ಸೋಮವಾರ, ಜನವರಿ 20, 2020
29 °C
ಶೃಂಗೇರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಇಂದಿನಿಂದ

ಸರ್ಕಾರದ ಮೊಂಡು, ಸಂಘಟಕರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕಮಗಳೂರು: ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದ, ಅನುದಾನ ನಿರಾಕರಣೆ, ವಿರೋಧ, ತಾತ್ಕಾಲಿಕವಾಗಿ ಸಮ್ಮೇಳನ ಮುಂದೂಡಲು ಪೊಲೀಸರ ಸೂಚನೆ ನಡುವೆಯೇ ಜಿಲ್ಲಾ ಕನ್ನಡ ನುಡಿ ತೇರು ಎಳೆಯಲು ಸಂಘಟಕರು ಸನ್ನದ್ಧರಾಗಿದ್ದಾರೆ.

ಶೃಂಗೇರಿಯ ಬಿಜಿಎಸ್‌ ಸಮುದಾಯ ಭವನವನ್ನು ಸಮ್ಮೇಳನಕ್ಕೆ ಸಜ್ಜುಗೊಳಿಸಲಾಗಿದೆ. ಎರಡು ದಿನ ಸಮ್ಮೇಳನ ಆಯೋಜಿಸಲಾಗಿದೆ. ಮೆರವಣಿಗೆ ಕೈಬಿಟ್ಟು ಒಳಾಂಗಣದಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ.

‘ಸಮ್ಮೇಳನವನ್ನು ಮುಂದೂಡಲ್ಲ. ಒಳಾಂಗಣದಲ್ಲಿ ಮಾಡುತ್ತೇವೆ. ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.

ರಂಗಕರ್ಮಿ ಪ್ರಸನ್ನ, ಹೋರಾಟಗಾರ ಕಡಿದಾಳ್‌ಶಾಮಣ್ಣ, ಬಿ.ಟಿ.ಲಲಿತಾನಾಯಕ್‌, ಎಚ್‌.ಎಸ್‌.ಅನುಪಮಾ ಸಹಿತ ರಾಜ್ಯದ ವಿವಿಧೆಡೆಗಳ ಸಾಹಿತಿಗಳು ಪಾಲ್ಗೊಳ್ಳುವರು ಎಂದು ಸಂಘಟಕರು ತಿಳಿಸಿದ್ದಾರೆ.

ಕಾಫಿನಾಡಿನ ಕನ್ನಡ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಾಕಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾಗಿ ಹಲವಾರು ಮಂದಿ ‍ಪ‍್ರತಿಕ್ರಿಯಿಸಿದ್ದಾರೆ.

‘ಸಮ್ಮೇಳನ ಮಾಡಿಯೇ ಮಾಡುತ್ತೇವೆ. ಕನ್ನಡ ಅಸ್ಮಿತೆಯ ಮೇಲೆ ದಾಳಿ ಮಾಡಲು ಬಿಡಲ್ಲ. ಸೆಕ್ಷನ್‌ ಹಾಕಿ ಹತ್ತಿಕ್ಕಲು ಪ್ರಯತ್ನಿಸಿದರೆ ಅದು ಕನ್ನಡ ಸಾಹಿತ್ಯಕ್ಕೆ ಮಾಡುವ ಅವಮಾನ. ಸಾಹಿತ್ಯಾಸಕ್ತರು ಅಹಿಂಸಾತ್ಮಕವಾಗಿ ಪ್ರತಿಭಟನೆ ದಾಖಲಿಸುತ್ತೇವೆ’ ಎಂದು ಸಂವಿಧಾನ ಉಳಿವಿಗಾಗಿ ಹೋರಾಟದ ರಾಜ್ಯ ಸಂಚಾಲಕ ಕೆ.ಎಲ್‌.ಅಶೋಕ್‌ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಸಮಿತಿ ವೇದಿಕೆ, ನಕ್ಸಲ್‌ ವಿರೋಧಿ ಹೋರಾಟ ಸಮಿತಿಯವರು ಸಮ್ಮೇಳನ ಕೈಬಿಡಬೇಕು ಎಂದು ಒತ್ತಾಯಿಸಿ ಇದೇ 10ರಂದು ಶೃಂಗೇರಿ ಚಲೋಗೆ ಕರೆ ನೀಡಿ ಕರಪತ್ರ ಹಂಚಿವೆ. ಪಟ್ಟಣದಲ್ಲಿ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಸಮ್ಮೇಳನ ನಿಟ್ಟಿನಲ್ಲಿ ಜಿಲ್ಲೆಯ ಶಿಕ್ಷಕರಿಗೆ ನೀಡಿದ್ದ ಒಒಡಿ ರದ್ದು ಮಾಡಿ ಸಾರ್ವಜನಿಕ ಶಿಕ್ಷಣ, ಪಿಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಆಯ್ಕೆ ಮಾಡಿರುವುದನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸಹಿತ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆಯ್ಕೆಗೆ ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ರಾಮನಗರದಲ್ಲೂ ತಕರಾರು

ರಾಮನಗರ: ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ವಿಚಾರದಲ್ಲೂ ವಿವಾದ ಸೃಷ್ಟಿಸಲಾಗುತ್ತಿದೆ. ಸಮ್ಮೇಳನಾಧ್ಯಕ್ಷರನ್ನು ಬದಲಿಸುವಂತೆ ಹಿಂದೂ ಜಾಗರಣಾ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮೊರೆ ಹೋಗಿದೆ.

ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ 23, 24ರಂದು ರಾಮನಗರದಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ವಿಚಾರವಾದಿ ಪ್ರೊ. ಶಿವನಂಜಯ್ಯ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ.

‘ಶಿವನಂಜಯ್ಯ ತಮ್ಮ ಜೀವನದ ಉದ್ದಕ್ಕೂ ಹಿಂದೂ ಧರ್ಮ, ದೇವರನ್ನು ತುಚ್ಛವಾಗಿ ಕಾಣುತ್ತಾ ಟೀಕೆ ಟಿಪ್ಪಣಿ ಮಾಡಿದ್ದಾರೆ. ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ರಾಮನಗರದಲ್ಲಿ ಕೆಂಗಲ್‌ ಹನುಮಂತಯ್ಯ ಪುತ್ಥಳಿ ನಿರ್ಮಾಣಕ್ಕೆ ಹಣ ಸಂಗ್ರಹಿಸಿ ಪೋಲು ಮಾಡಿದ್ದಾರೆ. ಇಂತಹ ವಿವಾ
ದಿತ ವ್ಯಕ್ತಿಗೆ ಸಮ್ಮೇಳನಾಧ್ಯಕ್ಷ ಸ್ಥಾನ ನೀಡುವುದು ನ್ಯಾಯಸಮ್ಮತವಲ್ಲ’ ಎಂದು ವೇದಿಕೆಯು ಗುರುವಾರ ಜಿಲ್ಲಾಧಿಕಾರಿ ಮೂಲಕ ಸಚಿವರಿಗೆ ದೂರು ನೀಡಿದೆ.

ಕುವೆಂಪು ವಿಚಾರಧಾರೆ: ‘ನಾನು ಧರ್ಮ ನಿರಪೇಕ್ಷೆಯಲ್ಲಿ ನಂಬಿಕೆ ಇಟ್ಟು, ಕುವೆಂಪು ವಿಚಾರಧಾರೆಯಂತೆ ನಡೆದು ಬಂದವನು. ವೈಚಾರಿಕವಾಗಿ ಬರೆದಿದ್ದೇನೆಯೇ ಹೊರತು ಎಂದೂ ಧರ್ಮವನ್ನು ವಿರೋಧಿಸಿಲ್ಲ’ ಎಂದು ಶಿವನಂಜಯ್ಯ ಸ್ಪಷ್ಟನೆ ನೀಡಿದ್ದಾರೆ.

***

ಸಮ್ಮೇಳನ ಮುಂದೂಡುವಂತೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದ್ದೇವೆ. ನಿಯಮ ಉಲ್ಲಂಘಿಸಿದರೆ, ಗೊಂದಲಕ್ಕೆ ಎಡೆಮಾಡಿದರೆ ಕ್ರಮ ಜರುಗಿಸುತ್ತೇವೆ.
–ಹರೀಶ್‌ ಪಾಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು