ಮಂಗಳವಾರ, ಜೂನ್ 22, 2021
28 °C
ಕಾಂಗ್ರೆಸ್–ಜೆಡಿಎಸ್ ಮೈತ್ರಿ ಬಗ್ಗೆ ಟೀಕೆ

ಅಸಹ್ಯ ಹುಟ್ಟಿಸಿದ್ದ ಮೈತ್ರಿ ಸರ್ಕಾರ ಬೇಕೇ: ಎಸ್‌.ಎಂ.ಕೃಷ್ಣ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದ ಹಿತ ಕಾಪಾಡದೆ 14 ತಿಂಗಳು ಕಚ್ಚಾಟದಲ್ಲೇ ಕಾಲಹರಣ ಮಾಡಿದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಬಗ್ಗೆ ಜನತೆಯಲ್ಲಿ ಅಸಹ್ಯ ಹುಟ್ಟಿದೆ. ಮತ್ತೆ ಅದೇ ಮೈತ್ರಿ ಸರ್ಕಾರ ಅಧಿಕಾರಕ್ಕೇರುವುದನ್ನು ಜನ ಬಯಸುವುದಿಲ್ಲ. ಬಿಜೆಪಿಗೇ ಸ್ಪಷ್ಟ ಬಹುಮತ ನೀಡಲಿದ್ದಾರೆ’ ಎಂದು ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

‘ಪುನಃ ಸರ್ಕಾರ ರಚಿಸುತ್ತೇವೆ ಎಂದು ಎರಡೂ ಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಗಳು ಕೇವಲ ಹಗಲುಗನಸು. ಸುಮ್ಮನೆ ನಾಟಕ ಆಡುತ್ತಿದ್ದಾರೆ’ ಎಂದು ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಮೈತ್ರಿ ಸರ್ಕಾರ ರಚಿಸುವುದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಹೇಳಿಕೆ ನೀಡಲಾರಂಭಿಸಿದ ಬಳಿಕ ಬಿಜೆಪಿ ಕಾರ್ಯಕರ್ತರು ಇನ್ನೂ  ಹೆಚ್ಚು ಶ್ರಮ ಹಾಕುತ್ತಿದ್ದಾರೆ. ಇದರಿಂದ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದು ಖಚಿತ. ಯಾರ ಹಂಗಿಗೂ ಒಳಗಾಗದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ’ ಎಂದು ಕೃಷ್ಣ ತಿಳಿಸಿದರು.

ಬಿಜೆಪಿ ಸರ್ಕಾರವನ್ನು ಬೀಳಿಸುವುದಿಲ್ಲ ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಮಾಜಿ ಪ್ರಧಾನಿ ಅವರ ಬಾಯಿಯಿಂದ ಮಾತು ಹೊರಗೆ ಬಂದರೆ ಅದಕ್ಕೆ ಕಿಮ್ಮತ್ತು ಇರಲೇಬೇಕಲ್ಲವೆ ಎಂದೂ ಹೇಳಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹ ಶಾಸಕರ ಸಂಸ್ಕೃತಿ ಮತ್ತು ಬಿಜೆಪಿ ಸಂಸ್ಕೃತಿ ಭಿನ್ನವಾಗಿವೆ. ಅವರು ಬಿಜೆಪಿ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ಯವೇ’ ಎಂಬ ಪ್ರಶ್ನೆಗೆ, ‘ನಾನೂ ಬೇರೆ ಪಕ್ಷದ ಸಂಸ್ಕೃತಿಯಿಂದಲೇ ಬಂದವನು. ಇಲ್ಲಿ ಬಂದ ಮೇಲೆ ಇಲ್ಲಿಯ ಸಂಸ್ಕೃತಿಗೆ ಒಗ್ಗಿಕೊಂಡಿದ್ದೇನೆ. ಅವರೂ ಒಗ್ಗಿಕೊಳ್ಳುತ್ತಾರೆ, ಸಂಶಯ ಬೇಕಿಲ್ಲ’ ಎಂದು ಕೃಷ್ಣ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂಚಲನ ಸೃಷ್ಟಿಯಾಗಿದೆ. ಜನತೆ ಸರ್ಕಾರದಿಂದ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದರು.

‘ಮೈತ್ರಿ ಸರ್ಕಾರದ ಪತನಕ್ಕೆ ನಾನೇ ಕಾರಣ ಎಂದು ಹೇಳಿಲ್ಲ. ನಾನೂ ಕಾರಣ ಎಂದು ಹೇಳಿದ್ದೆ. ಅದೇ ನಿಲುವಿಗೆ ಈಗಲೂ ಬದ್ಧ. ಕೆಲವರು ಸಲಹೆ ಸೂಚನೆಗಳನ್ನು ಕೇಳಲು ನನ್ನ ಬಳಿ ಬರುತ್ತಾರೆ. ಅಲ್ಲಿದ್ದು ಏನು ಮಾಡುತ್ತೀರಿ, ಹೊರಗೆ ಬನ್ನಿ ಎಂದು ಸಲಹೆ ನೀಡಿದ್ದೇನೆ. ಈ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ನನ್ನದೇ ಆದ ಕೊಡುಗೆ ನೀಡಿದ್ದೇನೆ’ ಎಂದು ಅವರು ವಿವರಿಸಿದರು.

‘ಮೈತ್ರಿ ಸರ್ಕಾರ ಅವಧಿಯಲ್ಲಿ ರಾಜ್ಯ 10 ವರ್ಷ ಹಿಂದಕ್ಕೆ’

‘ದಿಕ್ಕು ದೆಸೆಯಿಲ್ಲದ 14 ತಿಂಗಳ ಆಡಳಿತ ನಡೆಸಿದ ಸಮಿಶ್ರ ಸರ್ಕಾರದಿಂದ ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ’ ಎಂದು ಎಸ್‌.ಎಂ.ಕೃಷ್ಣ ಮಂಗಳವಾರ ಟೀಕಿಸಿದರು.

ಹೇರೋಹಳ್ಳಿ ವಾರ್ಡ್‌ನ ನಾಗರಹೊಳೆನಗರ, ಹೇರೋಹಳ್ಳಿ, ಆಂದರಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಮತಯಾಚಿಸಿ ಮಾತನಾಡಿದರು.

‘ಅನುದಾನ ನೀಡದೆ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಸರ್ಕಾರ ಬಂದ ಕೂಡಲೇ ಕ್ಷೇತ್ರದ ಅಭಿವೃದ್ಧಿಗಾಗಿ ₹ 761 ಕೋಟಿ ಅನುದಾನ ನೀಡಲಾಗಿದೆ’ ಎಂದರು.

ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನ ನೀಡದೆ, ದ್ವೇಷ ಅಸೂಯೆಯಿಂದ ನಡೆಸಿಕೊಂಡರು’ ಎಂದು ದೂರಿದರು.

‘ಕ್ಷೇತ್ರಕ್ಕೆ ಅನುದಾನ ಸಿಗುತ್ತದೆಎಂಬ ಉದ್ದೇಶದಿಂದ ಹಲವಾರು ತಿಂಗಳು ಸಹಿಸಿಕೊಂಡೆ. ಕಾಂಗ್ರೆಸ್, ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ’ ಎಂದು ಅವರು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಇತರ ಮುಖಂಡರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು