ಸೋಮವಾರ, ಜುಲೈ 26, 2021
26 °C
ಮಂಗಳೂರಿನ 22 ಸ್ಮಶಾನಗಳಲ್ಲಿ ಸಸ್ಯ ಸಂಪತ್ತು

ಸ್ಮಶಾನ ವನದ ಸಸ್ಯ ಸಂಪತ್ತು ರೂವಾರಿ ಜೀತ್ ಮಿಲನ್

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ಸ್ಮಶಾನಗಳೆಂದರೆ ಜನರಿಗೆ ಒಂದು ರೀತಿಯ ಭಯ. ಅತ್ತ ಸುಳಿಯುವುದಕ್ಕೂ ಯಾರೂ ಮನಸ್ಸು ಮಾಡುವುದಿಲ್ಲ. ಇದನ್ನೇ ಇಟ್ಟುಕೊಂಡು ನಗರದ ಜೀತ್‌ ಮಿಲನ್‌ ರೋಚ್‌ ಅವರು ಮಂಗಳೂರು ಟೀಮ್‌ ಬ್ರಿಗೇಡ್‌ ಮೂಲಕ ನಗರದ 22 ಸ್ಮಶಾನಗಳಲ್ಲಿ ಸಸ್ಯ ಸಂಕುಲ ಬೆಳೆಸುವಲ್ಲಿ ನಿರತರಾಗಿದ್ದಾರೆ.

ಜೆಪ್ಪು ನಿವಾಸಿ ಜೀತ್ ಮಿಲನ್ ರೋಚ್ ಅವರು ಸ್ಮಶಾನದಲ್ಲೂ ಹೂವು, ಹಣ್ಣಿನ ಹಾಗೂ ಔಷಧಿಯ ಸಸ್ಯಗಳನ್ನು ನೆಡುವುದರ ಜತೆಗೆ ಅಲ್ಲಿ ಮನಸ್ಸಿಗೆ ಮುದ ನೀಡುವ ವಾತಾವರಣ ಸೃಷ್ಟಿಸಿದ್ದಾರೆ. ಪಕ್ಷಿ, ಪ್ರಾಣಿಗಳಿಗೆ ಆಹಾರ, ಗೂಡು ಕಟ್ಟುವ ಸ್ಥಳವನ್ನೂ ಒದಗಿಸಿದ್ದಾರೆ. ಮಂಗಳೂರಿನಲ್ಲಿ ಹಸಿರನ್ನು ಉಳಿಸುವ ಧ್ಯೇಯದಿಂದ 16 ವರ್ಷಗಳಿಂದ ಗಿಡಗಳನ್ನು ಬೆಳೆಸುವ ಕಾಯಕದಲ್ಲಿ ನಿರತವಾಗಿರುವ ಅವರು, ನಂದಿಗುಡ್ಡೆ ಸೇರಿದಂತೆ ನಗರದ 22 ಸ್ಮಶಾನಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.

‘ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಗಿಡ ನೆಟ್ಟು ಬೆಳೆಸುವುದು ಸಾಮಾನ್ಯ. ಈ ಗಿಡ ಮರಗಳಿಗೆ ಮನುಷ್ಯರ ಕಾಟ ಇದ್ದೇ ಇರುತ್ತದೆ. ಆದರೆ, ಸ್ಮಶಾನಗಳು ಮರಗಳ ಪಾಲಿಗೆ ಸುರಕ್ಷಿತ ತಾಣ. ಖಾಲಿ ಜಾಗವೂ ಹೆಚ್ಚಾಗಿರುತ್ತದೆ. ಇಲ್ಲಿ ಸಸಿಗಳನ್ನು ನೆಟ್ಟರೆ ಪೋಷಣೆಯೂ ಸುಲಭ. ಯಾರೂ ಹಾನಿ ಮಾಡುವುದಿಲ್ಲ’ ಎನ್ನುತ್ತಾರೆ ಜೀತ್ ಮಿಲನ್‌.

ವೃತ್ತಿಯಲ್ಲಿ ಮದುವೆ, ಮುಂಜಿ, ನಾನಾ ಕಂಪನಿಗಳು, ಬಿಲ್ಡರ್‌ಗಳ ಪಾರ್ಟಿ, ನಾನಾ ಸಮಾವೇಶಗಳಲ್ಲಿ ಕಾಕ್‌ಟೈಲ್ ಪಾರ್ಟಿಗಳ ಆಯೋಜನೆ ಮಾಡುವ ಜೀತ್‌ ಮಿಲನ್, ಪ್ರವೃತ್ತಿಯಲ್ಲಿ ಹಸಿರು ಸಿರಿಯ ಆರಾಧನೆ ಮಾಡುತ್ತಾರೆ. ಮಂಗಳಾದೇವಿ-ಮೋರ್ಗನ್ಸ್‌ಗೇಟ್-ವೆಲೆನ್ಸಿಯಾ, ಲೇಡಿಹಿಲ್-ಸುಲ್ತಾನ್‌ಬತ್ತೇರಿ, ಮಣ್ಣಗುಡ್ಡೆ- ಉರ್ವಸ್ಟೋರ್, ಬಿಜೈ- ಕೆಪಿಟಿ-ಕಾವೂರು, ಮರೋಳಿ- ಫರಂಗಿ
ಪೇಟೆ ರಸ್ತೆಗಳ ಪಕ್ಕದಲ್ಲಿ ಗಿಡಗಳನ್ನು ನೆಟ್ಟಿ ರುವ ಅವರು, ನಗರದ ಐದು ಕಾಲೇಜು ಕ್ಯಾಂಪಸ್‌ಗಳನ್ನೂ ಹಸಿರಾಗಿಸಿದ್ದಾರೆ.


-ಜೀತ್ ಮಿಲನ್ ರೋಚ್, ಪರಿಸರ ಪ್ರೇಮಿ

40 ಕ್ಕೂ ಹೆಚ್ಚು ಮರ ಸ್ಥಳಾಂತರ
ಜೀತ್‌ ಮಿಲನ್‌ ಅವರ ನೇತೃತ್ವದಲ್ಲಿ ನಗರದಲ್ಲಿ 40ಕ್ಕೂ ಹೆಚ್ಚಿನ ಮರಗಳನ್ನು ಸ್ಥಳಾಂತರಿಸಲಾಗಿದೆ. ಈ ಕಾರ್ಯ ಉಡುಪಿವರೆಗೂ ವಿಸ್ತರಿಸಿದೆ. ಸ್ಥಳಾಂತರಿಸಿದ ಮರಗಳಲ್ಲಿ ಹೆಚ್ಚಿನವು ಬದುಕಿವೆ. ಜೀತ್‌ ಅವರ ಪರಿಸರ ರಕ್ಷಣೆಯ ಕಾಯಕದಲ್ಲಿ ಪತ್ನಿ ಸೆಲ್ಮಾ ಮರಿಯಾ ರೋಚ್‌ ಬೆಂಬಲ ನೀಡುತ್ತಾರೆ. ಮರಗಳನ್ನು ಸ್ಥಳಾಂತರಿಸಿ ನೆಡುವ ಕೆಲಸ ಮಾಡಿರುವ ಜೀತ್ ಮಿಲನ್ ರೋಚ್ ಈ ಬಗ್ಗೆ ಉಚಿತ ಸಲಹೆ ನೀಡುತ್ತಾರೆ.

*
ಕಾಂಕ್ರೀಟ್ ಗೂಡಾಗಿ ಬೆಳೆಯುತ್ತಿರುವ ನಗರವನ್ನು ಹಸಿರಾಗಿಡುವುದೇ ನನ್ನ ಕನಸು. ಎಲ್ಲರೂ ತಮ್ಮ ಪರಿಸರವನ್ನು ಹಸಿರಾಗಿಟ್ಟರೆ ನಗರವೇ ಹಸಿರಾಗುತ್ತದೆ.
-ಜೀತ್ ಮಿಲನ್ ರೋಚ್, ಪರಿಸರ ಪ್ರೇಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು