ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ ಲೆಕ್ಕ ಕೊಡದಿದ್ದರೆ ಬಿಡಲ್ಲ: ಸಿದ್ದರಾಮಯ್ಯ ಸವಾಲು

Last Updated 8 ಜುಲೈ 2020, 9:50 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌–19 ನಿರ್ವಹಣೆಗೆ ಮಾಡಿದ ವೆಚ್ಚದ ಕುರಿತು ರಾಜ್ಯ ಸರ್ಕಾರ ಲೆಕ್ಕ ನೀಡಲೇಬೇಕು. ಇಲ್ಲದಿದ್ದರೆ ನಾನು ಬಿಡುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಇಲ್ಲಿ ಸವಾಲು ಹಾಕಿದರು.

‘ದಾಖಲೆಗಳನ್ನು ಸಾರ್ವಜನಿಕರ ಮುಂದಿಡಬೇಕು. ನೀಡದಿದ್ದರೆ ಭ್ರಷ್ಟಾಚಾರ ಒಪ್ಪಿಕೊಂಡಂತಾಗುತ್ತದೆ. ಪ್ರಾಮಾಣಿಕವಾಗಿದ್ದರೆ ಭಯವೇಕೇ? ಹೀಗಾಗಿ, ತನಿಖೆ ನಡೆಸಲೇಬೇಕು. ಅದಕ್ಕಾಗಿ ಸದನ ಸಮಿತಿ ರಚಿಸಲಿ’ ಎಂದು ಒತ್ತಾಯಿಸಿದರು.

‘ಕೊರೊನಾ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ಏನು ಮಾಡುತ್ತಿದೆ? ಬಡವರಿಗೆ ಊಟ ಕೊಟ್ಟಿಲ್ಲ, ಜನರು ಕೆಲಸ ಕಳೆದುಕೊಂಡು ಬೆಂಗಳೂರು ತೊರೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌‘ಪ್ರಧಾನಿ ಮೋದಿ ಅಕಾಲದಲ್ಲಿ ಲಾಕ್‌ಡೌನ್‌ ಮಾಡಿದರು. ಸೋಂಕು ವಿಪರೀತವಾಗಿ ಹೆಚ್ಚುತ್ತಿದ್ದು, ಈಗ ಲಾಕ್‌ಡೌನ್‌ ಮಾಡಬೇಕಿತ್ತು. ಆದರೆ, ಈಗ ಮಾಡಲು ಸಾಧ್ಯವಿಲ್ಲ, ಅರ್ಥಿಕತೆ ಕುಸಿದು ಹೋಗುತ್ತದೆ, ವೇತನ ನೀಡಲು ಕಾಸಿಲ್ಲದಂತಾಗುತ್ತದೆ ಎಂಬ ನೆಪ ಹೇಳುತ್ತಿದ್ದಾರೆ. ಇವರಿಗೆ ಜೀವ ಮುಖ್ಯವೇ ಅಥವಾ ಆರ್ಥಿಕತೆ ಮುಖ್ಯವೇ’ ಎಂದು ಪ್ರಶ್ನಿಸಿದರು.

‘ನಮ್ಮಲ್ಲಿ ಕೋವಿಡ್‌ ಪರೀಕ್ಷೆ ಮಾಡುವುದು ಕಡಿಮೆ ಆಗಿದೆ. ಅಮೆರಿಕದಲ್ಲಿ 10 ಲಕ್ಷ ಜನರಲ್ಲಿ 1 ಲಕ್ಷ ಮಂದಿಗೆ ಪರೀಕ್ಷೆ ಮಾಡುತ್ತಿದ್ದಾರೆ. ನಮ್ಮಲ್ಲಿ ಕೇವಲ 12 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಹೀಗಾಗಿ, ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ’ ಎಂದರು.

ಮನೋವಿಕಾಸ ಆಗಲ್ಲ: ‘ಆನ್‌ಲೈನ್‌ನಲ್ಲಿ ಶಿಕ್ಷಣ ನೀಡಲು ನನ್ನ ವಿರೋಧ ಇಲ್ಲ. ಆದರೆ, ಆನ್‌ಲೈನ್‌ನಿಂದ ವಿದ್ಯಾರ್ಥಿಗಳ ಮನೋವಿಕಾಸ ಆಗಲ್ಲ’ ಎಂದು ಹೇಳಿದರು.

ವಿಶ್ರಾಂತಿಗೆ ಬಂದಿದ್ದೆ: ‘ನಾನು ವಿಶ್ರಾಂತಿಗಾಗಿ ಮೈಸೂರಿಗೆ ಬಂದಿದ್ದೆ. ಆದರೆ, ನೀವು ಏನೇನೋ ಬರೆಯುತ್ತಿದ್ದೀರಿ. ಕ್ವಾರಂಟೈನ್‌ ಆಗಿದ್ದೇನೆ ಎನ್ನುತ್ತೀರಿ. ಹೀಗಾಗಿ, ನಾನು ಬೆಂಗಳೂರಿಗೆ ಹಿಂತಿರುತ್ತೇನೆ’ ಎಂದು ನಗು ಬೀರಿದರು.

‘ಜೆಡಿಎಸ್ ಜೊತೆ ಮೈತ್ರಿ–ನನ್ನ ಮಾತು ಕೇಳಲಿಲ್ಲ’
ಮೈಸೂರು:
‘ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್‌ ಏಳೆಂಟು ಸ್ಥಾನ ಗೆಲ್ಲುತ್ತಿತ್ತು. ಆದರೆ, ಅಂದು ನನ್ನದು ಏಕಾಂಗಿ ದನಿಯಾಗಿ ಉಳಿಯಿತು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಮೈತ್ರಿ ಬೇಡ ಎಂದು ನಾನು ಅಂದೇ ಹೇಳಿದ್ದೆ. ಏಕೆಂದರೆ ಜೆಡಿಎಸ್‌ ಮತ ನಮಗೆ ಬರಲ್ಲ. ನಮ್ಮ ಮತ ಅವರಿಗೆ ಹೋಗಲ್ಲ. ಬಹಳ ವರ್ಷಗಳಿಂದ ನಾವಿಬ್ಬರು ಹಳೆ ಮೈಸೂರಿನಲ್ಲಿ ಪರಸ್ಪರ ಹೋರಾಟ ನಡೆಸಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT