ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಅನರ್ಹತೆ | ಹಿಂದಿನ ಮೂವರು ಸಭಾಧ್ಯಕ್ಷರ ಭಿನ್ನ ನಡೆ

ಶಾಸಕರನ್ನು ಅನರ್ಹಗೊಳಿಸಿದ್ದ ಬೋಪಯ್ಯ l ತೀರ್ಮಾನ ತೆಗೆದುಕೊಳ್ಳದ ಕೃಷ್ಣ ಮತ್ತು ಕೋಳಿವಾಡ
Last Updated 10 ಜುಲೈ 2019, 2:07 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರ ಅನರ್ಹತೆ ಕೋರಿದ್ದ ಪ್ರಕರಣದಲ್ಲಿ ಹಿಂದೆ ವಿಧಾನಸಭಾಧ್ಯಕ್ಷರಾಗಿದ್ದವರು ವಿಭಿನ್ನ ನಡೆಯನ್ನೇ ತೋರಿದ್ದಾರೆ.

ಹಿಂದಿನ ಮೂರು ಸರ್ಕಾರಗಳ ಅವಧಿಯಲ್ಲಿ ಶಾಸಕರ ಅನರ್ಹತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಒಂದು ಪ್ರಕರಣದಲ್ಲಿ ಮಾತ್ರ ಸಹಜ ನ್ಯಾಯ ಪಾಲಿಸದೇ ಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಿದ್ದರೆ, ಎರಡು ಪ್ರಕರಣಗಳಲ್ಲಿ ಅನರ್ಹತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನನೆಗುದಿಯಲ್ಲಿಟ್ಟು ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲೇ ಇಲ್ಲ.

2011ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ ಬಂಡಾಯವೆದ್ದಿದ್ದ ಐವರು ಪಕ್ಷೇತರರು ಸೇರಿ ಒಟ್ಟು 16 ಶಾಸಕರು ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಹಂತದಲ್ಲಿ ಅವರನ್ನೆಲ್ಲ ಅನರ್ಹಗೊಳಿಸುವಂತೆ ಬಿಜೆಪಿಯ ಅಂದಿನ ವಿಧಾನಸಭಾಧ್ಯಕ್ಷ ಕೆ.ಜೆ.ಬೋಪಯ್ಯ ಅವರಿಗೆ ಮನವಿ ಮಾಡಿತ್ತು. ಬೋಪಯ್ಯ ಹೆಚ್ಚು ಸಮಯ ತೆಗೆದುಕೊಳ್ಳದೇ ಅಷ್ಟೂ ಶಾಸಕರನ್ನು ಅನರ್ಹಗೊಳಿಸಿದ್ದರು.

‘ವಿಧಾನಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸುವಾಗ ಸಹಜ ನ್ಯಾಯವನ್ನು ಪಾಲಿಸಬೇಕಿತ್ತು. ಆ ರೀತಿ ಮಾಡದೇ ಅನರ್ಹಗೊಳಿಸಲಾಗಿದೆ. ವಿಧಾನಸಭಾಧ್ಯಕ್ಷರು ಆದೇಶವನ್ನು ರದ್ದು ಮಾಡಬೇಕು’ ಎಂದು ಕೋರಿ ಶಾಸಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್ ಸಭಾಧ್ಯಕ್ಷರ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಬಳಿಕ ವಿವಾದವು ಸುಪ್ರೀಂಕೋರ್ಟ್ ತಲುಪಿತ್ತು. ಸುದೀರ್ಘ ಕಾಲ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್,ಸಭಾಧ್ಯಕ್ಷರ ಆದೇಶವನ್ನು ರದ್ದುಪಡಿಸಿತ್ತು. ಆದೇಶವನ್ನು ರದ್ದುಗೊಳಿಸಿದ ಪರಿಣಾಮ 16 ಜನರಿಗೂ ಮತ್ತೆ ಶಾಸಕ ಸ್ಥಾನ ಪ್ರಾಪ್ತಿಯಾಗಿತ್ತು. ಇದಾದ ಮೂರೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಮಾಡಲು ರಾಜ್ಯಪಾಲ ಹನ್ಸರಾಜ್‌ ಭಾರದ್ವಾಜ್‌ ಶಿಫಾರಸು ಮಾಡಿದ್ದರು. ಆದರೆ, ಶಿಫಾರಸ್ಸನ್ನು ಯುಪಿಎ ಸರ್ಕಾರ ತಿರಸ್ಕರಿಸಿತ್ತು. ಕೆ.ಜೆ.ಬೋಪಯ್ಯ ಅವರು ಅನುಸರಿಸಿದ ಕ್ರಮ ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು.

ಮಗನ ವಿರುದ್ಧ ಗೌಡರ ದೂರು

2006 ರಲ್ಲಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌– ಜೆಡಿಎಸ್‌ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಬಂಡಾಯವೆದ್ದರು. 46 ಶಾಸಕರನ್ನು ಸೇರಿಸಿಕೊಂಡು ಬಿಜೆಪಿ ಜತೆ ಸೇರಿ 20:20 ಸರ್ಕಾರ ರಚಿಸಿದರು. ಪಕ್ಷದ ಆದೇಶ ಉಲ್ಲಂಘಿಸಿದ ಕಾರಣ ಕುಮಾರಸ್ವಾಮಿ ಸೇರಿ ಜೆಡಿಎಸ್‌ನ ಎಲ್ಲ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಎಚ್‌.ಡಿ.ದೇವೇಗೌಡ ಅವರು ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್‌.ಪೇಟೆ ಕೃಷ್ಣ ಅವರಿಗೆ ಪತ್ರ ಬರೆದಿದ್ದರು.

ಅಧಿಕಾರ ನಡೆಸಲು ಅಗತ್ಯ ಸಂಖ್ಯೆ ಇದ್ದ ಕಾರಣ ಸರ್ಕಾರ ರಚನೆಗೆ ಯಾವುದೇ ತೊಂದರೆ ಆಗಲಿಲ್ಲ. ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದ್ದರು. ವಿಧಾನಮಂಡಲ ಅಧಿವೇಶನಗಳು ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಅನರ್ಹತೆ ಪ್ರಶ್ನೆಯನ್ನು ಪದೇ ಪದೇ ಎತ್ತುತ್ತಿದ್ದರು. ಸೂಕ್ತ ಸಮಯದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿ ತಣ್ಣಗಾಗಿಸುತ್ತಿದ್ದರು. ಆದರೆ, ವಿಧಾನಸಭಾಧ್ಯಕ್ಷರು ಪತ್ರದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲೇ ಇಲ್ಲ. ಕುಮಾರಸ್ವಾಮಿ ಅವರ 20 ತಿಂಗಳ ಅವಧಿ ಮುಗಿಯುತ್ತಿದ್ದಂತೆ ಅಧಿಕಾರವನ್ನು ಹಸ್ತಾಂತರಿಸಲು ಒಪ್ಪದ ಕಾರಣ ಸರ್ಕಾರ ಪತನಗೊಂಡಿತು.

ನಿರ್ಣಯವಾಗದ ಏಳು ಶಾಸಕರ ನಡೆ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಿಧಾನಪರಿಷತ್ತು ಮತ್ತು ರಾಜ್ಯಸಭಾ ಚುನಾವಣೆ ಸಂದರ್ಭ ಜೆಡಿಎಸ್‌ನ ಏಳು ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಅಡ್ಡ ಮತದಾನ ಮಾಡಿದ್ದರು. ಇದರಿಂದ ಜೆಡಿಎಸ್‌ ರಾಜ್ಯಸಭಾ ಅಭ್ಯರ್ಥಿ ಬಿ.ಎಂ.ಫಾರೂಕ್‌ ಸೋಲು ಅನುಭವಿಸಿದ್ದರು.

ಅಡ್ಡ ಮತದಾನ ಮಾಡಿದ್ದ ಎನ್‌.ಚಲುವರಾಯಸ್ವಾಮಿ ಮತ್ತು ಇತರ ಆರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಜೆಡಿಎಸ್‌ ಪತ್ರ ಬರೆದಿತ್ತು. ಆದರೆ, ಜೆಡಿಎಸ್‌ನ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳದೆ, ಮುಂದೂಡುತ್ತಲೇ ಬಂದು ಕಡೆಯಲ್ಲಿ ವಿಚಾರಣೆಯ ಶಾಸ್ತ್ರ ನಡೆಸಿ ಅರ್ಜಿಯನ್ನು ತಿರಸ್ಕರಿಸಿದರು.

ಆಪರೇಷನ್‌ ಆಮಿಷ: ರಚನೆಯಾಗದ ಎಸ್‌ಐಟಿ

‘ಆಪರೇಷನ್‌ ಕಮಲ’ಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರ ಹೆಸರು ಪ್ರಸ್ತಾಪವಾದ ಕಾರಣ ಅದರ ಸತ್ಯಾಸತ್ಯತೆಯ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಪ್ರಕಟಿಸಿದ್ದರು. ಆದರೆ, ಈವರೆಗೂ ಎಸ್‌ಐಟಿ ರಚನೆ ಆಗಿಲ್ಲ.

‘ದೇವದುರ್ಗದ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರನ್ನು ಆಪರೇಷನ್ ಕಮಲಕ್ಕೆ ಸಿಲುಕಿಸುವ ಪ್ರಕರಣದಲ್ಲಿ ಸಭಾಧ್ಯಕ್ಷರನ್ನು ಬುಕ್‌ ಮಾಡಲಾಗಿದೆ’ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆನ್ನಲಾದ ಆಡಿಯೊ ಹರಿದಾಡಿತ್ತು. ಇದನ್ನು ಸದನದಲ್ಲಿ ಪ್ರಸ್ತಾಪಿಸಿದ್ದ ರಮೇಶ್‌ ಕುಮಾರ್‌, 15 ದಿನದೊಳಗೆ ತನಿಖೆ ನಡೆಸಿ ತನ್ನನ್ನು ಆರೋಪ ಮುಕ್ತರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದರು.

ಬಿಜೆಪಿಯಿಂದ ಶಾಸಕರ ಖರೀದಿ: ವೇಣುಗೋಪಾಲ್ ಆರೋಪ

‘ರಾಜ್ಯದಲ್ಲಿ ಶಾಸಕರ ಖರೀದಿಯಲ್ಲಿ ಬಿಜೆಪಿ ತೊಡಗಿದೆ. ಕೆಲವರಿಗೆ ಹಣ, ಮತ್ತೆ ಕೆಲವರಿಗೆ ಸಚಿವ ಸ್ಥಾನ ಹಾಗೂ ಅಧಿಕಾರದ ಆಮಿಷ ಒಡ್ಡಲಾಗಿದೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಲ್ಲಿ ಸೋಮವಾರ ಆರೋಪಿಸಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಸದಾಶಿವನಗರದ ಮನೆಯಲ್ಲಿ ಕಾಂಗ್ರೆಸ್ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಸಭೆ ಚುನಾವಣೆ ನಂತರ ಸಾಕಷ್ಟು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸುವಲ್ಲಿ ಬಿಜೆಪಿ ಕೇಂದ್ರ ನಾಯಕರು ಯಶಸ್ವಿಯಾಗಿದ್ದಾರೆ. ರಾಜ್ಯದ ಮೈತ್ರಿ ಸರ್ಕಾರವನ್ನೂ ಅಸ್ಥಿರಗೊಳಿಸಲು ಆರನೇ ಬಾರಿಗೆ ಪ್ರಯತ್ನ ಮುಂದುವರಿಸಿದ್ದಾರೆ. ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ನಂತಹ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ಸಂಸದರು, ಶಾಸಕರನ್ನು ಬೆದರಿಸಿ, ಬಿಜೆಪಿ ಸೇರುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.

ಭಾನುವಾರದಿಂದ ಪಕ್ಷದ ಹಿರಿಯ ನಾಯಕರು, ಸಚಿವರು, ಶಾಸಕರ ಜತೆ ಸತತವಾಗಿ ಸಭೆ ನಡೆಸಿ ಚರ್ಚಿಸಲಾಗಿದೆ. ಸೋಮವಾರ ಸಹ ಮಾತುಕತೆ ನಡೆಸಲಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಕಾಂಗ್ರೆಸ್‌ನ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿದ್ದಾರೆ. ಜೆಡಿಎಸ್ ಸಚಿವರು ಸಹ ರಾಜೀನಾಮೆ ನೀಡಲಿದ್ದಾರೆ. ಅತೃಪ್ತ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ವಿಫಲವಾಗಲಿದ್ದು, ಸರ್ಕಾರ ಸುಭದ್ರವಾಗಿದೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೇಣುಗೋಪಾಲ್ ಹೇಳಿಕೆಗೆ ಧ್ವನಿಗೂಡಿಸಿದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮುಂದುವರಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಈ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.

‘ಬಿಜೆಪಿಯವರು ಹೊರಗೆ ನಾಟಕ ಆಡುತ್ತಿದ್ದಾರೆ. ನಾವೇನೂ ಮಾಡುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್‌ ಶಾಸಕರೇ ರಾಜೀನಾಮೆ ಕೊಡುತ್ತಿದ್ದಾರೆ. ಅನಿವಾರ್ಯವಾದರೆ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಾರೆ. ಜನರ ಎದುರು ನಾಟಕವಾಡಿ, ಒಳಗೆ ಸರ್ಕಾರ ಬೀಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT