ಪರಿಚಯ ಇಲ್ಲದ ಪ್ರೊಫೈಲ್‌ ನನ್ನದಲ್ಲ: ಸುಮಲತಾ ಅಂಬರೀಷ್

ಭಾನುವಾರ, ಏಪ್ರಿಲ್ 21, 2019
26 °C
ಧರ್ಮಸ್ಥಳ ಭೇಟಿ

ಪರಿಚಯ ಇಲ್ಲದ ಪ್ರೊಫೈಲ್‌ ನನ್ನದಲ್ಲ: ಸುಮಲತಾ ಅಂಬರೀಷ್

Published:
Updated:
Prajavani

ಉಜಿರೆ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಸುಮಲತಾ ಅಂಬರೀಷ್ ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಸುಮಲತಾ ಎಂಬ ಹೆಸರಿನಲ್ಲಿ ಬೇರೆ ಬೇರೆ ಅಭ್ಯರ್ಥಿಗಳು ಸ್ಪರ್ಧಿಸಿರುವ ಬಗ್ಗೆ ಮಾತನಾಡಿದ ಅವರು, ‘ಈ ಹಿಂದೆ ಪುಟ್ಟಣ್ಣಯ್ಯ ಸ್ಪರ್ಧೆ ಸಂದರ್ಭದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾವು ಅಪರಿಚಿತರಲ್ಲ. ರಾಜ್ಯದ ಜನತೆಗೆ ಚಿರಪರಿಚಿತರು. ಜನರು ನನ್ನನ್ನು ಗುರುತಿಸಿ ಮತ ನೀಡುವ ಮೂಲಕ ಆಯ್ಕೆ ಮಾಡುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಈ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದರು.

‘ಎರಡು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೆ. ಅಂಬರೀಷ್‌ ಅವರಿಗೆ ಧರ್ಮಸ್ಥಳ ಕ್ಷೇತ್ರದ ಮೇಲಿರುವ ಅಭಿಮಾನದಂತೆ ನಾನು ಕೂಡ ಭಕ್ತಿಯಿಂದ ಇಲ್ಲಿಗೆ ಬಂದು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಮುಂದೆ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.

ಇಂದಿನಿಂದ ಮತ ಪ್ರಚಾರ: ‘ಈಗಾಗಲೇ ದರ್ಶನ್ ಅವರು ಶ್ರೀರಂಗಪಟ್ಟಣದಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ. ಮಂಗಳವಾರ ನಟ ಯಶ್ ಕೂಡಾ ಪ್ರಚಾರದಲ್ಲಿ ಭಾಗವಹಿಸುವರು. ನಾನು ಕೂಡ ಇಂದಿನಿಂದ ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಸುಮಲತಾ ತಿಳಿಸಿದರು.

ದೇವರ ದರ್ಶನದ ಬಳಿಕ ಸುಮಲತಾ ಅಂಬರೀಷ್‌ ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಮತ್ತು ದೊಡ್ಡಣ್ಣ ಜತೆಗಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !