ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣಗಳಿಂದ ಹೊರ ಬರಲು ರಾಜಮಾರ್ಗ; ಪ್ರಮುಖ ಸದನ ಸಮಿತಿಗಳು ಮತ್ತು ವಿಚಾರಣಾ ಆಯೋಗಗಳು

ಒಳನೋಟ
Last Updated 29 ಡಿಸೆಂಬರ್ 2018, 20:56 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಪರಮೋಚ್ಚ ವೇದಿಕೆಯಾಗಿರುವ ರಾಜ್ಯ ವಿಧಾನಮಂಡಲ, ರಾಜಕಾರಣಿಗಳ ಮೇಲಾಟದ ವೇದಿಕೆಯಾಗಿ ಪರಿವರ್ತನೆಯಾಗಿದೆ. ವಿಚಾರಣಾ ಆಯೋಗ, ಸದನ ಸಮಿತಿಗಳು ಬಲಾಢ್ಯರ ನಡುವಿನ ಕಾದಾಟಕ್ಕೆ ಬಳಕೆಯಾಗುವ ಅಸ್ತ್ರಗಳಂತಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚವಾದರೂ ಸತ್ಯ ಸಂಗತಿ ಶವಪೆಟ್ಟಿಗೆ ಸೇರುವ ಸ್ಥಿತಿ ಇದೆ. ಈ ಹಾವು ಏಣಿ ಆಟದ ಮೇಲೆ ಬೆಳಕು ಚೆಲ್ಲಲಿದೆ ಒಳನೋಟ...

2013 ರಿಂದ 2018 ರ ಅವಧಿಯ ಪ್ರಮುಖ ಸದನ ಸಮಿತಿಗಳು

1 ನೈಸ್‌ ಯೋಜನೆ

ಬೆಂಗಳೂರು ಮತ್ತು ಮೈಸೂರು ಮಧ್ಯೆ ತಡೆ ರಹಿತ ರಸ್ತೆ ನಿರ್ಮಾಣ, ನಗರಗಳ ಅಭಿವೃದ್ಧಿ, ಬೆಂಗಳೂರು ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಪೆರಿಫೆರಲ್‌ ರಿಂಗ್‌ ರಸ್ತೆ ಹಾಗೂ ಲಿಂಕ್‌ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಖಾಸಗಿ ಸಹಭಾಗಿತ್ವದಲ್ಲಿ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸೆಸ್ (ನೈಸ್‌)ಪ್ರತಿ ಎಕರೆಗೆ 10 ರೂ. ಸಾಂಕೇತಿಕ ದರ ಪಾವತಿಸಿ 32 ಸಾವಿರ ಎಕರೆ ಭೂಮಿ ಪಡೆದ ಆರೋಪದ ಮೇಲೆ ಸದನ ಸಮಿತಿ ರಚನೆ.

ಸಮಿತಿ ರಚನೆ: 04.09.2014

ವರದಿ ಮಂಡನೆ: 02.12.2016

ಸಮಿತಿ ಅಧ್ಯಕ್ಷ: ಟಿ.ಬಿ.ಜಯಚಂದ್ರ

ವರದಿ ಶಿಫಾರಸು:ಅಕ್ರಮದ ವಿರುದ್ಧ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ಹೆಚ್ಚಿನ ತನಿಖೆ.ಕಂಪನಿ ವಶದಲ್ಲಿರುವ ಹೆಚ್ಚುವರಿ 11,660 ಎಕರೆ ಕೂಡಲೇ ವಾಪಸ್‌ ಪಡೆಯಬೇಕು.ಯೋಜನೆ ಪೂರ್ಣಗೊಳ್ಳದಿದ್ದರೂ ಸಂಪರ್ಕ ರಸ್ತೆಗಳಲ್ಲಿ ಟೋಲ್‌ ಸಂಗ್ರಹ ಅಕ್ರಮ.ಒಪ್ಪಂದದಂತೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡದ ತಾಂತ್ರಿಕ ಲೋಪ ಬಳಸಿಕೊಂಡು ಕಂಪನಿ ಅಕ್ರಮವಾಗಿ ವಸೂಲು ಮಾಡಿರುವ ₹ 1,350 ಕೋಟಿ ಮರುವಸೂಲು ಮಾಡಬೇಕು.

2 ವಿದ್ಯುತ್‌ ಖರೀದಿಯಲ್ಲಿ ಅಕ್ರಮ

ರಾಜ್ಯದಲ್ಲಿ ನಿರಂತರವಾಗಿ ವಿದ್ಯುತ್‌ ಕೊರತೆ ಬಗ್ಗೆ 2014 ರ ಜುಲೈನಲ್ಲಿ ವಿಧಾನಸಭೆಯಲ್ಲಿ ಚರ್ಚಿಸಿ ಸುಮಾರು 10 ವರ್ಷಗಳಿಂದ (2004–2014) ವಿದ್ಯುತ್‌ ಖರೀದಿ ಪ್ರಮಾಣ ಮತ್ತು ವೆಚ್ಚವು ಗಣನೀಯವಾಗಿ ಹೆಚ್ಚಿದ್ದರಿಂದ ಬೊಕ್ಕಸಕ್ಕೆ ಆಗುತ್ತಿದ್ದ ಹೊರೆ, ವಿದ್ಯುತ್ ಉತ್ಪಾದನೆ ಕುಸಿತ ಮತ್ತು ಖರೀದಿಗೆ ಕಾರಣಗಳ ಕುರಿತು ತನಿಖೆಗಾಗಿ ಸದನ ಸಮಿತಿ ರಚನೆ.

ಸಮಿತಿ ರಚನೆ: ಜುಲೈ 2014

ವರದಿ ಮಂಡನೆ: 21–11–2017

ಸಮಿತಿ ಅಧ್ಯಕ್ಷ: ಡಿ.ಕೆ.ಶಿವಕುಮಾರ್‌

ವರದಿ ಶಿಫಾರಸು:2011–12 ರಿಂದ 2013–14 ರ ಅವಧಿಯಲ್ಲಿ ಜೆಎಸ್‌ಡಬ್ಲ್ಯೂ ಎನರ್ಜಿ ಕಂಪನಿಯಿಂದ ಹೆಚ್ಚು ಮೊತ್ತ ನೀಡಿ ವಿದ್ಯುತ್‌ ಖರೀದಿಸಲಾಯಿತು. ಒಟ್ಟು 12,038.75 ದಶಲಕ್ಷ ಯೂನಿಟ್‌ಗಳಿಗೆ ₹1046 ಕೋಟಿ ಹೆಚ್ಚುವರಿಯಾಗಿ ಪಾವತಿ ಮಾಡಲಾಯಿತು. ಅಲ್ಲದೆ, ಸರ್ಕಾರ ದೀರ್ಘಾವಧಿ ಖರೀದಿ ಒಪ್ಪಂದ ಮಾಡಿಕೊಳ್ಳದೇ ಜೆಎಸ್‌ಡಬ್ಲ್ಯೂ ಎನರ್ಜಿಯವರು ಕಡಿಮೆ ದರದ ಭೂಮಿ ಹೆಚ್ಚಿನ ದರ ನೀಡಿ ಖರೀದಿ ಮಾಡಿರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ಸಮಿತಿ ತಿಳಿಸಿ ಎರಡೂ ವಿಚಾರಗಳಲ್ಲಿ ತನಿಖೆ ಆಗಬೇಕು ಎಂದು ಶಿಫಾರಸು ಮಾಡಿತ್ತು.

3 ಕೆರೆಗಳ ಒತ್ತುವರಿ ಅಧ್ಯಯನ ಸಮಿತಿ

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆರೆ, ಕಟ್ಟೆ ಮತ್ತು ಕುಂಟೆಗಳ ಒತ್ತುವರಿ ಬಗ್ಗೆ ಸದನ ಸಮಿತಿ ರಚಿಸಬೇಕು ಎಂಬುದಾಗಿ ವಿಧಾನಸಭೆಯಲ್ಲಿ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರ ಆಗ್ರಹದ ಮೇರೆಗೆ ಅಧ್ಯಯನ ಸಮಿತಿ ರಚಿಸಲಾಯಿತು. ಕೆರೆಗಳ ಒತ್ತುವರಿ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಶಿಫಾರಸು ಮಾಡಲು ಸೂಚಿಸಲಾಯಿತು. 1961 ರಲ್ಲಿ ಬೆಂಗಳೂರು ನಗರದಲ್ಲಿ 261 ಕೆರೆಗಳಿದ್ದವು. 1985 ರ ವೇಳೆಗೆ ಆ ಸಂಖ್ಯೆ 51 ಕ್ಕೆ ಇಳಿಯಿತು. ಈಗ ಉಳಿದಿರುವ ಕೆರೆಗಳು 17.

ಸದನ ಸಮಿತಿ ರಚನೆ: 27–10–2014

ಅಧ್ಯಕ್ಷರು: ಕೆ.ಬಿ.ಕೋಳಿವಾಡ

ವರದಿಯ ಶಿಫಾರಸು:ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1547 ಕೆರೆಗಳಿದ್ದು, ಇದರ ಒಟ್ಟು ವಿಸ್ತೀರ್ಣ 57,932 ಎಕರೆಗಳು. ಇದರಲ್ಲಿ 10,785 ಎಕರೆ 35.76 ಗುಂಟೆ ಒತ್ತುವರಿ ಆಗಿದೆ. ಒಟ್ಟು 158 ಕೆರೆಗಳು ಒತ್ತುವರಿ ಆಗಿಲ್ಲ. ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ಒಡೆಸುವುದರ ಬದಲು ಅವುಗಳನ್ನು ಸರ್ಕಾರವೇ ಸುಪರ್ದಿಗೆ ಪಡೆಯಬೇಕು. ಕೆರೆಗಳ ಜಾಗದಲ್ಲಿ ಬಡಾವಣೆ ನಿರ್ಮಿಸಿ, ಅಲ್ಲಿ ನಿವೇಶನಗಳನ್ನು ರಚಿಸಿ ಹಂಚಿದ್ದರೆ, ಅದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೆರೆ ಏರಿ, ರಾಜಕಾಲುವೆ ಮೇಲೆ ಒತ್ತುವರಿ ಮಾಡಿ ಮನೆ ಕಟ್ಟಿದ್ದರೆ, ಅವುಗಳನ್ನು ಸಕ್ರಮಗೊಳಿಸಲು ಆಗುವುದಿಲ್ಲ. ಮಾರ್ಗಸೂಚಿ ದರ ಅಥವಾ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡಬೇಕು. ಹೀಗೆ ವಸೂಲಿ ಮಾಡಿದ ಹಣವನ್ನು ಕೆರೆಗಳ ಅಭಿವೃದ್ಧಿಗೆ ಬಳಸಬೇಕು.

4 ಅಕ್ರಮ ಮರಳು ಗಣಿಗಾರಿಕೆ

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿರುವ ಹಾಗೂ ವಿವಿಧ ಆಯಾಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಲಾಯಿತು. ಮರಳು ಗಣಿಗಾರಿಕೆ, ಸಾಗಾಣಿಕೆ ಮತ್ತು ವಿತರಣೆ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲಾಯಿತು.

ಸದನ ಸಮಿತಿ ರಚನೆ: 05–02–2015

ಅಧ್ಯಕ್ಷರು: ಡಾ.ರಫೀಕ್‌ ಅಹ್ಮದ್‌. ಎಸ್‌

ವರದಿ ಮಂಡನೆ: 18.7.2016

ವರದಿಯ ಶಿಫಾರಸು:ಅಧ್ಯಯನ ಸಮಿತಿಯು 21 ಶಿಫಾರಸುಗಳನ್ನು ನೀಡಿತ್ತು. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಲ್ಲಿ ಭಾಗಿಯಾದವರಿಗೆ ಎರಡು ವರ್ಷ ಜೈಲು ಶಿಕ್ಷೆ ಅಥವಾ ₹1 ಲಕ್ಷ ದಂಡ ವಿಧಿಸುವುದು ಮತ್ತು ಸಾಗಣಿಕೆ ವಾಹನಗಳನ್ನು ಮುಟ್ಟುಗೋಲು ಹಾಕಲು ನಿಯಮದಲ್ಲಿ ತಿದ್ದುಪಡಿ ತರಲು ಶಿಫಾರಸು ಮಾಡಿತ್ತು.

5 ರಾಜ್ಯದಲ್ಲಿ ಕ್ಲಬ್‌ಗಳ ಕಾರ್ಯವೈಖರಿ

ರಾಜ್ಯ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕ್ಲಬ್‌ಗಳು ಯಾವ ಉದ್ದೇಶಕ್ಕಾಗಿ ಅನುಮತಿ ಪಡೆದಿವೆಯೋ ಆ ಪ್ರಕಾರ ಕಾರ್ಯನಿರ್ವಹಿಸುತ್ತಿದೆಯೊ ಇಲ್ಲವೊ ಎಂಬುದರ ಪರಿಶೀಲನೆ. ಕ್ಲಬ್‌ಗಳ ಸದಸ್ಯತ್ವ ಯಾವ ರೀತಿ ನೀಡಲಾಗುತ್ತಿದೆ, ಸದಸ್ಯರಿಗೆ ಸಮಪರ್ಕವಾಗಿ ನೀಡಲಾಗುತ್ತಿದೆಯೆ, ಕ್ಲಬ್‌ಗಳ ಲೆಕ್ಕಗಳನ್ನು ಆಡಿಟ್‌ ಮಾಡಲಾಗುತ್ತಿದೆಯೆ ಎಂಬುದರ ಅಧ್ಯಯನಕ್ಕೆ ಸಮಿತಿ ರಚಿಸಲಾಯಿತು. ಮುಖ್ಯವಾಗಿ ಕೆಎಸ್‌ಸಿಎ ಕ್ಲಬ್‌ನಲ್ಲಿ ಶಾಸಕರಿಗೆ ಸದಸ್ಯತ್ವ ನೀಡುತ್ತಿಲ್ಲ ಎಂಬುದು ಅಧ್ಯಯನ ಸಮಿತಿ ರಚನೆಗೆ ಮೂಲ ಕಾರಣ.

ಸದನ ಸಮಿತಿ ರಚನೆ: 26.11.2012

ಅಧ್ಯಕ್ಷರು: ಡಾ.ಡಿ.ಹೇಮಚಂದ್ರ ಸಾಗರ್‌,

2013 ರಲ್ಲಿ ಸರ್ಕಾರ ಬದಲಾದ ಮೇಲೆ ಎ.ಮಂಜು ಅಧ್ಯಕ್ಷರಾದರು, ಬಳಿಕ ಮಂಜು ಸಚಿವರಾದ ಕಾರಣ ಎನ್‌.ಎ.ಹ್ಯಾರಿಸ್‌ ಅಧ್ಯಕ್ಷರಾದರು.

ವರದಿ ಮಂಡನೆ: 07–02.2017

ವರದಿಯ ಶಿಫಾರಸು: ಕ್ಲಬ್‌ಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಉಡುಪು ಧರಿಸಿ ಬಂದರೆ ಪ್ರವೇಶ ನೀಡಬೇಕು. ಸರ್ಕಾರದಿಂದ ವಿನಾಯಿತಿ ದರದಲ್ಲಿ ಜಮೀನು ಅಥವಾ ಇತರೆ ಸವಲತ್ತು ಪಡೆದಿರುವ ಕ್ಲಬ್‌ಗಳಲ್ಲಿ ಆಯಾಯ ಕ್ಷೇತ್ರವಾರು ಜನಪ್ರತಿನಿಧಿಗಳು (ಸಂಸದರು, ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು) ಸದಸ್ಯರಾಗ ಬಯಸುವ ಜನಪ್ರತಿನಿಧಿಗಳಿಗೆ ಸದಸ್ಯತ್ವ ನೀಡಬೇಕು. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಕ್ರೀಡಾಪಟುಗಳು ಮತ್ತು ಶೌರ್ಯ ಪ್ರಶಸ್ತಿ ಪಡೆದ ಮಾಜಿ ಸೈನಿಕರಿಗೆ ಕ್ಲಬ್‌ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕು.

ವಿಚಾರಣಾ ಆಯೋಗಗಳು

* ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ಆಯೋಗ:

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅರ್ಕಾವತಿ ಬಡಾವಣೆಯಲ್ಲಿ ರಿಡೂ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿರುವ ಆರೋಪ ಕೇಳಿ ಬಂದಿತು.ಆಗ ಅವರು ತಮ್ಮ ಅವಧಿ ಅಲ್ಲದೆ, ಎಚ್‌.ಡಿ.ಕುಮಾರ‌ಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್‌ ಅವಧಿಯಲ್ಲಿ ಆಗಿರುವ ಡಿನೋಟಿಫಿಕೇಷನ್‌ ಕುರಿತೂ ವಿಚಾರಣೆ ನಡೆಸಲು ಆಯೋಗ ರಚಿಸಿದರು. ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರದ ಕೊನೆಯ ದಿನಗಳಲ್ಲಿ ವರದಿಯನ್ನು ಸಲ್ಲಿಸಿತು.

ಆಯೋಗ ರಚನೆ: 2014 ರ ಆಗಸ್ಟ್‌

ವರದಿ ಸಲ್ಲಿಕೆ: 2017 ರ ಆಗಸ್ಟ್‌

ವರದಿ ಏನಾಯ್ತು:ವರದಿಯನ್ನು ಸದನದಲ್ಲಿ ಮಂಡಿಸಲಿಲ್ಲ.ಒಟ್ಟು 6 ಬಾರಿ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಮೂರು ವರ್ಷಗಳ ಬಳಿಕ 2017 ರಲ್ಲಿ ಮಂಡಿಸಲಾಯಿತು. ಒಟ್ಟು 9,449 ಪುಟಗಳ ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿತು. ಆಯೋಗದಿಂದ ಸಾಕಷ್ಟು ಕಾಲಾವಕಾಶ ಕೊಟ್ಟರೂ 44 ದೂರುದಾರರ ಪೈಕಿ ಯಾರೊಬ್ಬರು ಖುದ್ದಾಗಿ ಆಯೋಗದ ಮುಂದೆ ಹಾಜರಾಗಿ ಮೌಖಿಕ ಸಾಕ್ಷಿ ಹೇಳಲು ಬರಲಿಲ್ಲ. ದೂರುದಾರರ ವಕೀಲರು ಮಾತ್ರ ವಿಚಾರಣೆ ಹಾಜರಾಗಿದ್ದರು. ಆಯೋಗಕ್ಕೆ ಮೂರು ವರ್ಷಗಳಲ್ಲಿ ಸರ್ಕಾರ ₹ 2.70 ಕೋಟಿ ನೀಡಿತ್ತು. ವರದಿಯನ್ನು ಸದನದಲ್ಲಿ ಮಂಡಿಸುವುದರ ಬದಲು ಅದರ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ, ಸರ್ಕಾರ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ನ್ಯಾಯಾಧೀಶ ಶ್ರೀವತ್ಸ ಕೆದಿಲಾಯ್‌ ಅವರನ್ನು ಅಧ್ಯಕ್ಷತೆ ಸಮಿತಿ ರಚಿಸಿತು.

ನ್ಯಾ.ಬಿ.ಪದ್ಮರಾಜ್‌ ವಿಚಾರಣಾ ಸಮಿತಿ (ಜಿ ಕೆಟಗರಿ ನಿವೇಶನ ವಿವಾದ):

* ಹೈಕೋರ್ಟ್‌ ನಿರ್ದೇಶನದ ಮೇರೆಗೆ 2012 ರಲ್ಲಿ ಸಮಿತಿ ರಚನೆ

* 2014 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ

ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ ಬಳಸಿ ಬೇಕಾಬಿಟ್ಟಿ ‘ಜಿ ಕೆಟಗರಿ’ ನಿವೇಶನಗಳನ್ನು ಹಂಚಿಕೆ ಮಾಡಲಾಯಿತು.2012 ರಲ್ಲಿ ಈ ಬಗ್ಗೆ ವಿಚಾರಣಾ ಸಮಿತಿ ರಚಿಸುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ನ್ಯಾಯಮೂರ್ತಿ ಬಿ.ಪದ್ಮರಾಜ್‌ ಆಯೋಗ ರಚಿಸಲಾಯಿತು. ವಿಚಾರಣೆ ನಡೆಸಿದ ಬಳಿಕ 313 ಅನರ್ಹರಿಗೆ ನಿವೇಶನ ನೀಡಿದ್ದು ಪತ್ತೆ ಆಯಿತು. ಹಂಚಿಕೆ ರದ್ದುಗೊಳಿಸುವಂತೆ ಆಯೋಗ ಶಿಫಾರಸು ಮಾಡಿತ್ತು. 140 ಶಾಸಕರು, 4 ಸಂಸದರು, 12 ಗೃಹಿಣಿಯರು, ಸಚಿವರ ಸಂಬಂಧಿಗಳು, ಚಾಲಕರು, ಪರಿಚಾರಕರೂ ನಿವೇಶನ ಪಡೆದಿದ್ದರು. 246 ಮಂದಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದರು.

ಭೂಹಗರಣ ವಿಚಾರಣೆಗೆ ಆಯೋಗ:

2010 ರಲ್ಲಿ ಡಿನೋಟಿಫಿಕೇಷನ್‌ ಆರೋಪ ಕೇಳಿ ಬಂದ ಕಾರಣ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಡಿನೋಟಿಫಿಕೇಷನ್‌ ಮತ್ತು ಭೂಹಗರಣಗಳ ಬಗ್ಗೆ ವಿಚಾರಣೆ ನಡೆಸಲು ನ್ಯಾಯಮೂರ್ತಿ ಪದ್ಮರಾಜ್‌ ಆಯೋಗವನ್ನು ನೇಮಿಸಿದರು. ಸರ್ಕಾರದ ಈ ಕ್ರಮಕ್ಕೆ ಹೈಕೋರ್ಟ್‌ ತಡೆ ನೀಡಿತು.

ಹಾವೇರಿ ಗೋಲಿಬಾರ್‌:

2008 ರಲ್ಲಿ ರಸಗೊಬ್ಬರದ ಕೊರತೆ ಉಂಟಾಗಿ ಹಾವೇರಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಹಿಂಸಾತ್ಮಕವಾದಾಗ ಪೊಲೀಸರ ಗುಂಡೇಟಿಗೆ ಇಬ್ಬರು ಸಾವನ್ನಪ್ಪಿದರು. ಇದರ ವಿಚಾರಣೆಗೆ ನ್ಯಾಯಮೂರ್ತಿ ಕೆ. ಜಗನ್ನಾಥಶೆಟ್ಟಿ ವಿಚಾರಣಾ ಆಯೋಗ ರಚಿಸಿತು. ಆಯೋಗವು 2010 ರಲ್ಲಿ ವರದಿ ಸಲ್ಲಿಸಿತು. ಸತ್ತವರು ರೈತರು ಅಲ್ಲ ಎಂದು ಆಯೋಗದ ವರದಿ ಹೇಳಿತ್ತು. 2016 ರಲ್ಲಿ ಸಿದ್ದರಾಮಯ್ಯ ಸರ್ಕಾರ ವರದಿಯನ್ನು ತಿರಸ್ಕರಿಸಿತು.

ಖರ್ಚು– ವೆಚ್ಚಗಳು

* ಸದನ ಸಮಿತಿಗಳಿಗೆ ಹೆಚ್ಚಿನ ಖರ್ಚು ವೆಚ್ಚ ಬರುವುದಿಲ್ಲ. ಅಧ್ಯಯನಕ್ಕೆಂದು ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಹೋದರೆ ಅಂತಹ ಖರ್ಚು– ವೆಚ್ಚಗಳು ಮಾತ್ರ ಬರುತ್ತದೆ. ಆದರೆ, ಸಮಿತಿ ಕರೆಯುವ ಸಭೆಗಳಿಗೆ ಹಾಜರಾಗುವ ಶಾಸಕರಿಗೆ ಟಿ.ಎ, ಡಿಎ ಇತ್ಯಾದಿಗಳನ್ನು ಕೊಡುವುದಿಲ್ಲ. ಸಾಮಾನ್ಯವಾಗಿ ಅಧಿವೇಶನ ಇರುವಾಗಲೇ ಶಾಸಕರು ಸಭೆ ಸೇರುವುದು ವಾಡಿಕೆ.

* ಇತ್ತೀಚಿನ ವರ್ಷಗಳಲ್ಲಿ ವಿಚಾರಣಾ ಆಯೋಗಗಳ ಖರ್ಚು– ವೆಚ್ಚ ಸುಮಾರು ₹ 2 ಕೋಟಿಯಿಂದ ₹3 ಕೋಟಿಯನ್ನೂ ಮೀರುತ್ತದೆ. ಆಯೋಗದ ಅಧ್ಯಕ್ಷರು ಮತ್ತು ಸಿಬ್ಬಂದಿ, ಕಚೇರಿ ಇತ್ಯಾದಿ ವೆಚ್ಚಗಳೇ ಅಧಿಕ. ಆರು ತಿಂಗಳಲ್ಲಿ ವರದಿ ಕೊಡಬೇಕು ಎಂದು ಸರ್ಕಾರ ಹೇಳಿದರೂ ವಿಚಾರಣಾ ಆಯೋಗಗಳು ವರದಿ ನೀಡಲು ಎರಡು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತವೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT