ತೇಜಸ್ವಿ ಪರ ತೇಜಸ್ವಿನಿ ಮತ ಯಾಚನೆ

ಗುರುವಾರ , ಏಪ್ರಿಲ್ 25, 2019
31 °C

ತೇಜಸ್ವಿ ಪರ ತೇಜಸ್ವಿನಿ ಮತ ಯಾಚನೆ

Published:
Updated:
Prajavani

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಬಳಿಕ ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ತೇಜಸ್ವಿನಿ ಅನಂತಕುಮಾರ್ ಅವರು ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದರು.

‘ಪಕ್ಷದ ವರಿಷ್ಠರು ಟಿಕೆಟ್‌ ನಿರಾಕರಣೆಗೆ ಸ್ಪಷ್ಟನೆ ನೀಡಬೇಕು’ ಎಂದು ತೇಜಸ್ವಿನಿ ಪಟ್ಟು ಹಿಡಿದಿದ್ದರು. ಅಲ್ಲಿಯವರೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದರು. ಬಳಿಕ ಅವರನ್ನು ರಾಜ್ಯ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿತ್ತು. ಬನಶಂಕರಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ಶೋ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ‘ಏಪ್ರಿಲ್‌ 8ರಿಂದ ಅವರು ಪ್ರಚಾರದಲ್ಲಿ ತೊಡಗಲಿದ್ದಾರೆ’ ಎಂದು ತೇಜಸ್ವಿ ಸೂರ್ಯ ಬೆಂಬಲಿಗರು ಹೇಳಿದ್ದರು. ಆದರೆ, ಅವರು ಪ್ರಚಾರಕ್ಕೆ ಬಂದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಲಿದ್ದು, ಮುನ್ನಾದಿನವಾದ ಶುಕ್ರವಾರ ಚಿಕ್ಕಪೇಟೆ ಪರಿಸರದಲ್ಲಿ ತೇಜಸ್ವಿನಿ ಮತ ಕೇಳಿದರು. ಪ್ರಚಾರದ ಛಾಯಾಚಿತ್ರಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅವರ ಬೆಂಬಲಿಗರಾದ ಗೀತಾ ನಾಯಕ್‌ ಎಂಬುವರು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಟೀಕಿಸಿದ್ದಾರೆ. ‘ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಾನು 1989ರಿಂದ ಬಿಜೆಪಿಗೆ ಮತ ಹಾಕಿದ್ದೆ. ಆದರೆ, ಈ ಸಲ ನೋಟಾ ಹಾಕುತ್ತೇನೆ. ಅರ್ಹ ಅಭ್ಯರ್ಥಿಗೆ ಈ ಸಲ ಟಿಕೆಟ್‌ ತಪ್ಪಿಸಲಾಗಿದೆ. ಬಿ.ಎಲ್‌.ಸಂತೋಷ್‌ ಹಾಗೂ ಇತರರು ಮಾಡಿದ್ದು ಸರಿಯಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !