ಮಂಗಳವಾರ, ಸೆಪ್ಟೆಂಬರ್ 17, 2019
22 °C
ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ l ಸಿ.ಎಂ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ

ಶಿಕ್ಷಕರ ದಿನಾಚರಣೆ ‌l ಶಿಕ್ಷಕರ ದೇಣಿಗೆ ಶಾಲೆಗಳಿಗೇ ಬಳಕೆ

Published:
Updated:
Prajavani

ಬೆಂಗಳೂರು: ‘ಪರಿಹಾರ ನಿಧಿಗೆ ಶಿಕ್ಷಕರು ನೀಡಿರುವ ಒಂದು ದಿನದ ವೇತನ ₹ 30 ಕೋಟಿಯನ್ನು ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆ ಬಳಸುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ‘ಹಳ್ಳಿಯ ಜನರಿಗೆ ಮಾರ್ಗದರ್ಶನ ಮಾಡುವುದರ ಜತಗೆ, ವಿದ್ಯಾರ್ಥಿಗಳನ್ನು ತಿದ್ದುವ ದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ’ ಎಂದು ಹೇಳಿದರು.

‘ಪ್ರಾಮಾಣಿಕತೆಗೆ ಮತ್ತೊಂದು ಹೆಸರಿನಂತಿರುವ ಸುರೇಶ್‌ ಕುಮಾರ್‌ ಶಿಕ್ಷಣ ಸಚಿವರಾಗಿದ್ದಾರೆ. ಒಂದು ರೂಪಾಯಿ ದುರ್ಬಳಕೆ ಆಗದಂತೆ ಇಲಾಖೆ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ. ಶಿಕ್ಷಕರ ವರ್ಗಾವಣೆ ಗೊಂದಲವನ್ನು ಪರಿಹರಿಸುವ ಕೆಲಸವನ್ನು ಮಾಡಲಿದ್ದಾರೆ’ ಎಂದರು.

ಕಡ್ಡಾಯ ವರ್ಗಾವಣೆ–ಸಮಿತಿ ರಚನೆ: ‘ಶಿಕ್ಷಕರ ಕಡ್ಡಾಯ ವರ್ಗಾವಣೆ ಎಂಬ ಪದವೇ ತಪ್ಪು. ಮುಂದಿನ ವರ್ಷ
ದಿಂದ ಕಡ್ಡಾಯ ವರ್ಗಾವಣೆಯನ್ನು ರದ್ದುಪಡಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

‘ಈ ತೀರ್ಮಾನ ಜಾರಿಗೆ ತರುವ ನಿಟ್ಟಿನಲ್ಲಿ ವರ್ಗಾವಣೆ ಕಾಯ್ದೆಗೆ ಯಾವ ರೀತಿಯ ತಿದ್ದುಪಡಿ ತರಬೇಕು ಎಂಬುದನ್ನು ತಿಳಿದುಕೊಳ್ಳಲು ಮೇಲ್ಮನೆ ಸದಸ್ಯರ ಸಮಿತಿ ರಚಿಸಲಾಗುವುದು. ಸಮಿತಿಯ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಇದೇ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯ
ದರ್ಶಿ ಚಂದ್ರಶೇಖರ ನುಗ್ಲಿ ಮತ್ತು ಇತರ ಪದಾಧಿಕಾರಿಗಳು ಪರಿಹಾರ ನಿಧಿಗೆ ₹ 30 ಕೋಟಿ ಮೊತ್ತದ ಚೆಕ್‌ ಅನ್ನು ಸಿ.ಎಂ ಅವರಿಗೆ ಹಸ್ತಾಂತರಿಸಿದರು.

ಪ್ರಶಸ್ತಿ ಪ್ರದಾನ: ಪ್ರಾಥಮಿಕ ಶಾಲೆಯ 20, ಪ್ರೌಢಶಾಲೆಯ 11, ಪದವಿಪೂರ್ವ ಕಾಲೇಜುಗಳ 10 ಹಾಗೂ
ಬೆಂಗಳೂರು ಉತ್ತರ ಜಿಲ್ಲೆಯ 11 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಅವರು ಪ್ರದಾನ ಮಾಡಿದರು.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದಲೂ 35 ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗಿದ್ದು, ಅವುಗಳನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪ್ರದಾನ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ಬು.ಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹಿಲ್ಲೂರಿನ ಸರ್ಕಾರಿ ಪ್ರೌಢಶಾಲೆಗಳಿಗೆ ಮಲೆನಾಡ ಗಾಂಧಿ ಎಚ್‌.ಜಿ.ಗೋವಿಂದೇಗೌಡ ಅತ್ಯುತ್ತಮ ಶಾಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿಂದಿನ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

‘ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತುಂಬಿತ್ತು. ಹಿರಿಯ ಅಧಿಕಾರಿಗಳು ನನ್ನ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ’ ಎಂದು ಮೇಲ್ಮನೆ ಸದಸ್ಯ ಪುಟ್ಟಣ್ಣ ಹೇಳಿದರು.

‘ಮನುಷ್ಯತ್ವ ಇರುವ ಅಧಿಕಾರಿಗಳೇ ಇಲಾಖೆಯಲ್ಲಿ ಇಲ್ಲ. ಕ್ಯಾನ್ಸರ್‌ ಪೀಡಿತ ಶಿಕ್ಷಕರನ್ನೂ ಸರದಿ ಸಾಲಿನಲ್ಲಿ ನಿಲ್ಲಿಸಿದ ಮಹನೀಯರು ಇಲ್ಲಿದ್ದಾರೆ. ಡಿಡಿಪಿಐ, ಬಿಇಒ ಕಚೇರಿಗಳಂತೂ ಭ್ರಷ್ಟರಿಂದ ತುಂಬಿಹೋಗಿದೆ. ಕಡ್ಡಾಯ ವರ್ಗಾವಣೆ ಹೆಸರಲ್ಲಿ ಶಿಕ್ಷಕರಿಗೆ ಶಿಕ್ಷೆ ಕೊಡುವ ಬದಲಿಗೆ ಇಂಥ ಭ್ರಷ್ಟರಿಗೆ ಶಿಕ್ಷೆ ಕೊಡಿಸಬೇಕು’ ಎಂದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಮೂಲಕ ಮುದುಡಿದ ತಾವರೆ ಅರಳಿದೆ, ಒಬ್ಬ ಪ್ರಾಮಾಣಿಕ ವ್ಯಕ್ತಿ ಶಿಕ್ಷಣ ಸಚಿವರಾಗಿದ್ದಾರೆ. ಪರಿಸ್ಥಿತಿ ಇನ್ನಾದರೂ ಸುಧಾರಿಸುವ ವಿಶ್ವಾಸ ಇದೆ’ ಎಂದರು.

Post Comments (+)