ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಬಂಧನ: ಮಾ. 2ರವರೆಗೆ ನ್ಯಾಯಾಂಗ ವಶಕ್ಕೆ

ಕೋರ್ಟ್‌ ಆವರಣದಲ್ಲಿ ಆರೋಪಿಗಳ ಮೇಲೆ ಹಲ್ಲೆ, ಬೂಟು ಎಸೆತ
Last Updated 17 ಫೆಬ್ರುವರಿ 2020, 20:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಾಕ್‌ ಪರ ಘೋಷಣೆ ಕೂಗಿದ ಕೆಎಎಲ್‌ಇ ತಾಂತ್ರಿಕ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಭಾನುವಾರ ರಾತ್ರಿ ಬಂಧಿಸಿದ್ದ ಪೊಲೀಸರು, ಸೋಮವಾರ ಬೆಳಿಗ್ಗೆ ಕೋರ್ಟ್‌ಗೆ ಹಾಜರು ಪಡಿಸಿದರು. ಆ ವೇಳೆ ಅವರ ಮೇಲೆ ಬಜರಂಗ ದಳದ ಕಾರ್ಯಕರ್ತರು ಹಲ್ಲೆ ಮಾಡಿದ್ದಲ್ಲದೇ, ಪೊಲೀಸ್‌ ವಾಹನದ ಮೇಲೆ ಚಪ್ಪಲಿ ಎಸೆದರು.

ಆರೋಪಿಗಳ ವಿಚಾರಣೆ ನಡೆಸಿದ ಇಲ್ಲಿನ ಮೂರನೇ ಜೆಎಂಎಫ್‌ಸಿ ಕೋರ್ಟ್, ಮಾರ್ಚ್‌ 2ರವರೆಗೆ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದ್ದು, ಕಾಶ್ಮೀರದ ಬಾರಮುಲ್ಲಾದವರಾದ ಅಮೀರ್‌ ವಾನಿ, ತಾಲಿಬ್‌ ಮಜೀದ್‌ ಮತ್ತು ಬಾಸಿತ್‌ ಸೋಫಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಆರೋಪಿಗಳನ್ನು ಪೊಲೀಸರು ಕರೆದೊಯ್ಯುವಾಗ ಅವರ ಮೇಲೆ ಕೋರ್ಟ್‌ ಆವರಣದಲ್ಲಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹಲ್ಲೆ ನಡೆಸಿದರು. ಪೊಲೀಸ್‌ ಬಂದೋಬಸ್ತ್‌ ನಡುವೆಯೇ ಹಲ್ಲೆ ನಡೆಸಲು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸ್‌ ವಾಹನದಲ್ಲಿ ಆರೋಪಿಗಳನ್ನು ಹತ್ತಿಸುವಾಗಲೂ ನೂಕುನುಗ್ಗಲು ಉಂಟಾಯಿತು. ಬಜರಂಗ ದಳದ ಕಾರ್ಯಕರ್ತರು ಹಾಗೂ ವಕೀಲರೊಬ್ಬರು ವಾಹನದತ್ತ ಚಪ್ಪಲಿ, ಬೂಟು, ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ವಾಹನವನ್ನು ತಡೆದು ಭಾರತದ ರಾಷ್ಟ್ರಧ್ವಜ ಹಿಡಿದು, ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಪೊಲೀಸ್‌ ಇಲಾಖೆಯು ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ. ಪೊಲೀಸ್ ಕಮಿಷನರ್ ಗೊಂದಲದ ಹೇಳಿಕೆ ನೀಡುತ್ತ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ’ ಎಂದು ಎಬಿವಿಪಿ ಕಾರ್ಯಕರ್ತರು ಕೋರ್ಟ್ ಎದುರು ಪ್ರತಿಭಟನೆ ನಡೆಸಿದರು. ಕಿಮ್ಸ್‌ ಆವರಣದ ಮುಂಭಾಗ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ(ಎನ್‌ಎಸ್‌ಯುಐ) ಸದಸ್ಯರು ಪ್ರತಿಭಟನೆ ನಡೆಸಿ, ‘ದೇಶದ್ರೋಹಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

‘ದೇಶವಿರೋಧಿ ಕೃತ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಪೊಲೀಸ್‌ ಕಮಿಷನರ್‌, ಮೃದು ಧೋರಣೆ ತೋರುತ್ತಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಿ, ಸಮಗ್ರ ತನಿಖೆ ನಡೆಸಬೇಕು’ ಎಂದು ಹುಬ್ಬಳ್ಳಿ ವಕೀಲರ ಸಂಘದ ಕಾರ್ಯದರ್ಶಿ ಗುರು ಹಿರೇಮಠ ಒತ್ತಾಯಿಸಿದರು.

ಗೊಂದಲ ಹುಟ್ಟುಹಾಕಿದ ಪೊಲೀಸ್‌ ಇಲಾಖೆ: ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದ ಯುವಕರನ್ನು ಫೆ.15 ರಂದು ಸಂಜೆ ಬಂಧಿಸಿದ್ದಾಗಿ ಹೇಳಿಕೆ ನೀಡಿದ್ದ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌, ರಾತ್ರಿ ಮುಚ್ಚಳಿಕೆ ಬರೆಯಿಸಿಕೊಂಡು (ಸ್ಟೇಷನ್‌ ಬೇಲ್‌) ಬಿಡುಗಡೆ ಮಾಡಿದ್ದಾಗಿ ಹೇಳಿಕೆ ನೀಡಿದ್ದರು.

ಪೊಲೀಸರ ಈ ಕ್ರಮದ ವಿರುದ್ಧ ಬಜರಂಗ ದಳ ಹಾಗೂ ಬಿಜೆಪಿ ಮುಖಂಡರು ಭಾನುವಾರ ರಾತ್ರಿ ಗೋಕುಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್‌ ಪಕ್ಷದ ಮುಖಂಡರು ಪೊಲೀಸ್‌ ಇಲಾಖೆಯ ಕ್ರಮ ಖಂಡಿಸಿದ್ದರು. ಬಂಧನಕ್ಕೆ ಒತ್ತಡ ಹೆಚ್ಚಾದ ನಂತರ, ಫೆ.16 ರಂದು ಬಂಧಿಸಲಾಗಿದೆ ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾರೆ.

ದೇಶದ್ರೋಹಕ್ಕೆ ಶಿಕ್ಷೆಯಾಗಲಿ: ಅನಾಮಿ
ಕೆಎಲ್‌ಇ ಸಂಸ್ಥೆ ದೇಶಪ್ರೇಮ ಹಾಗೂ ರಾಷ್ಟ್ರೀಯತೆಯನ್ನು ಎತ್ತಿ ಹಿಡಿದುಕೊಂಡು ಬಂದಿದೆ. ಇಂತಹ ಕೃತ್ಯ ಸಹಿಸುವುದಿಲ್ಲ. ಅವರಿಗೆ ಶಿಕ್ಷೆಯಾಗಬೇಕು ಎಂದು ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಬಸವರಾಜ ಅನಾಮಿ ತಿಳಿಸಿದ್ದಾರೆ.

‘ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಿಡುಗಡೆಗೆ ಯಾವುದೇ ಮುಚ್ಚಳಿಕೆ ಬರೆದುಕೊಟ್ಟಿಲ್ಲ. ಕೃತ್ಯ ಗಮನಕ್ಕೆ ಬಂದ ತಕ್ಷಣ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಲಾಗಿದೆ. ಫೆ.15ರಂದೇ ಮೂವರೂ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ರಾಜ್ಯಗಳಿಗೆ ನೀಡುವ ವಿಶೇಷ ಶಿಷ್ಯವೇತನ ಕೋಟಾದಡಿ ಪ್ರವೇಶ ಪಡೆದಿದ್ದಾರೆ. ಶಿಕ್ಷಣದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ವಿದ್ಯಾರ್ಥಿಗಳ ಆಯ್ಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.

‘ಇಂತಹ ಕೃತ್ಯ ಸಹಿಸುವುದಿಲ್ಲ’
ಕೆಎಲ್‌ಇ ಸಂಸ್ಥೆ ದೇಶಪ್ರೇಮ ಹಾಗೂ ರಾಷ್ಟ್ರೀಯತೆಯನ್ನು ಎತ್ತಿ ಹಿಡಿದುಕೊಂಡು ಬಂದಿದೆ. ಇಂತಹ ಕೃತ್ಯ ಸಹಿಸುವುದಿಲ್ಲ. ಅವರಿಗೆ ಶಿಕ್ಷೆಯಾಗಬೇಕು ಎಂದು ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಬಸವರಾಜ ಅನಾಮಿ ಹೇಳಿದ್ದಾರೆ.

‘ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಿಡುಗಡೆಗೆ ಮುಚ್ಚಳಿಕೆ ಬರೆದುಕೊಟ್ಟಿಲ್ಲ. ಕೃತ್ಯ ಗಮನಕ್ಕೆ ಬಂದ ತಕ್ಷಣ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಲಾಗಿದೆ. ಫೆ.15ರಂದೇ ಮೂವರೂ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

*
ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿಗೆ ಏನನ್ನೂ ಕೇಳಬೇಡಿ.
-ಆರ್‌. ದಿಲೀಪ್‌, ಪೊಲೀಸ್‌ ಕಮಿಷನರ್‌, ಹುಬ್ಬಳ್ಳಿ– ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT