ಗುರುವಾರ , ಜೂನ್ 30, 2022
22 °C
ಸಭಾಧ್ಯಕ್ಷ ಸ್ಥಾನಕ್ಕೆ ರಮೇಶ್‌ ಕುಮಾರ್ ರಾಜೀನಾಮೆ

ಹಿತೈಷಿಗಳು ಎನ್ನುವ ಭ್ರಮೆ ಬೇಡ: ಸಿ.ಎಂಗೆ ರಮೇಶ್‌ ಕುಮಾರ್ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಯಡಿಯೂರಪ್ಪ ಅವರೇ, ಅಧಿಕಾರ ಬಂದಾಗ ನಿಮ್ಮ ಸುತ್ತಮುತ್ತ ತುಂಬಾ ಮಂದಿ ಸುಳಿದಾಡುತ್ತಾರೆ. ಈ ಬಗ್ಗೆ ಜಾಗರೂಕತೆ ವಹಿಸಿ. ಹಿತೈಷಿಗಳು ಎಂಬ ಭ್ರಮೆಗೆ ಒಳಗಾಗಬೇಡಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಅವರು ಮುಖ್ಯಮಂತ್ರಿ ಅವರಿಗೆ ಕಿವಿಮಾತು ಹೇಳಿದರು. 

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೋಮವಾರ ವಿಶ್ವಾಸಮತ ಗೆದ್ದ ಬೆನ್ನಲ್ಲೇ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪ‍್ರಕಟಿಸಿದ ಅವರು ವಿದಾಯದ ಭಾಷಣ ಮಾಡಿದರು. ‘ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ. ಮುಖ್ಯಮಂತ್ರಿಯಾಗಿ ಬಡವರಿಗೆ ಅನುಕೂಲವಾಗುವ ಕೆಲಸ ಮಾಡಿ, ಬಲಾಢ್ಯರಿಗೆ ಅಲ್ಲ’ ಎಂದು ಸಲಹೆ ನೀಡಿದರು.

ವಿಶ್ವಾಸಮತ ಯಾಚನೆ, ಹಣಕಾಸು ಮಸೂದೆ ಹಾಗೂ ಪೂರಕ ಅಂದಾಜಿಗೆ ಅನುಮೋದನೆ ಸಿಕ್ಕ ಬಳಿಕ ವಿಧಾನಸಭೆಯಲ್ಲೇ ಅವರು ರಾಜೀನಾಮೆ ಪ್ರಕಟಿಸಿದರು. ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಮೇಶ್‌ ಕುಮಾರ್‌ 14 ತಿಂಗಳು 4 ದಿನಗಳು ವಿಧಾನಸಭಾಧ್ಯಕ್ಷರಾಗಿದ್ದರು.

ರಮೇಶ್‌ ಕುಮಾರ್‌ ಅವರು ಮೂವರು ಶಾಸಕರನ್ನು ಗುರುವಾರ ಹಾಗೂ 14 ಶಾಸಕರನ್ನು ಭಾನುವಾರ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಸದನದಲ್ಲಿ ವಿದಾಯ ಭಾಷಣ ಮಾಡಿದ ಅವರು, ‘ಶಾಸಕರನ್ನು ಅನರ್ಹ ಮಾಡುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿ, ಒತ್ತಡಕ್ಕೆ ಮಣಿಯದೆ ಈ ಕ್ರಮ ಕೈಗೊಂಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

‘ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಉಳಿಸಲು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಶಕ್ತಿಯುತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸದನದಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಮೂಲಕ ಬೇರೆ ರಾಜ್ಯಗಳ ಸದನಗಳಿಗೂ ಒತ್ತಡ ಹೇರುವ ಕೆಲಸ ಆಗಬೇಕು. ಜತೆಗೆ ಪ್ರಜಾಪ್ರತಿನಿಧಿಗಳ ಕಾಯ್ದೆಯನ್ನು ಪುನಃ ಪರಾಮರ್ಶೆ ಮಾಡಬೇಕಿದೆ’ ಎಂದು ಪ್ರತಿಪಾದಿಸಿದರು.

‘ಜನಪ್ರತಿನಿಧಿಗಳು ಜೂನ್‌ 30ರೊಳಗೆ ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸಬೇಕು ಎಂದು ಲೋಕಾಯುಕ್ತ ಕಾಯ್ದೆಯಲ್ಲಿದೆ. ಆದರೆ, ಸಲ್ಲಿಸದಿದ್ದರೆ ಏನಾಗುತ್ತದೆ ಎಂದು ಕೇಳುವವರು ಸಾಕಷ್ಟು ಮಂದಿ. ಯಾರನ್ನು ಮೆಚ್ಚಿಸಲು ಈ ಶಾಸನ ತಂದಿದ್ದೀರಿ. ಒಂದೋ ಈ ಕಾಯ್ದೆಯನ್ನು ತೆಗೆದು ಹಾಕಿ, ಇಲ್ಲದಿದ್ದರೆ ಇನ್ನಷ್ಟು ಬಲ ತುಂಬಿ’ ಎಂದು ಖಾರವಾಗಿ ಹೇಳಿದರು.

‘ನಾವು ನಾಮಪತ್ರ ಸಲ್ಲಿಸುವ ವೇಳೆ ನಮ್ಮ ಆಸ್ತಿ ವಿವರದ ಪ್ರಮಾಣಪತ್ರ ಸಲ್ಲಿಸುತ್ತೇವೆ. ನಮ್ಮ ಆಸ್ತಿ ₹380 ಕೋಟಿ ಎಂದು ಘೋಷಿಸಿಕೊಳ್ಳುತ್ತೇವೆ. ಈ ಆಸ್ತಿ ಎಲ್ಲಿಂದ ಬಂತು ಎಂದು ಚುನಾವಣಾ ಆಯೋಗ ಪ್ರಶ್ನಿಸುವುದಿಲ್ಲ. ಈ ಬಗ್ಗೆ ವಿಚಾರಣೆಯೂ ನಡೆಯುವುದಿಲ್ಲ. ಇಂತಹ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಿ ತನಿಖೆ ಮಾಡಿಸುವ ಮೂಲಕ ಜನರಿಗೆ ವ್ಯವಸ್ಥೆ ಮೇಲೆ ವಿಶ್ವಾಸ ಮೂಡುವಂತೆ ಮಾಡಬೇಕು’ ಎಂದರು. ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಬೇಕು ಎಂದೂ ಪ್ರತಿಪಾದಿಸಿದರು.

‘ಆಲ್‌ ದಿ ಬೆಸ್ಟ್‌...’

ಬೆಂಗಳೂರು:‘ಆಲ್‌ ದಿ ಬೆಸ್ಟ್‌ ಯಡಿಯೂರಪ್ಪ’ ಎಂದು ಗಟ್ಟಿ ಧ್ವನಿಯಲ್ಲಿ ಸಿದ್ದರಾಮಯ್ಯ ಹೇಳಿದಾಗ, ಮುಖದಲ್ಲಿ ನಗು ತಂದುಕೊಂಡು ಯಡಿಯೂರಪ್ಪ ಹಸ್ತಲಾಘವ ಮಾಡಿದರು. ಅಲ್ಲಿದ್ದ ಕಾಂಗ್ರೆಸ್‌ ನಾಯಕರೆಲ್ಲ ಅಭಿನಂದಿಸಿದರು.

ಶುಭಾಶಯ ವಿನಿಮಯಕ್ಕೆ ಆಗಷ್ಟೇ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಆರ್‌.ರಮೇಶ್‌ ಕುಮಾರ್‌ ಸಾಕ್ಷಿಯಾದರು. ಯಡಿಯೂರಪ್ಪ, ಸಿದ್ದರಾಮಯ್ಯ, ಜೆ.ಸಿ.ಮಾಧುಸ್ವಾಮಿ ಮುಂತಾದವರು ರಮೇಶ್‌ ಕುಮಾರ್‌ಗೆ ಶುಭ ಹಾರೈಸಲು ಸಭಾಧ್ಯಕ್ಷರ ಕೊಠಡಿಗೆ ಬಂದಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು