ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆಯಲ್ಲಿ ವಂಚನೆ ಬಯಲಿಗೆ

ವರ್ಗಾವಣೆ ಸ್ಥಗಿತ ಇಲ್ಲ– ಶಿಕ್ಷಣ ಸಚಿವರ ಸ್ಪಷ್ಟನೆ
Last Updated 29 ಜೂನ್ 2019, 19:08 IST
ಅಕ್ಷರ ಗಾತ್ರ

ಬೆಂಗಳೂರು: ಪತಿ ನಿಜವಾಗಿಯೂ ಸರ್ಕಾರಿ ನೌಕರನಲ್ಲ, ಆದರೂ ಆತ ಸರ್ಕಾರಿ ನೌಕರ ಎಂದು ತೋರಿಸುವ ನಕಲಿ ಪ್ರಮಾಣಪತ್ರ ನೀಡಿದ ಕೆಲವು ಪ್ರಕರಣಗಳು ಈ ಬಾರಿಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಬೆಳಕಿಗೆ ಬಂದಿವೆ.

‘ತೀವ್ರ ಅನಾರೊಗ್ಯ ಕಾರಣ ನೀಡಿ ವರ್ಗಾವಣೆ ಕೋರಿಕೆಗೆ ಅವಕಾಶ ಇದೆ. ಇಲ್ಲೂ ಕೆಲವು ಮಂದಿ ನಕಲಿ ದಾಖಲೆ ಸೃಷ್ಟಿಸಿದ್ದು ಬೆಳಕಿಗೆ ಬಂದಿದೆ. ಇದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ.ಜಾಫರ್‌ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಶಿಕ್ಷಣ ಇಲಾಖೆ ವಿದ್ಯಾರ್ಥಿ ಸಾಧನೆ ಪರಿಶೀಲನಾ ಪದ್ಧತಿ ಮಾಹಿತಿ (ಎಸ್‌ಎಟಿಎಸ್) ಅಳವಡಿಸಿಕೊಂಡಿದೆ. ಇದರಲ್ಲಿ ಶಿಕ್ಷಕರ ಪ್ರತಿಯೊಂದು ಮಾಹಿತಿಯೂ ದೊರೆಯುತ್ತದೆ. ನಕಲಿ ದಾಖಲೆ ಸಲ್ಲಿಸಿದ್ದೇ ಅದರೆ ಅವರು ತಕ್ಷಣ ಸಿಕ್ಕಿ ಬೀಳುತ್ತಾರೆ. ಹೀಗಾಗಿ, ಈ ಬಾರಿ ವರ್ಗಾವಣೆ ಪ್ರಕ್ರಿಯೆಯ ಹಂತದಲ್ಲೇ ವಂಚನೆ ಬೆಳಕಿಗೆ ಬಂದಿದೆ’ ಎಂದರು.

ವರ್ಗಾವಣೆ ನಿಲ್ಲುವುದಿಲ್ಲ:‘ಇದೀಗ ನಡೆಯುತ್ತಿರುವವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂಬ ಒತ್ತಡ ಹಲವಾರು ಜನರಿಂದ ಮತ್ತು ಕೆಲವು ವಿಧಾನ ಪರಿಷತ್ ಸದಸ್ಯರಿಂದಲೂ ಬರುತ್ತಿದೆ. ಆದರೆ ಇದಕ್ಕೆ ಅವಕಾಶ ನೀಡುವುದಿಲ್ಲ. ಈ ಮೊದಲೇ ನಿಗದಿಪಡಿಸಿದಂತೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್‌.ಶ್ರೀನಿವಾಸ್‌ ಹೇಳಿದರು.

ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಶನಿವಾರ ಇಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವರ್ಗಾವಣೆ ನಿಲ್ಲಿಸುವಂತೆ ನನ್ನ ಮೇಲೆ ಭಾರಿ ಒತ್ತಡ ಇದೆ. ಆದರೆ ನಾನು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗಿಲ್ಲ. ಯಾರಿಗ ನಿಜವಾಗಿಯೂ ವರ್ಗಾವಣೆ ಆಗಬೇಕೋ ಅವರಿಗೆ ನ್ಯಾಯ ಸಿಗಬೇಕು. ವರ್ಗಾವಣೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT