮಂತ’ಗೆ ‘ಕಾಗೆ’ ವಿರುದ್ಧ ಭರ್ಜರಿ ಜಯ

ಸಮೀಕ್ಷೆ ಸುಳ್ಳಾಗಿಸಿದ ಕಾಗವಾಡ ಮತದಾರ
Last Updated 11 ಡಿಸೆಂಬರ್ 2019, 10:11 IST
ಅಕ್ಷರ ಗಾತ್ರ

ಬೆಳಗಾವಿ: ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ ಅವರಿಗೆ ಮತದಾರರು ಮಣೆ ಹಾಕುವ ಮೂಲಕ, ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿದ್ದಾರೆ. ಅಲ್ಲಿ ಕಾಂಗ್ರೆಸ್‌ನ ಭರಮಗೌಡ (ರಾಜು) ಕಾಗೆ ಸೋಲು ಕಂಡಿದ್ದಾರೆ. ಜೆಡಿಎಸ್‌ನ ಶ್ರೀಶೈಲ ತುಗಶೆಟ್ಟಿ ಅವರು ಮತ ಗಳಿಕೆಯಲ್ಲಿ ನಾಲ್ಕಂಕಿಗಳನ್ನು ದಾಟುವುದೂ ಸಾಧ್ಯವಾಗಿಲ್ಲ.

ಅಭ್ಯರ್ಥಿಗಳ ಪಕ್ಷಗಳು ಅದಲು–ಬದಲು ಆಗಿದ್ದರಿಂದಾಗಿ ಈ ಕ್ಷೇತ್ರ ಗಮನಸೆಳೆದಿತ್ತು. 2018ರ ಮೇನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಶ್ರೀಮಂತ ಪಾಟೀಲ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಭರಮಗೌಡ ಕಾಗೆ ಈ ಬಾರಿ ಪಕ್ಷ ಬದಲಿಸಿದ್ದರು. ಡಿ. 5ರಂದು ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸೋಮವಾರ ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಜರುಗಿತು.

ಶ್ರೀಮಂತ ಪಾಟೀಲ 76,952 ಹಾಗೂ ಕಾಗೆ 58,395 ಮತಗಳನ್ನು ಗಳಿಸಿದ್ದಾರೆ. ಶ್ರೀಮಂತ ತಮ್ಮ ಸಾಂಪ್ರದಾಯಿಕ ಎದುರಾಳಿಗಿಂತ 18,557 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಂಚೆ ಮತಗಳಲ್ಲೂ ಬಿಜೆಪಿಗೆ ಹೆಚ್ಚಿನ (52) ಮತಗಳು ಬಂದಿವೆ.

ಸೋಮವಾರ ನಡೆದ ಮತ ಎಣಿಕೆಯ ಎಲ್ಲ ಸುತ್ತುಗಳಲ್ಲೂ ಶ್ರೀಮಂತ ಮುನ್ನಡೆ ಕಾಯ್ದುಕೊಂಡಿದ್ದರು. ಅಂದರೆ, ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಅವರಿಗೆ ಆಶೀರ್ವಾದ ಮಾಡಿದ್ದಾರೆ ಎನ್ನುವುದು ಸ್ಪಷ್ಟ. ಚುನಾವಣೆ ಘೋಷಣೆಯಾಗಿ ಮತದಾನ ದಿನ ಸಮೀಪಿಸುವವರೆಗೂ ಕ್ಷೇತ್ರದಲ್ಲಿ ಪಾಟೀಲ ವಿರುದ್ಧವಾದ ಅಲೆ ಇದೆ ಎಂದೇ ಬಿಂಬಿತವಾಗಿತ್ತು. ಆದರೆ, ಕೊನೆಯ ಎರಡು ದಿನಗಳಲ್ಲಿ ಪರಿಸ್ಥಿತಿ ಬದಲಾಯಿತು. ಇದಕ್ಕೆ ಕಾರಣ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೂಪಿಸಿದ ಕಾರ್ಯತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಗೆ ವರವಾಗಿದ್ದು...

* ಪ್ರಚಾರದ ಭರಾಟೆಯಲ್ಲಿ ಬಿಜೆಪಿಯವರು ಒಂದು ಕೈ ಮುಂದಿದ್ದರು. ಸ್ವತಃ ಮುಖ್ಯಮಂತ್ರಿಯೇ ಬಂದು ಅಲ್ಲಿ ಬಂದು ಉಳಿದಿದ್ದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವು ಸಚಿವರಿಗೆ ಉಸ್ತುವಾರಿ ವಹಿಸಲಾಗಿತ್ತು. ಅಲ್ಲದೇ, ಸಂಸದರು, ವಿಧಾನಪರಿಷತ್‌ ಸದಸ್ಯರು, ಶಾಸಕರು, ಮಾಜಿ ಶಾಸಕರು ಕೂಡ ಸಂಘಟಿತವಾಗಿ ವ್ಯಾಪಕ ಪ್ರಚಾರ ನಡೆಸಿದ್ದರು.

* ಶ್ರೀಮಂತ ಪಾಟೀಲ ಗೆದ್ದರೆ ಸಚಿವ ಸ್ಥಾನ ಸಿಗಲಿದೆ ಎಂದು ಮುಖ್ಯಮಂತ್ರಿ ನೀಡಿದ್ದ ಭರವಸೆಗೆ ಮತದಾರರು ‘ಮನ್ನಣೆಯ ಮುದ್ರೆ’ ಒತ್ತಿದ್ದಾರೆ.

* ‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಮರ್ಪಕವಾಗಿ ಅನುದಾನ ದೊರೆಯಲಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಮ್ಮನ್ನು ಕಡೆಯಾಗಿ ಕಂಡರು. ಹೀಗಾಗಿಯೇ ಕ್ಷೇತ್ರದ ಅಭಿವೃದ್ಧಿಗಾಗಿ ‍ಪಕ್ಷಾಂತರ ಮಾಡಿದ್ದೇನೆ’ ಎನ್ನುವ ಹೇಳಿಕೆ ನೀಡುತ್ತಿದ್ದ ಪಾಟೀಲರ ಮಾತುಗಳನ್ನು ಜನರು ಬೆಂಬಲಿಸಿರುವುದು ಫಲಿತಾಂಶದಿಂದ ಸ್ಪಷ್ಟವಾಗಿ ತಿಳಿದುಬಂದಿದೆ.

* ಬಿಜೆ‍ಪಿ ಕಾರ್ಯಕರ್ತರು ಹಾಗೂ ಆರ್‌ಎಸ್‌ಎಸ್‌ ಸ್ವಯಂಸೇವಕರು ಬೆನ್ನೆಲುಬಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ಶ್ರೀಮಂತಗೆ ‘ವರ’ವಾಗಿದೆ.

ಕಾಂಗ್ರೆಸ್‌ಗೆ ಮುಳುವಾಗಿದ್ದು...

* ಕಾಂಗ್ರೆಸ್‌ಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿದೆ ಎನ್ನಲಾಗುತ್ತಿದೆ.

* ಇಲ್ಲಿನ ಉಸ್ತುವಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ವಹಿಸಲಾಗಿತ್ತು. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಪ್ರಚಾರ ಮಾಡಿದ್ದರು. ಶಾಸಕರಾದ ಎಂ.ಬಿ. ಪಾಟೀಲ, ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರದಾದ್ಯಂತ ತಿರುಗಾಡಿದ್ದರು. ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ.

* ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಒಮ್ಮೆಯಷ್ಟೇ ‍ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದರು. ಸಂಘಟನೆಯಲ್ಲಿನ ಕೊರತೆ, ಮುಖಂಡರಲ್ಲಿದ್ದ ವೈಮನಸ್ಸು ವ್ಯತಿರಿಕ್ತ ಫಲತಾಂಶಕ್ಕೆ ಕಾರಣವಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಅಭ್ಯರ್ಥಿ ಪಕ್ಷ ಪಡೆದ ಮತ

ಶ್ರೀಮಂತ ಪಾಟೀಲ ಬಿಜೆಪಿ 76,952

ಭರಮಗೌಡ ಕಾಗೆ ಕಾಂಗ್ರೆಸ್ 58,395

ಶ್ರೀಶೈಲ ತುಗಶೆಟ್ಟಿ ಜೆಡಿಎಸ್ 2,448

ವಿವೇಕ್ ಶೆಟ್ಟಿ ವಂಚಿತ ಬಹುಜನ ಆಘಾಡಿ 1,099

ಎ.ಸಚಿನ್‌ಕುಮಾರ್‌ ಉತ್ತಮ ಪ್ರಜಾಕೀಯ ಪಾರ್ಟಿ 272

ಅರ್ಚನಾ ಮೋಳಕರ ಪಕ್ಷೇತರ 249

ದೀಪಕ್ ಬುರ್ಲಿ ಪಕ್ಷೇತರ 437

ಮುರಗೆಪ್ಪ ದೇವರೆಡ್ಡಿ ಪಕ್ಷೇತರ 304

ಸಂದೀಪ ಕಾಂಬ್ಳೆ ಪಕ್ಷೇತರ 636

ನೋಟಾ;1,238

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT