ಸೋಮವಾರ, ನವೆಂಬರ್ 30, 2020
23 °C
ಯಡಿಯೂರಪ್ಪ ಆಧುನಿಕ ಬಸವಣ್ಣನಾಗಿ ಹೊರಹೊಮ್ಮಿದ್ದಾರೆ ಎಂದು ಸ್ವಾಮೀಜಿಗಳ ಬಣ್ಣನೆ

ಯಡಿಯೂರಪ್ಪರನ್ನು ಕೆಣಕಿದರೆ ಬೀದಿಗಿಳಿಯುತ್ತೇವೆ: ಮಠಾಧೀಶರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬಸವ ತತ್ವದಂತೆ ನಡೆಯುತ್ತಿರುವ, ಕೊಡುಗೈ ದಾನಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸ್ವಪಕ್ಷದವರು ಅಥವಾ ವಿರೋಧ ಪಕ್ಷದವರು ಕೆಣಕಿದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಕಲ್ಯಾಣ ಕರ್ನಾಟಕ ಭಾಗದ ವೀರಶೈವ–ಲಿಂಗಾಯತ ಮಠಾಧೀಶರು ಎಚ್ಚರಿಕೆ ನೀಡಿದರು.

ಈ ಭಾಗಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದ್ದಕ್ಕಾಗಿ ಯಡಿಯೂರಪ್ಪ ಅವರಿಗೆ ಮಂಗಳವಾರ ‘ಕಲ್ಯಾಣ ಕರ್ನಾಟಕ ಮಠಾಧೀಶರ ವೇದಿಕೆ’ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಹಲವು ಮಠಾಧೀಶರು ಯಡಿಯೂರಪ್ಪ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಭಾಷಣದಲ್ಲಿ ದೇವಾಪುರದ ಶಿವಮೂರ್ತಿ ಶಿವಾಚಾರ್ಯರು, ‘ಈ ಭಾಗದ ಮಠಗಳು ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ ದಾಸೋಹ ನೀಡುತ್ತಿವೆ. ಸಂಕಷ್ಟದಲ್ಲಿದ್ದ ಮಠಗಳಿಗೆ ಯಡಿಯೂರಪ್ಪ ಅವರು ಆರ್ಥಿಕ ನೆರವು ನೀಡಿದ್ದಾರೆ’ ಎಂದು ಸ್ಮರಿಸಿದರು.

‘ಹೈದರಾಬಾದ್‌ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸುವ ಮೂಲಕ ಅವರು ಆಧುನಿಕ ಬಸವಣ್ಣನಾಗಿ ಹೊರಹೊಮ್ಮಿದ್ದಾರೆ. ಅವರನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ’ ಎಂದರು.

ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಕಬ್ಬನ್ನು ಗಾಣದಲ್ಲಿ ಹಾಕಿ ಅರೆದರೂ ಅದರ ಸಿಹಿ ಕಡಿಮೆ ಆಗದು. ಬೆಂಕಿಯಲ್ಲಿ ಕಾಯಿಸಿದರೂ ಚಿನ್ನ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತದೆ. ಸ್ವಪಕ್ಷೀಯರು ಹಾಗೂ ವಿಪಕ್ಷದವರು ಎಷ್ಟೇ ಕಿರುಕುಳ ಕೊಟ್ಟರೂ ಹೊಳಪು ಕಡಿಮೆಯಾಗುವುದಿಲ್ಲ’ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂಬ ಕೆಲ ಮಠಾಧೀಶರ ಹೊಗಳಿಕೆಯನ್ನು ನಯವಾಗಿಯೇ ಆಕ್ಷೇಪಿಸಿದ ನಾಲವಾರ ಮಠದ ಸಿದ್ಧತೋಟೇಂದ್ರ ಶಿವಾಚಾರ್ಯರು, ‘ಸ್ವಾಮೀಜಿಗಳು ಸೇರಿದಂತೆ ಯಾರೂ ಬಸವಣ್ಣನವರ ವ್ಯಕ್ತಿತ್ವದ ಸಮೀಪ‍ಕ್ಕೂ ಸುಳಿಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಬಸವತತ್ವವನ್ನು ಎದೆಯಲ್ಲಿಟ್ಟುಕೊಂಡು ಆಚರಿಸುತ್ತಿರುವ ಬಸವ ಅನುಯಾಯಿ ಎನ್ನಬಹುದು’ ಎಂದರು.

‘ನನಗೆ ಗೊತ್ತಿರುವುದು ಒಂದೇ ಜಾತಿ, ಅದು ಮನುಷ್ಯ ಜಾತಿ. ಎಲ್ಲ ಜನರ ಅಭ್ಯುದಯಕ್ಕಾಗಿ ಕೆಲಸಮಾಡುತ್ತೇನೆ’ ಎಂದು ಬಳಿಕ ಯಡಿಯೂರಪ್ಪ ಇದಕ್ಕೆ ಪ್ರತಿಕ್ರಿಯಿಸಿದರು.

ನಂತರ ಸುಲಫಲ ಮಠಕ್ಕೆ ತೆರಳಿದ ಯಡಿಯೂರಪ್ಪ ಅವರು, ಅಲ್ಲಿ ಬಸವ ಭವನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಠದ  ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ‘ಈ ಸರ್ಕಾರದ ಅವಧಿ ಮುಗಿಯುವವರೆಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರಬೇಕು. ಪದಚ್ಯುತಿಗೊಳಿಸಿ ದರೆ ಎಲ್ಲ ಮಠಾಧೀಶರು ದೆಹಲಿಯಲ್ಲಿ ಧರಣಿ ನಡೆಸುತ್ತೇವೆ’ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದ ಬಿಜೆಪಿ ಸಂಸದ ಜಯಸಿದ್ಧೇಶ್ವರ ಸ್ವಾಮೀಜಿ, ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಡಾ.ಶರಣಬಸವಪ್ಪ ಅಪ್ಪ, ಶಾಖಾಪುರ ಮಠದ ಸಿದ್ದರಾಮ ಶಿವಾಚಾರ್ಯರು, ಮಾದನ ಹಿಪ್ಪರಗಾದ ಶಿವಲಿಂಗ ಸ್ವಾಮೀಜಿ, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು, ಕಡಕೋಳದ ಡಾ.ರುದ್ರಮುನಿ ಶಿವಾಚಾರ್ಯರು, ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಕಡಗಂಚಿಯ ಶಾಂತಲಿಂಗ ಶಿವಾಚಾರ್ಯರು, ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು