ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ಮನೆ ಸಿ.ಸಿ.ಟಿ.ವಿ ಆಫ್‌ ಆಗಿದ್ದೇಕೆ?

ನಾಟಕವಾಡುತ್ತಿರುವ ನಟ ದರ್ಶನ್‌; ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ
Last Updated 24 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ಮಂಡ್ಯ: ‘ಮಧ್ಯರಾತ್ರಿ ಮೂರು ಗಂಟೆಯಲ್ಲಿ ನಟ ದರ್ಶನ್‌ ಮನೆ ಮೇಲೆ ಕಲ್ಲು ತೂರಲು ಸಾಧ್ಯವೇ? ಸಿನಿಮಾ ರೀತಿಯಲ್ಲಿ ನಾಟಕವಾಡುತ್ತಿದ್ದಾರೆ. ಭದ್ರತೆ ಪರಿಶೀಲಿಸಿದಾಗ ಅವರ ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದವು. ಕ್ಯಾಮೆರಾಗಳು ಆಫ್‌ ಆಗಿದ್ದೇಕೆ ಎಂಬುದನ್ನು ಉತ್ತರಿಸಬೇಕು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಆದಿಚುಂಚನಗಿರಿ ಮಠದಲ್ಲಿ ಭಾನುವಾರ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದು ಸುದ್ದಿಗಾರರ ಜೊತೆ ಮಾತನಾಡಿದರು.

‘ಸಿನಿಮಾದಲ್ಲಿ ಅವರನ್ನು ಚಾಲೆಂಜಿಂಗ್‌ ಸ್ಟಾರ್‌ ಎನ್ನುತ್ತಾರೆ. ಕೆ.ಆರ್‌.ಪೇಟೆಯಲ್ಲಿ ಯಾರ ಕಾರಿಗೆ ಯಾರು ಕಲ್ಲು ತೂರಿದ್ದಾರೆ ಎಂಬುದು ಗೊತ್ತಿದೆ. ಮನೆಗೆ ಕಲ್ಲು ತೂರಿದ ವಿಷಯ ತಿಳಿದ ಕೂಡಲೇ ಅಧಿಕಾರಿಗಳಿಗೆ ಕರೆ ಮಾಡಿ ಭದ್ರತೆ ನೀಡುವಂತೆ ಸೂಚಿಸಿದ್ದೆ. ರಾಜ್ಯದ ಜನರಿಗೆ ರಕ್ಷಣೆ ನೀಡುವುದು ನನ್ನ ಕರ್ತವ್ಯ. ಆದರೆ, ಚುನಾವಣೆ ದೃಷ್ಟಿಯಿಂದ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿಖಿಲ್‌ ಸೋಲಿಸಲು ಬಿಜೆಪಿ ಸೇರಿ ಹಲವರು ಒಂದಾಗಿದ್ದಾರೆ. ಈ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯು ಬಿಜೆಪಿ ಮುಕ್ತವಾಗಿದೆ. ಯಾರು ಏನೇ ರಣತಂತ್ರ ರೂಪಿಸಿದರೂ ನಿಖಿಲ್‌ ಗೆಲುವು ತಡೆಯುವುದು ಅಸಾಧ್ಯ. ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಜನರು‌ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ಮತ ಕೊಟ್ಟಿದ್ದಾರೆ. ಹೀಗಿರುವಾಗ ನಮ್ಮ ಕುಡಿಯನ್ನು ಇಲ್ಲಿಯ ಜನರು ಕೈಬಿಡುತ್ತಾರಾ’ ಎಂದು ಪ್ರಶ್ನಿಸಿದರು.

ಸುಮಲತಾ ಅವರಿಗೆ ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಬೆಂಬಲ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ನಿಖಿಲ್‌ಗೆ ಬೆಂಬಲ ನೀಡುವುದು ಅವರವರ ಇಚ್ಛೆ. ಬೆನ್ನಿಗೆ ಚೂರಿ ಹಾಕುವುದರಿಂದ ನಮಗೆ ತೊಂದರೆ ಆಗುವುದಿಲ್ಲ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗಾಗಿ ಜೆಡಿಎಸ್‌ ಕಾರ್ಯಕರ್ತರು ಶ್ರಮಿಸುತ್ತಾರೆ. ಕುತಂತ್ರದ ರಾಜಕಾರಣಕ್ಕೆ ದೇವೇಗೌಡ, ಕುಮಾರಸ್ವಾಮಿ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕಾರ್ಯಕರ್ತರ ಶಕ್ತಿ ಇದೆ. ಚುನಾವಣಾ ಪ್ರಚಾರದಲ್ಲಿ ಯಾವುದೇ ವ್ಯಕ್ತಿ ವಿರುದ್ಧ ಟೀಕೆ ಮಾಡುವುದು ಬೇಡ ಎಂದು ಹೇಳಿದ್ದೇನೆ’ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಇದ್ದರು.

ಜೋಡೆತ್ತು ಅಲ್ಲ, ಕಳ್ಳೆತ್ತು: ಕುಮಾರಸ್ವಾಮಿ

ನಟರಾದ ದರ್ಶನ್, ಯಶ್ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದು, ಅವರು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು ಎಂದು ಜರಿದಿದ್ದಾರೆ.

ಭಾನುವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅವು ಉಳುವ ಎತ್ತುಗಳಲ್ಲ. ಬೆಳೆದ ಪೈರು ತಿನ್ನುವ ಕಳ್ಳೆತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತ ನಡೆದಾಗ ಇವರು ಎಲ್ಲಿದ್ದರು. ಈಗ ಅಮ್ಮನನ್ನು ಉಳಿಸಲು ಬಂದಿದ್ದಾರೆ. ನೀರಲ್ಲಿ ಬಿದ್ದ ಶವ ಎತ್ತಲು ಇವರು ಬಂದಿದ್ದರಾ’ ಎಂದು ಪ್ರಶ್ನಿಸಿದರು.

‘ರೈತರ ಮುಂದೆ ಡಿ ಬಾಸ್ ಆಗಲು ಆಗಲ್ಲ. ಮಾತನಾಡಲು ಬಹಳಷ್ಟು ವಿಷಯಗಳಿವೆ. ಸೋಮವಾರ ಮಾತನಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT