ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರದಲ್ಲಿ ಕೊಳೆತು ನಾರುತ್ತಿರುವ ಕಬ್ಬು

1.25 ಲಕ್ಷ ಹೆಕ್ಟೇರ್ ಪ್ರದೇಶದ ಕಬ್ಬು ನೆರೆಯಿಂದಾಗಿ ನಾಶ
Last Updated 25 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲ್ಲೂಕಿನಲ್ಲಿ ನಳನಳಿಸುತ್ತಿದ್ದ ಕಬ್ಬನ್ನು ಕೃಷ್ಣಾ ನದಿ ಪ್ರವಾಹ ಬಲಿ ಪಡೆದಿದೆ. ಅಲ್ಲಿನ ಪರಿಸರದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಹಲವು ದಿನಗಳವರೆಗೆ ಮುಳುಗಡೆ ಆಗಿದ್ದರಿಂದಾಗಿ ಕೊಳೆತು ನಾರುತ್ತಿದೆ.

ಜಿಲ್ಲೆಯಲ್ಲಿ 2.45 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಈ ಪೈಕಿ ಕೃಷ್ಣಾ ನದಿ ತಟವೊಂದರಲ್ಲೇ 1.25 ಲಕ್ಷ ಪ್ರದೇಶದಲ್ಲಿನ ಕಬ್ಬು ಹಾಳಾಗಿದೆ. ಇಲ್ಲಿ ಎಕರೆಗೆ ಸರಾಸರಿ 40 ಟನ್ ಕಬ್ಬಿನ ಇಳುವರಿ ನಿರೀಕ್ಷಿಸಲಾಗಿತ್ತು. ಪ್ರವಾಹವು ಆ ಭಾಗದ ಸಾವಿರಾರು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಅವರನ್ನು ಸಂಕಷ್ಟಕ್ಕೆ ದೂಡಿದೆ. ಆರ್ಥಿಕ ನಷ್ಟಕ್ಕೆ ಸಿಲುಕಿರುವ ಅವರು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಬಳಿ ನೂರಾರು ಎಕರೆ ಕಬ್ಬು ಕೊಳೆತು ದುರ್ವಾಸನೆ ಬೀರುತ್ತದೆ. ಕೆಲವೆಡೆ ಮಣ್ಣು ಲೇಪಿಸಿದಂತೆ, ಕೆಲವೆಡೆ ಒಣಗಿದಂತೆ ಕಾಣುವ ಬೆಳೆ ಮುಂದೆ ಬೆಳೆಯಲಾಗದ ಅಥವಾ ಕತ್ತರಿಸಿ ಕಾರ್ಖಾನೆಗಳಿಗೆ ಸಾಗಿಸಲಾಗದ ಸ್ಥಿತಿಯಲ್ಲಿವೆ. ಕೆಲವೆಡೆ, ಇನ್ನೂ ನೂರಾರು ಎಕರೆ ಜಮೀನು ಮುಳುಗಡೆ ಸ್ಥಿತಿಯಲ್ಲಿಯೇ ಇದೆ. ನೀರಿನ ಪ್ರಮಾಣ ಇಳಿದಿದ್ದರೂ ಬದಿ ತುಂಬಿಕೊಂಡಿರುವುದರಿಂದ ಅಲ್ಲಿಗೆ ಹೋಗಲಾಗದ ಪರಿಸ್ಥಿತಿ ಕೆಲವೆಡೆ ಇರುವುದು ‘ಪ್ರಜಾವಾಣಿ’ ಪ್ರತಿನಿಧಿ ಭಾನುವಾರ ಭೇಟಿ ನೀಡಿದಾಗ ಕಂಡುಬಂತು. ದೂರದಿಂದ ನೋಡಿದರೆ ಕಟಾವಿಗೆ ಬಂದಿರುವ ಭತ್ತದಂತೆ ಕಾಣುತ್ತಿತ್ತು!

ಕೈ ಹಿಡಿಯಬೇಕಿತ್ತು:

‘ನಾವು 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಹಾಳಾಗಿದೆ. ಅದನ್ನು ತೆರವುಗೊಳಿಸಿ ಹೊಸದಾಗಿ ನಾಟಿ ಮಾಡುವುದಕ್ಕೂ ಆಗದಂತಹ ‍ಪರಿಸ್ಥಿತಿ ಇದೆ. ಬಹುತೇಕ ಕೊಳೆತು ಹೋಗಿರುವುದರಿಂದಾಗಿ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಅದನ್ನು ನೋಡಿದರೆ ಕಣ್ಣೀರು ಬರುತ್ತದೆ. ಕೆಲವೇ ತಿಂಗಳಲ್ಲಿ ಕೈಹಿಡಿಯಬೇಕಿದ್ದ ಕಬ್ಬನ್ನು ಪ್ರವಾಹ ಹಾಳು ಮಾಡಿತು’ ಎಂದು ಮಾಂಜರಿ ಬಳಿಯ ರೈತ ಅಬ್ಬಾಸಾಹೇಬ ಯಾದವ ಅಳಲು ತೋಡಿಕೊಂಡರು.

‘ಹೋದ ವರ್ಷ ಆಗಸ್ಟ್‌ನಲ್ಲಿ 7 ಎಕರೆಯಲ್ಲಿ ಕಬ್ಬು ಹಾಕಿದ್ದೆವು. ಈಗ ಎಲ್ಲವೂ ಮುಳುಗಿ ಹೋಗಿದೆ. ಕೆಟ್ಟ ವಾಸನೆ ಬರುತ್ತಿರುವುದರಿಂದಾಗಿ ಇನ್ನೊಂದು ತಿಂಗಳು ಗದ್ದೆಗೆ ಹೋಗಲಾಗದ ಸ್ಥಿತಿ ಇದೆ. ಹೋದರೆ, ಕೈ ಕಾಲಲ್ಲೆಲ್ಲಾ ತುರಿಕೆ ಬರುತ್ತಿದೆ. 2005ರಲ್ಲಿ ಪ್ರವಾಹ ನೋಡಿದ್ದೆವು. ಆದರೆ, ಈ ಬಾರಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದೇವೆ’ ಎಂದು ಯಡೂರವಾಡಿಯ ರೈತ ಜ್ಞಾನೇಶ್ವರ ತಿಳಿಸಿದರು.

‘ಒಟ್ಟು ₹ 6 ಲಕ್ಷ ಚರ್ಚು ಮಾಡಿದ್ದೇನೆ. ಒಂದು ಬೆಳೆಯನ್ನೂ ತೆಗೆದಿರಲಿಲ್ಲ. ಬಹಳ ನಷ್ಟವಾಗಿದೆ. ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ನೀರು ಪೂರೈಸುವುದಕ್ಕಾಗಿ ₹ 70ಸಾವಿರ ಖರ್ಚು ಮಾಡಿದ್ದೆ. ಇನ್ನೆರಡು ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಈಗ ಸಂಪೂರ್ಣ ನಾಶವಾಗಿದೆ. ದೀಪಾವಳಿಗೆ ಹಣ ಕಾಣುವ ನಿರೀಕ್ಷೆ ಇತ್ತು. ಈಗ, ಕತ್ತಲು ಕಾಣುವಂತಹ ದಿನ ಬಂದಿವೆ. ಸರ್ಕಾರ ಸಹಾಯ ಮಾಡಬೇಕು’ ಎಂದು ಕಣ್ಣು ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT