ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ| ಗೋವಾ ಅರ್ಜಿ ವಜಾ, ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಜಯ

Last Updated 2 ಮಾರ್ಚ್ 2020, 18:18 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಐ ತೀರ್ಪುಅಂತಿಮ. ಅದರ ಹೊರತಾಗಿ ಬೇರೆ ಯಾವುದೇ ತೀರ್ಪಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಳಸಾ- ಬಂಡೂರಿ ಯೋಜನೆಗೆ ತಡೆ ನೀಡುವಂತೆ ಒತ್ತಾಯಿಸಿ ಗೋವಾ ಸರ್ಕಾರ ಕಳೆದ ಶುಕ್ರವಾರ ಅರ್ಜಿ ಸಲ್ಲಿಸಿತ್ತು.

ಮಹದಾಯಿ-ಕಳಸಾ-ಬಂಡೂರಿ ಕುಡಿಯುವ ನೀರಿನ ಕಾಮಗಾರಿಗೆ ಆಕ್ಷೇಪಿಸಿ ಗೋವಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾ‌.ಚಂದ್ರಚೂಡ್, ನ್ಯಾ.‌ಅಜಯ್ ರಸ್ತೋಗಿ ದ್ವಿಸದಸ್ಯ ಪೀಠ ಈ ಸೂಚನೆ ನೀಡಿದ್ದು, 2014ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಬೇಕು ಎಂದು ತಿಳಿಸಿದೆ.

‘ಪರವಾನಗಿ ಇಲ್ಲದೆ ನದಿ ನೀರಿನ ಸರಾಗ ಹರಿವನ್ನು ತಡೆಯುವುದಕ್ಕೆ ಅಥವಾ ಮಲಪ್ರಭಾ ನದಿಯತ್ತ ನೀರನ್ನು ತಿರುಗಿಸುವುದಕ್ಕೆ ನಿರ್ಬಂಧ ಹೇರಿ 2014ರ ಏಪ್ರಿಲ್ 17ರಂದು ಮಹಾದಾಯಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಮೀರಲಾಗದು’ ಎಂದು ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿತು.

ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಕೂಡಲೇ ಉತ್ತರ ಕರ್ನಾಟಕದ ಜನತೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ತಿರುವು ಯೋಜನೆಗೆ ಅಗತ್ಯ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿರುವುದು ಸರಿಯಲ್ಲ ಎಂದು ಗೋವಾ ಪರ ವಕೀಲ ಮುಕುಲ್‌ ರೋಹಟ್ಗಿ ನ್ಯಾಯಪೀಠಕ್ಕೆ ತಿಳಿಸಿದರು.

‘ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರದ ಒಪ್ಪಿಗೆ ಪಡೆಯಬೇಕು ಎಂಬ ನಿಬಂಧನೆ ಇದ್ದರೂ ಯಡಿಯೂರಪ್ಪ ಅವರು ಈ ರೀತಿಯ ಹೇಳಿಕೆ ನೀಡುವ ಮೂಲಕ ಗೋವಾದ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ಅವರು ಆರೋಪಿಸಿದರು.

ಕಣಿವೆ ವ್ಯಾಪ್ತಿಯ ಆಚೆ ನೀರನ್ನು ತಿರುವಿದರೆ ನದಿಯ ನೈಸರ್ಗಿಕ ಹರಿವಿಗೆ ಧಕ್ಕೆಯಾಗಲಿದೆ. ಇದರಿಂದ ಜೀವವೈವಿಧ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದ್ದು, ಕೇಂದ್ರ ಸರ್ಕಾರವು ಯೋಜನೆಗಳಿಗೆ ಅನುಮೋದನೆ ನೀಡದಂತೆ ನಿರ್ದೇಶನ ನೀಡಬೇಕು. ಕೇಂದ್ರ ಜಲ ಆಯೋಗದ ಅಧಿಕಾರಿಗಳ ಜಂಟಿ ಪರಿಶೀಲನೆಗೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.

‘ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು’ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಅವರನ್ನು ಒಳಗೊಂಡಿರುವ ಪೀಠ, ಅಂತರರಾಜ್ಯ ಜಲ ವಿವಾದ ಕಾಯ್ದೆ– 1956ರ ಸೆಕ್ಷನ್ 5 (3)ರ ಅಡಿ ಸ್ಪಷ್ಟನೆ ಕೋರಿ ಕಣಿವೆ ವ್ಯಾಪ್ತಿಯ ರಾಜ್ಯಗಳು ನ್ಯಾಯಮಂಡಳಿಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಬಾಕಿ ಇರುವುದರಿಂದ ಯಾವುದೇ ರೀತಿಯ ನಿರ್ದೇಶನ ನೀಡಲಾಗದು ಎಂದು ಹೇಳಿತು.

ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಜುಲೈ 15ರಿಂದ ನಡೆಸಲು ನಿರ್ಧರಿಸಿರುವ ನ್ಯಾಯಪೀಠ, ಈ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಫೆಬ್ರುವರಿ 20ರಂದು ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT