ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್ ಮೋಹ ಜಾಲ: ಕಿರುತೆರೆ ನಟಿಯರ ಗಾಳ?

Last Updated 29 ನವೆಂಬರ್ 2019, 2:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಜನಪ್ರತಿನಿಧಿಗಳ ಹನಿಟ್ರ್ಯಾಪ್‌ ಪ್ರಕರಣದ ತನಿಖೆಯಲ್ಲಿ ಹಲವು ಸಂಗತಿಗಳು ಬಯಲಾಗುತ್ತಿವೆ. ಸಿಸಿಬಿ ಪೊಲೀಸರು ಸದ್ಯ ಬಂಧಿಸಿರುವ ಆರೋಪಿಗಳು, ಮಧ್ಯಪ್ರದೇಶ ಮಾದರಿಯಲ್ಲೇ ಜನಪ್ರತಿನಿಧಿಗಳ ಹನಿಟ್ರ್ಯಾಪ್‌ಗೆ ಬಲೆ ಹೆಣೆದಿದ್ದ ಮಾಹಿತಿ ಹೊರಬಿದ್ದಿದೆ.‌

‘ಆಯ್ದ ಜನಪ್ರತಿನಿಧಿಗಳನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಲು ಕಿರುತೆರೆ ನಟಿಯರನ್ನು ಬಳಕೆ ಮಾಡಲಾಗಿತ್ತು. ಈ ಅಂಶವನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾರೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಪ್ರಕರಣದ ಪ್ರಮುಖ ಆರೋಪಿ ರಾಘವೇಂದ್ರ ಅಲಿಯಾಸ್ ರಘು ಮನೆಯಲ್ಲಿ ಸಿ.ಡಿ ಸಿಕ್ಕಿವೆ. ಆತನ ಬಳಿಯ ಮೊಬೈಲ್‍ಗಳಲ್ಲೂ ಹನಿಟ್ರ್ಯಾಪ್‍ಗೆ ಸಂಬಂಧಪಟ್ಟ ಮಾಹಿತಿ ಸಿಕ್ಕಿದೆ. ಆರೋಪಿಗಳು ಹಲವು ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಜಾಲದಲ್ಲಿ ಸಿಲುಕಿಸಿರುವ ಅನುಮಾನವಿದೆ. ಇನ್ನು ಹಲವರನ್ನು ಸಿಲುಕಿಸಲು ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಬಂಧಿಸಲಾಗಿರುವ ಪುಷ್ಪಾ, ಆರೋಪಿ ರಾಘವೇಂದ್ರನ ಸ್ನೇಹಿತೆ. ಕಿರುತೆರೆಯಲ್ಲಿ ಪ್ರಸಾಧನ ಕೆಲಸ ಮಾಡುತ್ತಿದ್ದಳು. ಬಂಧಿತ ಇನ್ನೊಬ್ಬ ಯುವತಿ ನಟಿ ಆಗಿದ್ದಾಳೆ. ಈ ಇಬ್ಬರನ್ನು ಬಳಸಿ ಜನಪ್ರತಿನಿಗಳನ್ನು ಹನಿಟ್ರ್ಯಾಪ್‌ಗೆ ಕೆಡವಿದ್ದರು. ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದರು. ಇಂಥ ವಿಡಿಯೋಗಳಿಂದ ತಮ್ಮ ಜೀವನ ಹಾಳಾಗುತ್ತದೆ ಎಂಬ ಭಯದಲ್ಲಿ ಹಲವರು ದೂರು ನೀಡಿಲ್ಲವೆಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಮೂಲಗಳು ತಿಳಿಸಿವೆ.

‘ಜನಪ್ರತಿನಿಧಿಗಳೊಬ್ಬರು ನೀಡಿದ್ದ ದೂರು ಆಧರಿಸಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಅತ್ತ ಆರೋಪಿಗಳ ಹತ್ಯೆಗೆ ಜನಪ್ರತಿನಿಧಿಯೊಬ್ಬರು ಸುಪಾರಿ ನೀಡಿದ್ದರು. ಸುಪಾರಿ ಪಡೆದಿದ್ದ ಆರೋಪಿಗಳು ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಅವಾಗಲೇ ಈ ಜಾಲದ ಆರೋಪಿಗಳ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಬಳಿಕವೇ ಚುರುಕಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಹನಿಟ್ರ್ಯಾಪ್‌ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.’

ಅಧ್ಯಯನ ಮಾಡುತ್ತಿದ್ದೇವೆ, ವಾಸ್ತವ್ಯಕ್ಕೆ ಸ್ಥಳಬೇಕು

‘ಕಾಲೇಜು ಯುವತಿಯರ ಹೆಸರಿನಲ್ಲಿ ಹುಡುಗಿಯರನ್ನು ರಘು ತಯಾರು ಮಾಡುತ್ತಿದ್ದ. ಅದೇ ಯುವತಿಯರು ಜನಪ್ರತಿನಿಧಿಗಳ ಬಳಿಗೆ ತೆರಳಿ, ‘ಅಧ್ಯಯನ ಮಾಡುತ್ತಿದ್ದೇವೆ. ವಾಸ್ತವ್ಯಕ್ಕೆ ಸ್ಥಳ ಬೇಕು’ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಜನಪ್ರತಿನಿಧಿಗಳಿಗೆ ಹುಡುಗಿಯರ ಮೊಬೈಲ್‌ ನಂಬರ್ ಕೊಡಿಸಿ ಪರಿಚಯ ಮಾಡಿಸುತ್ತಿದ್ದ. ಅದನ್ನು ನಂಬಿದ ಅವರು, ನಂಬರ್ ಪಡೆದ ಯುವತಿಯರು ಪದೇ ಪದೇ ಕರೆ ಮಾಡಿ ಶಾಸಕರು, ಮಾಜಿ ಸಚಿವರರನ್ನು ಖೆಡ್ಡಾಗೆ ಬೀಳಿಸಿಕೊಳ್ಳುತ್ತಿದ್ದರು’ ಎಂದೂ ಹೇಳಲಾಗಿದೆ.

ಅಶ್ಲೀಲ ವಿಡಿಯೊ; ಆರೋಪಿ ಸೆರೆ

ರೋಣ (ಗದಗ ಜಿಲ್ಲೆ): ಶಾಸಕರೊಬ್ಬರಿಗೆ ಸೇರಿದ್ದು ಎನ್ನಲಾದ ಹನಿಟ್ರ್ಯಾಪ್‌ಗೆ ಸಂಬಂಧಿಸಿದ ಅಶ್ಲೀಲ ವಿಡಿಯೊ ತುಣುಕು ಮತ್ತು ಚಿತ್ರಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ ಆರೋಪದ ಮೇರೆಗೆ ರೋಣ ತಾಲ್ಲೂಕಿನ ಮುಗಳಿ ಗ್ರಾಮದ ನಿವಾಸಿ ಉದಯ ದೇಸಾಯಿ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉದಯ ದೇಸಾಯಿ, ಗದಗ ಕ್ಷೇತ್ರದ ಮಾಜಿ ಶಾಸಕರೊಬ್ಬರ ಸಂಬಂಧಿ. ಇವರ ವಿರುದ್ಧ ರೋಣ ಪಟ್ಟಣದ ಹೊರಪೇಟೆ ನಿವಾಸಿ ಮಂಜುನಾಥ ಸಂಗಟಿ ಎನ್ನುವರು ನ.26ರಂದು ದೂರು ನೀಡಿದ್ದರು.

‘ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT